ಬಾಬರ್​ ಕ್ಯಾಪ್ಟನ್ಸಿಯಲ್ಲಿ ಕಳಪೆ ಪ್ರದರ್ಶನ; ಸಂಸತ್ತಿನಲ್ಲೂ ಗಂಭೀರ ಸ್ವರೂಪ ಪಡೆದುಕೊಂಡ ಚರ್ಚೆ

Pak Parliament
Published on

ನವದೆಹಲಿ: ಇತ್ತಿಚಿನ ವರ್ಷಗಳಲ್ಲಿ ಕ್ರೀಡಾ ವಲಯದಲ್ಲಿ ವಿವಾದದ ಕೇಂದ್ರ ಬಿಂದು ಎಂದರೆ ಮೊದಲಿಗೆ ಕೇಳಿ ಬರುವುದು ಪಾಕಿಸ್ತಾನ ಕ್ರಿಕೆಟ್​ ತಂಡದ ಹೆಸರು. ಐರ್ಲೆಂಡ್​ ಯುಎಸ್​ಎ ಹಾಗೂ ಭಾರತ ವಿರುದ್ಧದ ಕಳಪೆ ಪ್ರದರ್ಶನಕ್ಕಾಗಿ ತೀವ್ರ ಅವಮಾನಕ್ಕೊಳಗಾಗಿರುವ ಪಾಕಿಸ್ತಾನ ಕ್ರಿಕೆಟ್​ ತಂಡದಲ್ಲಿ ಯಾಕೋ ಎಲ್ಲವೂ ಸರಿ ಇಲ್ಲವೆಂಬಂತೆ ಕಾಣುತ್ತಿದೆ. ಅದಕ್ಕೆ ಪೂರಕವೆಂಬಂತೆ ಕೋಚ್​ ಗ್ಯಾರಿ ಕರ್ಸ್ಟನ್​ ನೀಡಿರುವ ಹೇಳಿಕೆ ತಂಡದಲ್ಲಿನ ಭಿನ್ನಾಭಿಪ್ರಾಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ಇದೀಗ ಪಾಕಿಸ್ತಾನ ಕ್ರಿಕೆಟ್​ ತಂಡದಲ್ಲಿನ ಆಂತರಿಕ ಕಿತ್ತಾಟ ಸಂಸತ್​ನಲ್ಲೂ ಪ್ರತಿಧ್ವನಿಸಿದ್ದು, ಸಂಸತ್​ ಸದಸ್ಯರಾದ ಅಬ್ದುಲ್​ ಖಾದಿರ್ ಪಟೇಲ್​ ಈ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯಲು ಯತ್ನಿಸಿದ್ದು, ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅವರನ್ನು ಉಲ್ಲೇಖಿಸಿ ಬಾಬರ್​ ಅಜಂ ಹಾಗೂ ತಂಡದವರ ವಿರುದ್ಧ ಕಿಡಿಕಾರಿದ್ದಾರೆ.

ಇವರಿಗೆ ಏನಾಗಿದೆ. ವಿಶ್ವಕಪ್​ನಲ್ಲಿ ಯುಎಸ್​ಎ ಹಾಗೂ ಭಾರತದ ವಿರುದ್ಧ ಸೋತ ಇವರು ಮೊದಲಿಗೆ ಹಿರಿಯ ಕ್ರಿಕೆಟಿಗರಿಂದ (ಇಮ್ರಾನ್​ ಖಾನ್​) ಸಲಹೆ ಹಾಗೂ ತರಬೇತಿಯನ್ನು ಪಡೆಯಬೇಕಿದೆ. ಇದಾದ ಬಳಿಕ ಪಾರ್ಟಿ ಒಂದನ್ನು ಆಯೋಜಿಸಬೇಕಿದ್ದು, ಅವರು ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ದೂರುತ್ತ ಸಾರ್ವಜನಿಕವಾಗಿ ಪೇಪರ್​ಗಳನ್ನು ಹರಿದುಹಾಕಬೇಕಿದೆ. ಆ ನಂತರ ಸ್ಪಷ್ಟನೆ ನೀಡಬೇಕಿದೆ ಎಂದು ಹೇಳಿದ್ದಾರೆ.

ಇದಲ್ಲದೆ ಬಾಬರ್ ಅಜಂ ವಿರುದ್ದವೂ ಗುಡುಗಿದ ಅಬ್ದುಲ್​ ಖಾದಿರ್​ ಶಿಫಾರಸ್ಸಿನ ಮೇಲೆ ನಾಯಕತ್ವ ವಹಿಸಿದರೆ ಹೀಗೆ ಆಗುತ್ತದೆ. ಆದೆಷ್ಟು ಬೇಗ ಸರ್ಕಾರ ಹಾಗೂ ಮಂಡಳಿ ಇದರ ಬಗ್ಗೆ ಯೋಚಿಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಸಂಸತ್​ ಸದಸ್ಯರಾದ ಅಬ್ದುಲ್​ ಖಾದಿರ್ ಪಟೇಲ್​ ಆಗ್ರಹಿಸಿದ್ದಾರೆ. ಇವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net