

ಚೆನ್ನೈ: ತವರಿನಂಗಳದಲ್ಲಿ ಸ್ಪಿನ್ನರ್ ಆರ್.ಅಶ್ವಿನ್ (106ರನ್, 148 ಎಸೆತ, 14 ಬೌಂಡರಿ, 1 ಸಿಕ್ಸರ್) ಸಿಡಿಸಿದ ಭರ್ಜರಿ ಶತಕದಾಟದ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ 482ರನ್ ಬೃಹತ್ ಗೆಲುವಿನ ಗುರಿ ನೀಡಿದೆ. ಚೆಪಾಕ್‌ನಲ್ಲಿರುವ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಈ ಅಸಾಧಾರಣ ಮೊತ್ತ ಬೆನ್ನಟ್ಟಿರುವ ಇಂಗ್ಲೆಂಡ್ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ಗೆ 53 ರನ್ ಕಲೆಹಾಕಿದ್ದು, ಗೆಲುವು ದಾಖಲಿಸಲು ಇನ್ನು 429 ರನ್ ಪೇರಿಸಬೇಕಿದೆ. ಇದರೊಂದಿಗೆ 4 ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸುವ ತವಕದಲ್ಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಜಯ ದಾಖಲಿಸಿತ್ತು.
ಇದಕ್ಕೂ ಮೊದಲು 1 ವಿಕೆಟ್‌ಗೆ 54 ರನ್‌ಗಳಿಂದ ದಿನದಾಟದಲ್ಲಿ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಆರಂಭಿಕ ಆಘಾತದ ನಡುವೆಯೂ ಅಶ್ವಿನ್ ಶತಕದಾಟದ ನೆರವಿನಿಂದ 289 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ ಮೊದಲ ಇನಿಂಗ್ಸ್ 329 ರನ್‌ಗಳಿಸಿದ್ದರೆ, ಇಂಗ್ಲೆಂಡ್ 134 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇದರಿಂದ ಭಾರತ ಮೊದಲ ಇನಿಂಗ್ಸ್‌ನಲ್ಲಿ 195 ರನ್ ಮುನ್ನಡೆ ಸಾಧಿಸಿತ್ತು.
ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ಈಗ ಕೃಷಿ ಇಲಾಖೆಯ ರಾಯಭಾರಿ
ಭಾರತ: 329 ಮತ್ತು 286 (ಆರ್.ಅಶ್ವಿನ್ 106, ವಿರಾಟ್ ಕೊಹ್ಲಿ 62, ರೋಹಿತ್ ಶರ್ಮ 26, ಜಾಕ್ ಲೀಚ್ 100ಕ್ಕೆ 4, ಮೊಯಿನ್ ಅಲಿ 98ಕ್ಕೆ 4, ಒಲಿ ಸ್ಟೋಕ್ 21ಕ್ಕೆ 1), ಇಂಗ್ಲೆಂಡ್: 134 ಮತ್ತು 3 ವಿಕೆಟ್‌ಗೆ 53 (ರೋರಿ ಬರ್ನ್ಸ್ 25, ಡೇನಿಯಲ್ ಲಾರೆನ್ಸ್ 19*, ಅಕ್ಷರ್ ಪಟೇಲ್ 15ಕ್ಕೆ 1, ಆರ್.ಅಶ್ವಿನ್ 28ಕ್ಕೆ 1).