'ಸ್ಕೈ' ಕ್ಯಾಚ್​ನಲ್ಲಿ ಮೋಸ! ​ಕಡೆಗೂ ಸ್ಪಷ್ಟನೆ ಕೊಟ್ಟ ಸೂರ್ಯಕುಮಾರ್ ಯಾದವ್​ ಹೇಳಿದ್ದಿಷ್ಟು

Untitled design - 2024-07-02T151334.498
Published on

ನವದೆಹಲಿ: ಬಾರ್ಬಡೋಸ್​ನಲ್ಲಿ ನಡೆದ ವಿಶ್ವಕಪ್​ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆದ್ದ ಸಂಭ್ರಮ ಒಂದೆಡೆಯಾದರೆ, ಮತ್ತೊಂದೆಡೆ ಪಂದ್ಯದ ವೇಳೆ ಡೇವಿಡ್​ ಮಿಲ್ಲರ್​ ಹೊಡೆದ ಸಿಕ್ಸರ್​ ಶಾಟ್​ನ ಬೌಂಡರಿ ಲೈನ್​ನಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ರೋಚಕ ಕ್ಯಾಚ್ ಬಗ್ಗೆ ವ್ಯಾಪಕ ಅನುಮಾನಗಳು ವ್ಯಕ್ತವಾಗಿವೆ. ಕೆಲವರು ಇದು ಮೋಸದಾಟ ಎಂದು ಆರೋಪಿಸಿದ್ದಾರೆ. ಕಳೆದ ಎರಡು ದಿನಗಳಿಂದ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ನಡೆದಿದ್ದೇನು?: ವಾಸ್ತವವಾಗಿ ದಕ್ಷಿಣ ಆಫ್ರಿಕಾ ಗೆಲುವಿಗೆ 6 ಎಸೆತಗಳಲ್ಲಿ 16 ರನ್‌ಗಳ ಅಗತ್ಯವಿದ್ದಾಗ, ಡೇವಿಡ್ ಮಿಲ್ಲರ್ ಮೊದಲ ಎಸೆತದಲ್ಲಿ ಬೃಹತ್ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಬೌಂಡರಿಯಲ್ಲಿದ್ದ ಸೂರ್ಯಕುಮಾರ್ ಯಾದವ್ ಯಾವುದೇ ತಪ್ಪು ಮಾಡದೆ ಅಮೋಘ ಕ್ಯಾಚ್ ಹಿಡಿದರು. ಈ ಕ್ಯಾಚ್ ಹಿಡಿಯುವಲ್ಲಿ ಸೂರ್ಯಕುಮಾರ್ ಯಾದವ್ ಸಣ್ಣ ತಪ್ಪು ಮಾಡಿದ್ದರೆ ವಿಶ್ವಕಪ್ ಕನಸು ನುಚ್ಚುನೂರಾಗುತ್ತಿತ್ತು. 'ಸ್ಕೈ' ಅದ್ಬುತ ಫೀಲ್ಡಿಂಗ್‌ಗೆ ದೇಶವ್ಯಾಪಿ ಕ್ರಿಕೆಟ್ ಅಭಿಮಾನಿಗಳಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದಬಂದಿತು.

ಸದ್ಯ ಈ ಗೊಂದಲಗಳ ಕುರಿತು ಸ್ವತಃ ಸೂರ್ಯಕುಮಾರ್​ ಯಾದವ್​ ಅವರೇ ಪ್ರತಿಕ್ರಿಯಿಸಿದ್ದು, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಡೇವಿಡ್ ಮಿಲ್ಲರ್ ಅವರ ಕ್ಯಾಚ್ ಹಿಡಿಯುವಾಗ ನಾನು ಬೌಂಡರಿ ಲೈನ್​ ತುಳಿದಿಲ್ಲ ಎಂಬ ವಿಷಯ ನನಗೆ ನಿಖರವಾಗಿ ತಿಳಿದಿತ್ತು. ಸಾಮಾನ್ಯವಾಗಿ ಲಾಂಗ್​-ಆನ್​ನಲ್ಲಿ ರೋಹಿತ್ ಅವರು ನಿಲ್ಲುವುದಿಲ್ಲ. ಬಾಲ್​ ಬರುತ್ತಿದ್ದಂತೆ ರೋಹಿತ್​ ಮತ್ತು ನಾನು ಪರಸ್ಪರ ಒಬ್ಬರನೊಬ್ಬರು ನೋಡಿಕೊಂಡೆವು. ರೋಹಿತ್​ ಕ್ರೀಸ್​ ಬಳಿ ಬಂದಿದ್ರೆ, ಕ್ಯಾಚ್​ ಅವರಿಗೆ ಎಸೆಯುತ್ತಿದ್ದೆ ಎಂದರು.

ನನ್ನ ಗುರಿ ಆ ಕ್ಯಾಚ್ ಹಿಡಿಯುವುದಾಗಿತ್ತು ಅಷ್ಟೇ. ಆ ಮೂರರಿಂದ ನಾಲ್ಕು ಸೆಕೆಂಡ್​ಗಳು ಏನಾಯಿತು ಎಂಬುದನ್ನು ನಿಜಕ್ಕೂ ವಿವರಿಸಲು ಅಸಾಧ್ಯ. ನಿಮ್ಮ ಪ್ರಕಾರ ಆ ಕ್ಯಾಚ್​ ಸ್ಪಷ್ಟವಾಗಿರಲಿಲ್ಲವೇ ಎಂದು ತಮ್ಮನ್ನು ಪ್ರಶ್ನಿಸಿದವರಿಗೆ ಸೂರ್ಯ ತಮಾಷೆ ಮಾಡಿದರು. ಸದ್ಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net