ಶ್ರೀಲಂಕಾ ಎದುರು ಇನಿಂಗ್ಸ್ ಹಿನ್ನಡೆ ಭೀತಿಯಲ್ಲಿ ಪ್ರವಾಸಿ ಇಂಗ್ಲೆಂಡ್

joe root and lasit for web
Published on

ಗಾಲೆ: ನಾಯಕ ಜೋ ರೂಟ್ (186 ರನ್, 309 ಎಸೆತ, 18 ಬೌಂಡರಿ) ಏಕಾಂಗಿ ನಿರ್ವಹಣೆ ನಡುವೆಯೂ ಲಸಿತ್ ಎಂಬುಲ್ಡೆನಿಯಾ (132ಕ್ಕೆ7) ಮಾರಕ ದಾಳಿಗೆ ನಲುಗಿದ ಪ್ರವಾಸಿ ಇಂಗ್ಲೆಂಡ್ ತಂಡ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎದುರು ಇನಿಂಗ್ಸ್ ಹಿನ್ನಡೆ ಭೀತಿಯಲ್ಲಿದೆ. ಗಾಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 2 ವಿಕೆಟ್‌ಗೆ 98 ರನ್‌ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ ಭಾನುವಾರದ ಅಂತ್ಯಕ್ಕೆ 9 ವಿಕೆಟ್‌ಗೆ 339 ರನ್‌ಗಳಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 42 ರನ್ ಪೇರಿಸಬೇಕಿದೆ. ಶ್ರೀಲಂಕಾ ಮೊದಲ ಇನಿಂಗ್ಸ್ 381 ರನ್ ಗಳಿಸಿತ್ತು.

67 ರನ್‌ಗಳಿಂದ ಜೋ ರೂಟ್ ಹಾಗೂ 24 ರನ್‌ಗಳಿಂದ ದಿನದಾಟ ಆರಂಭಿಸಿದ ಬೇರ್‌ಸ್ಟೋ ಜೋಡಿಗೆ ಆರಂಭದಲ್ಲೇ ಎಂಬುಲ್ಡೆನಿಯಾ ಆಘಾತ ನೀಡಿದರು. ಬಳಿಕ ಬಂದ ಡಾನ್ ಲಾವ್ರೆನ್ಸ್ (3) ಕೂಡ ನಿರಾಸೆ ಅನುಭವಿಸಿದರು. ಬಳಿಕ ರೂಟ್ ಜತೆಯಾದ ಜೋಸ್ ಬಟ್ಲರ್ (55ರನ್, 95 ಎಸೆತ, 7 ಬೌಂಡರಿ) 5ನೇ ವಿಕೆಟ್‌ಗೆ 97 ರನ್ ಜತೆಯಾಟವಾಡಿ ಇನಿಂಗ್ಸ್‌ಗೆ ಚೇತರಿಕೆ ನೀಡಿತು. ಲಂಕಾ ಬೌಲರ್‌ಗಳಿಗೆ ದುಸ್ವಪ್ನವಾಗಿದ್ದ ಈ ಜೋಡಿಗೆ ರಮೇಶ್ ಮೆಂಡೀಸ್ ಆಘಾತ ನೀಡಿದರು. ಅರ್ಧಶತಕ ಪೂರೈಸಿದ ಬೆನ್ನಲ್ಲೇ ಬಟ್ಲರ್ ಮೆಂಡೀಸ್‌ಗೆ ವಿಕೆಟ್ ನೀಡಿದರು. ಬಳಿಕ ಕ್ರೀಸ್‌ನಲ್ಲಿ ಏಕಾಂಗಿ ನಿರ್ವಹಣೆ ತೋರಿದ ರೂಟ್ ಬಾಲಂಗೋಚಿಗಳ ನೆರವಿನಿಂದ ಪ್ರಬಲ ಪೈಪೋಟಿ ನೀಡಿದರು. ದಿನದಾಟದ ಕಡೆಯಲ್ಲಿ ಎಡವಿದ ರೂಟ್ ಇಲ್ಲದ ರನ್‌ಕದಿಯಲು ಯತ್ನಿಸಿ ರನೌಟ್ ಬಲೆಗೆ ಬಿದ್ದರು.

ಶ್ರೀಲಂಕಾ: 381, ಇಂಗ್ಲೆಂಡ್: 9 ವಿಕೆಟ್‌ಗೆ 339 (ಜೋ ರೂಟ್ 186, ಜೋಸ್ ಬಟ್ಲರ್ 55, ಡಾಮ್ ಬೆಸ್ 32, ಲಸಿತ್ ಎಂಬುಲ್ಡೆನಿಯಾ 132ಕ್ಕೆ 7, ರಮೇಶ್ ಮೆಂಡಿಸ್ 48ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net