

ಕ್ರೈಸ್ಟ್ಚರ್ಚ್: ಮಿದುಳು ಕ್ಯಾನ್ಸರ್ನಿಂದ ಬಳಲುತ್ತಿದ್ದ ಇಂಗ್ಲೆಂಡ್ ಆಲ್ರೌಂಡರ್ ಬೆನ್ಸ್ಟೋಕ್ಸ್ ತಂದೆ ಗೆಡ್ ಸ್ಟೋಕ್ಸ್ ಮಂಗಳವಾರ ನಿಧನರಾದರು. ಕಳೆದ ಒಂದು ವರ್ಷದಿಂದಲೂ ಬೆನ್ ಸ್ಟೋಕ್ಸ್ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರಿಗೆ 65 ವರ್ಷ ವಯಸ್ಸಾಗಿತ್ತು. ಸದ್ಯ ಬೆನ್ ಸ್ಟೋಕ್ಸ್ ರಾಷ್ಟ್ರೀಯ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಕರೊನಾ ವೈರಸ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯನ್ನು ರದ್ದುಗೊಳಿಸಲಾಗಿದೆ.
ಮಾಜಿ ರಗ್ಬಿ ಆಟಗಾರ ಹಾಗೂ ಕೋಚ್ ಕೂಡ ಆಗಿದ್ದ ಗೆಡ್ ಸ್ಟೋಕ್ಸ್, ಮಿದುಳು ಕ್ಯಾನ್ಸರ್ನಿಂದ ಕಳೆದ ಒಂದು ವರ್ಷದಿಂದ ಬಳಲುತ್ತಿದ್ದರು. ತಂದೆಯವರ ಆರೈಕೆಗಾಗಿ ಸ್ಟೋಕ್ಸ್ ಕೂಡ ಒಂದು ತಿಂಗಳ ಕಾಲ ಕ್ರೈಸ್ಟ್ಚರ್ಚ್ಗೆ ತೆರೆಳಿದ್ದರು. ‘ಬೆನ್ ಸ್ಟೋಕ್ಸ್ ಹಾಗೂ ಅವರ ಕುಟುಂಬಕ್ಕೆ ನಮ್ಮ ಸಂತಾಪಗಳು. ಈ ವೇಳೆ ಅವರ ಕುಟುಂಬದೊಂದಿಗೆ ಇಸಿಬಿ ನಿಲ್ಲಲಿದೆ’ ಎಂದು ಇಸಿಬಿ ಟ್ವೀಟ್ ಮಾಡಿದೆ.