

ಮ್ಯಾಂಚೆಸ್ಟರ್: ವೆಸ್ಟ್ ಇಂಡೀಸ್ ತಂಡದ ಆರಂಭಿಕ ಹೊಡೆತಕ್ಕೆ ನಲುಗಿದ್ದ ಆತಿಥೇಯ ಇಂಗ್ಲೆಂಡ್ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರತಿಹೋರಾಟ ತೋರಲು ಯಶಸ್ವಿಯಾಗಿದೆ. ಆರಂಭಿಕ ಬ್ಯಾಟ್ಸ್ಮನ್ ಡೊಮಿನಿಕ್ ಸಿಬ್ಲೆ (101ರನ್, 316ಎಸೆತ, 4ಬೌಂಡರಿ) ಹಾಗೂ ಆಲ್ರೌಂಡರ್ ಬೆನ್ ಸ್ಟೋಕ್ಸ್ (103ರನ್, 258 ಎಸೆತ, 10 ಬೌಂಡರಿ, 1 ಸಿಕ್ಸರ್) ಜೋಡಿ ಮುರಿಯದ 4ನೇ ವಿಕೆಟ್ಗೆ 187 ರನ್ ಪೇರಿಸಿದ ಫಲವಾಗಿ ತಂಡ ಬಲಿಷ್ಠ ಸ್ಥಿತಿಯಲ್ಲಿದೆ. ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3 ವಿಕೆಟ್ಗೆ 207 ರನ್ಗಳಿಂದ 2ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಭೋಜನ ವಿರಾಮದ ಬಳಿಕ 3 ವಿಕೆಟ್ಗೆ 268 ರನ್ ಕಲೆಹಾಕಿ ಬ್ಯಾಟಿಂಗ್ ಮುಂದುವರಿಸಿದೆ.
ಸಿಬ್ಲೆ-ಸ್ಟೋಕ್ಸ್ ಅಬ್ಬರ
ಕ್ರಮವಾಗಿ 86 ಹಾಗೂ 59 ರನ್ಗಳಿಂದ ಎರಡನೇ ದಿನದಾಟ ಆರಂಭಿಸಿದ ಡೊಮಿನಿಕ್ ಸಿಬ್ಲೆ ಹಾಗೂ ಬೆನ್ ಸ್ಟೋಕ್ಸ್ ಜೋಡಿ ಒಂದು ಅವಧಿ ಪೂರ್ತಿ ಬ್ಯಾಟಿಂಗ್ ಕಾಯ್ದುಕೊಂಡಿತು. ಮೊದಲ ದಿನದಾಟದ ಆರಂಭದಲ್ಲೇ ಮಿಂಚಿನ ದಾಳಿ ನಡೆಸಿದ ವಿಂಡೀಸ್ ಬೌಲರ್ಗಳು ಈ ಜೋಡಿ ಬೇರ್ಪಡಿಸಲು ವಿಫಲರಾದರು. ಮೊದಲ ದಿನದಾಟದ ಕಡೇ ಹಂತದಲ್ಲಿ ಸಿಬ್ಲೆ 68 ರನ್ಗಳಿದ್ದ ವೇಳೆ ಗ್ಯಾಬ್ರಿಯಲ್ ಎಸೆತದಲ್ಲಿ ಹೋಲ್ಡರ್ ಕ್ಯಾಚ್ ಕೈಚೆಲ್ಲಿದ್ದರು. ಇದರ ಲಾಭ ಗಿಟ್ಟಿಸಿಕೊಂಡ ಸಿಬ್ಲೆ ಟೆಸ್ಟ್ ಕ್ರಿಕೆಟ್ನಲ್ಲಿ 2ನೇ ಶತಕ ಸಿಡಿಸಿದರು. ಭೋಜನ ವಿರಾಮದ ಮೊದಲ ಓವರ್ ನಲ್ಲಿ ಸ್ಟೋಕ್ಸ್ ಶತಕ ಪೂರೈಸಿದರು. ಈ ಜೋಡಿ ಬೇರ್ಪಡಿಸಲು ವಿಂಡೀಸ್ ಬೌಲರ್ಗಳು ವಿವಿಧ ಪ್ರಯೋಗ ನಡೆಸಿದರೂ ಪ್ರಯೋಜನವಾಗಲಿಲ್ಲ.
ಇಂಗ್ಲೆಂಡ್: ಎರಡನೇ ದಿನದಾಟದ ಭೋಜನ ವಿರಾಮದ ನಂತರ 100 ಓವರ್ಗಳಲ್ಲಿ 3 ವಿಕೆಟ್ಗೆ 268 (ಡೊಮಿನಿಕ್ ಸಿಬ್ಲೆ 101*, ಸ್ಟೋಕ್ಸ್ 103*, ರೂಟ್ 23, ರೋಸ್ಟನ್ ಚೇಸ್ 55ಕ್ಕೆ 2, ಅಲ್ಜಾರಿ ಜೋಸೆಫ್ 63ಕ್ಕೆ 1).