

ಸೌಥಾಂಪ್ಟನ್: ಪ್ರವಾಸಿ ಪಾಕಿಸ್ತಾನ ತಂಡದ ಬಿಗಿ ಬೌಲಿಂಗ್ ದಾಳಿ ನಡುವೆಯೂ ಜಾಕ್ ಕ್ರೌಲಿ (97*ರನ್, 165 ಎಸೆತ, 11 ಬೌಂಡರಿ) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸರೆಯಾಗಿದ್ದಾರೆ. ದ ರೋಸ್ ಬೌಲ್ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ತಂಡ ಮೊದಲ ದಿನದಾಟದ ಚಹಾ ವಿರಾಮದ ವೇಳೆಗೆ 56 ಓವರ್‌ಗಳಲ್ಲಿ 4 ವಿಕೆಟ್‌ಗೆ 184 ರನ್ ಪೇರಿಸಿದೆ.
ಇನಿಂಗ್ಸ್‌ನ 5ನೇ ಓವರ್‌ನಲ್ಲೇ ರೋರಿ ಬರ್ನ್ಸ್ (6) ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿದರು. ಇದರಿಂದ ಇಂಗ್ಲೆಂಡ್ 12 ರನ್‌ಗಳಿಗೆ ಮೊದಲ ವಿಕೆಟ್ ಕೈಚೆಲ್ಲಿತು. ಬಳಿಕ ಜತೆಯಾದ ಆರಂಭಿಕ ಸಿಬ್ಲೆ ಹಾಗೂ ಕ್ರೌಲಿ ಜೋಡಿ ಮಂದಗತಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ 2ನೇ ವಿಕೆಟ್‌ಗೆ 61 ರನ್ ಕಲೆಹಾಕಿದ್ದ ವೇಳೆ ಯಾಸೀರ್ ಷಾ ಬೇರ್ಪಡಿಸಿದರು. ನಾಯಕ ಜೋ ರೂಟ್ (29), ಒಲಿ ಪೋಪ್ (3) ನಿರಾಸೆ ಅನುಭವಿಸಿದರು. ಇದರೊಂದಿಗೆ ಇಂಗ್ಲೆಂಡ್ 127 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಬಳಿಕ ಜತೆಯಾದ ಕ್ರೌಲಿ ಹಾಗೂ ಜೋಸ್ ಬಟ್ಲರ್ (24*ರನ್, 45 ಎಸೆತ, 4 ಬೌಂಡರಿ) ಜೋಡಿ ಮುರಿಯದ 5ನೇ ವಿಕೆಟ್‌ಗೆ 57 ಪೇರಿಸಿ ತಂಡಕ್ಕೆ ಆಸರೆಯಾಗಿದೆ.
30 ನಿಮಿಷ ತಡವಾದ ಪಂದ್ಯ
ಮಳೆಯಿಂದಾಗಿ ಪಂದ್ಯ ನಿಗದಿತ ವೇಳೆಗಿಂತ 30 ನಿಮಿಷ ತಡವಾಗಿ ಆರಂಭಗೊಂಡಿತು. ಸಾಮಾನ್ಯವಾಗಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯವನ್ನು ಸ್ಥಳೀಯ ಕಾಲಮಾನ ಪ್ರಕಾರ ಬೆಳಗ್ಗೆ 11 ಗಂಟೆಗೆ ಆರಂಭಿಸಲಾಗುತ್ತದೆ. ಆದರೆ, ಅಂತಿಮ ಟೆಸ್ಟ್ ಪಂದ್ಯವನ್ನು 10.30ಕ್ಕೆ ಆರಂಭಿಸುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಯೋಜನೆಗೆ ಮಳೆ ಅಡ್ಡಿಯುಂಟಾಯಿತು. 3 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಯಿಂದ ಮುನ್ನಡೆಯಲ್ಲಿದ್ದರೆ, 2ನೇ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.
ಇಂಗ್ಲೆಂಡ್ ತಂಡಕ್ಕೆ ಆರ್ಚರ್ ವಾಪಸ್
2ನೇ ಪಂದ್ಯದಲ್ಲಿ ಸ್ಥಾನ ಪಡೆದಿದ್ದ ಸ್ಯಾಮ್ ಕರ‌್ರನ್ ಬದಲಿಗೆ ಮತ್ತೋರ್ವ ವೇಗಿ ಜೋಫ್ರಾ ಆರ್ಚರ್ ಇಂಗ್ಲೆಂಡ್ ತಂಡಕ್ಕೆ ವಾಪಸಾದರು. ಮತ್ತೊಂದೆಡೆ, ಪ್ರವಾಸಿ ಪಾಕಿಸ್ತಾನ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯಿತು.
ಇಂಗ್ಲೆಂಡ್: ಮೊದಲ ದಿನದಾಟದ ಚಹಾ ವಿರಾಮದ ವೇಳೆಗೆ 56 ಓವರ್‌ಗಳಲ್ಲಿ 4 ವಿಕೆಟ್‌ಗೆ 184 (ಸಿಬ್ಲೆ 22, ಕ್ರೌಲಿ 97*, ರೂಟ್ 29, ಬಟ್ಲರ್ 24*, ಶಾಹೀನ್ ಅಫ್ರಿದಿ 39ಕ್ಕೆ 1, ಯಾಸಿರ್ ಷಾ 60 ಕ್ಕೆ 2, ನಸೀಮ್ ಷಾ 45ಕ್ಕೆ 1).