

ಬ್ರಿಸ್ಬೇನ್: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಗೆ ಬುಧವಾರ ಚಾಲನೆ ಸಿಗಲಿದೆ. ಆತಿಥೇಯ ಆಸೀಸ್ ತಂಡವನ್ನು ವೇಗಿ ಪ್ಯಾಟ್ ಕಮ್ಮಿನ್ಸ್ ಮುನ್ನಡೆಸುತ್ತಿದ್ದು, 1950ರ ವೇಗದ ಬೌಲರ್‌ವೊಬ್ಬರು ಈ ಹುದ್ದೆ ನಿಭಾಯಿಸಲಿದ್ದಾರೆ. ಆಸ್ಟ್ರೇಲಿಯಾಗೆ ಬೌಲಿಂಗ್ ನಾಯಕನಾದರೆ, ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ನಾಯಕ ತಂಡ ಮುನ್ನಡೆಸಲಿದ್ದಾರೆ. ಡಿಸೆಂಬರ್ 8 ರಿಂದ ಜನವರಿ 18ರವರೆಗೂ ನಡೆಯಲಿರುವ ಈ ಸರಣಿಯೂ ವಿಶ್ವ ಕ್ರಿಕೆಟ್ ಗಮನಸೆಳೆಯಲು ಸಜ್ಜಾಗಿದೆ. ಉಭಯ ತಂಡಗಳ ನಡುವೆ 1882ರಲ್ಲಿ ಆರಂಭಗೊಂಡ ಈ ಸರಣಿಯೂ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತಿದೆ.
ಕರೊನಾ ಕಾಲದಲ್ಲಿ ನಡೆಯುತ್ತಿರುವ ಮೊದಲ ಆಶಸ್ ಟೆಸ್ಟ್ ಸರಣಿಗೆ ಉಭಯ ತಂಡಗಳು ಸಜ್ಜಾಗಿವೆ. ಇಂಗ್ಲೆಂಡ್ ನಾಯಕ ಜೋ ರೂಟ್ 2021ರಲ್ಲಿ ಆಡಿರುವ 12 ಟೆಸ್ಟ್ ಪಂದ್ಯಗಳಿಂದ 1455 ರನ್ ಬಾರಿಸುವ ಮೂಲಕ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆದರೆ, ಇಂಗ್ಲೆಂಡ್ ತಂಡಕ್ಕೆ ಆಸ್ಟ್ರೇಲಿಯಾ ನೆಲದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗೆಲುವೆಂಬುದೇ ಮರೀಚಿಕೆಯಾಗಿದೆ. 2010-11ರ ಬಳಿಕ ಆಸೀಸ್ ನೆಲದಲ್ಲಿ ಆಡಿದ 10 ಟೆಸ್ಟ್ ಪಂದ್ಯಗಳು ಪೈಕಿ 9 ರಲ್ಲಿ ಸೋಲು ಕಂಡಿದೆ. ರೂಟ್ ಸಾರಥ್ಯದಲ್ಲೇ ಕಡೇ ಬಾರಿಗೆ ಆಸೀಸ್ ಪ್ರವಾಸ ಕೈಗೊಂಡಾಗ ಇಂಗ್ಲೆಂಡ್ ತಂಡ 0-4 ರಿಂದ ಸರಣಿ ಸೋತಿತ್ತು. ಆದರೆ, ಗಾಬಾ ಮೈದಾನ ಕೂಡ ಇಂಗ್ಲೆಂಡ್‌ಗೆ ಅದೃಷ್ಟವಿಲ್ಲ, 1986ರಿಂದ ಈ ಮೈದಾನದಲ್ಲಿ ಇಂಗ್ಲೆಂಡ್ ತಂಡ ಗೆಲುವು ದಾಖಲಿಸಿಲ್ಲ, 1946ರಿಂದ ಕೇವಲ 2 ಟೆಸ್ಟ್ ಪಂದ್ಯಗಳಲ್ಲಷ್ಟೇ ಗೆಲುವು ದಾಖಲಿಸಿದೆ. ಮತ್ತೊಂದೆಡೆ, 1988 ರಿಂದಲೂ ಗಾಬಾದಲ್ಲಿ ಸೋಲರಿಯದ ಆಸೀಸ್ ತಂಡ ವರ್ಷದ ಆರಂಭದಲ್ಲಿ ಭಾರತಕ್ಕೆ ಶರಣಾಗಿತ್ತು.
* ಕಮ್ಮಿನ್ಸ್‌ಗೆ ಸವಾಲು: 29 ವರ್ಷದ ಪ್ಯಾಟ್ ಕಮ್ಮಿನ್ಸ್‌ಗೆ ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ದಕ್ಕಿದ್ದು, ತಂಡ ಮುನ್ನಡೆಸುವುದೇ ವೈಯಕ್ತಿಕವಾಗಿ ದೊಡ್ಡ ಸವಾಲಾಗಿದೆ. 2011ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಪ್ಯಾಟ್ ಕಮ್ಮಿನ್ಸ್‌ಗೆ ಟಿಮ್ ಪೈನೆ ಮಾಡಿಕೊಂಡ ವಿವಾದದಿಂದಾಗಿ ನಾಯಕತ್ವ ಒಲಿದಿದೆ. ಉಪನಾಯಕ ಹಾಗೂ ಅನುಭವಿ ಬ್ಯಾಟರ್ ಸ್ಟೀವನ್ ಸ್ಮಿತ್ ಅವರಿಂದ ಮೈದಾನದಲ್ಲಿ ಹೆಚ್ಚು ಸಲಹೆಗಳನ್ನು ನಿರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ. ಸ್ಮಿತ್ ಮಾಡಿದ ಸ್ಯಾಂಡ್ ಪೇಪರ್ ಸ್ಕಾೃಂಡಲ್‌ನಿಂದಾಗಿ ನಾಯಕತ್ವ ಕಳೆದುಕೊಂಡಿದ್ದರು. ಬಳಿಕ ಸ್ಮಿತ್ ಸ್ಥಾನಕ್ಕೆ ಟಿಮ್ ಪೈನ್ ನೇಮಕಗೊಂಡಿದ್ದರು.
* 71: ಉಭಯ ತಂಡಗಳ ನಡುವೆ ಇದುವರೆಗೂ 71 ಆಶಸ್ ಸರಣಿಗಳು ನಡೆದಿದ್ದು, ಆಸ್ಟ್ರೇಲಿಯಾ 33, ಇಂಗ್ಲೆಂಡ್ 32ರಲ್ಲಿ ಜಯ ದಾಖಲಿಸಿದ್ದು, ಉಳಿದ 6 ಸರಣಿಗಳು ಡ್ರಾಗೊಂಡಿವೆ. 2019ರಲ್ಲಿ ನಡೆದ ಸರಣಿಯೂ 2-2 ರಿಂದ ಸಮಬಲ ಕಂಡಿತ್ತು. 1972ರ ಬಳಿಕ ಮೊದಲ ಬಾರಿಗೆ ಸರಣಿ ಸಮಬಲಗೊಂಡಿತ್ತು.
ಪಂದ್ಯ ಆರಂಭ: ಬೆಳಗ್ಗೆ 5.30 (ಭಾರತೀಯ ಕಾಲಮಾನ)
ನೇರಪ್ರಸಾರ: ಸೋನಿ ಸ್ಪೋರ್ಟ್ಸ್