ಅಹಂ ಅನ್ನೋದು ನಿಷ್ಪ್ರಯೋಜಕ... ನನ್ನ ಐಪಿಎಲ್​ ಜರ್ನಿ ಈಗಷ್ಟೇ ಶುರುವಾಗಿದೆ ಅಂದ್ರು ವಿರಾಟ್​ ಕೊಹ್ಲಿ! Virat Kohli

Virat Kohli
Published on

Virat Kohli : ನನ್ನ ವೈಯಕ್ತಿಕ ಹಿತಾಸಕ್ತಿಗಿಂತ ತಂಡದ ಹಿತಾಸಕ್ತಿಯೇ ನನ್ನ ಮೊದಲ ಆದ್ಯತೆ ಎಂದು ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಪಂದ್ಯದ ಪರಿಸ್ಥಿತಿಗಳಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡಬೇಕಿದೆ ಹೊರತು ಇಲ್ಲಿ ವೈಯಕ್ತಿಕ ಆದ್ಯತೆಗೆ ಅವಕಾಶವೇ ಇರುವುದಿಲ್ಲ, ತಂಡದ ಬಗ್ಗೆ ಯೋಚಿಸಿಯೇ ಯಾವಾಗಲೂ ಆಡುತ್ತಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಅಹಂ ಅನ್ನೋದು ನಿಷ್ಪ್ರಯೋಜಕ..

ಇತ್ತೀಚೆಗೆ ಸ್ಟಾರ್​ ಸ್ಪೋರ್ಟ್ಸ್​ ನೆಟ್​ವರ್ಕ್​ಗೆ ಸಂದರ್ಶನ ನೀಡಿದ ಕೊಹ್ಲಿ, ತಂಡಕ್ಕಾಗಿ ಆಡುವಾಗ, 'ನಾನು' ಎಂಬ ಅಹಂಕಾರ ಬ್ಯಾಟಿಂಗ್‌ನಲ್ಲಿ ಎಂದಿಗೂ ಇರಬಾರದು. ಇನ್ನೊಂದು ತುದಿಯಲ್ಲಿರುವ ಬ್ಯಾಟರ್ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುವುದು ಕೂಡ ಸರಿಯಾದ ಬ್ಯಾಟಿಂಗ್ ಅನಿಸುವುದಿಲ್ಲ. ನಾನು ಪಂದ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಅದಕ್ಕೆ ಅನುಗುಣವಾಗಿ ಆಡಲು ಪ್ರಯತ್ನಿಸುತ್ತೇನೆ. ಇದು ನನಗೆ ಹೆಮ್ಮೆಯ ವಿಷಯವೂ ಆಗಿದೆ ಎಂದು ಕೊಹ್ಲಿ ಹೇಳಿದ್ದಾರೆ. ಈ ಮೂಲಕ ಕೊಹ್ಲಿ ಬ್ಯಾಟಿಂಗ್​ ಮಾಡುವಾಗ ತಮ್ಮ ವೈಯಕ್ತಿಕ ದಾಖಲೆಗಳಿಗೆ ಮಾತ್ರ ಆದ್ಯತೆ ನೀಡುತ್ತಾರೆ ಎಂದು ಟೀಕಿಸುವವರಿಗೆ ತಿರುಗೇಟು ನೀಡಿದ್ದಾರೆ.

ನನ್ನ ಐಪಿಎಲ್​ ಜರ್ನಿ ಶುರುವಾಗಿದ್ದೇ ಆಗ

ಆರ್‌ಸಿಬಿ ಪರ ಮೊದಲ ಮೂರು ವರ್ಷಗಳ ಕಾಲ, ನನಗೆ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಹೆಚ್ಚಿನ ಅವಕಾಶ ಸಿಗಲಿಲ್ಲ. ಹಾಗಾಗಿ ನಾನು ಐಪಿಎಲ್‌ನಲ್ಲಿ ಚೆನ್ನಾಗಿ ಆಡಲಿಲ್ಲ. ಆದರೆ 2010ರಲ್ಲಿ, ನನಗೆ ಸ್ವಲ್ಪ ಸ್ಥಿರತೆ ಸಿಕ್ಕಿತು. 2011 ರಿಂದ ನಾನು ನಿಯಮಿತವಾಗಿ ಮೂರನೇ ಸ್ಥಾನದಲ್ಲಿದ್ದೆ. ನಿಜ ಹೇಳಬೇಕೆಂದರೆ, ಆಗ ನನ್ನ ನಿಜವಾದ ಐಪಿಎಲ್ ಪ್ರಯಾಣ ಪ್ರಾರಂಭವಾಯಿತು ಎಂದು ಕೊಹ್ಲಿ ನೆನಪಿಸಿಕೊಂಡರು. ಐಪಿಎಲ್‌ನಲ್ಲಿ ದೀರ್ಘಕಾಲ ಆಡಿದ್ದರಿಂದ ಮಾತ್ರ ಟಿ20 ಸ್ವರೂಪದಲ್ಲಿ ನನ್ನ ಆಟವನ್ನು ಸುಧಾರಿಸಲು ಸಾಧ್ಯವಾಯಿತು ಎಂದು ಕೊಹ್ಲಿ ಹೇಳಿದರು.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ 256 ಪಂದ್ಯಗಳನ್ನು ಆಡಿರುವ ಕೊಹ್ಲಿ ಒಟ್ಟು 8168 ರನ್‌ಗಳನ್ನು ಗಳಿಸಿದ್ದಾರೆ. ಆದಾಗ್ಯೂ, ಮೊದಲ ಮೂರು ಋತುಗಳಲ್ಲಿ ಗಮನಾರ್ಹ ಪರಿಣಾಮ ಬೀರುವಲ್ಲಿ ವಿಫಲರಾದರು. ಹೆಚ್ಚಾಗಿ ಮಧ್ಯಮ ಕ್ರಮಾಂಕದಲ್ಲಿ ಆಡಿದರು. 38 ಇನ್ನಿಂಗ್ಸ್‌ಗಳನ್ನು ಆಡಿದ್ದರೂ, ಆ ಸಮಯದಲ್ಲಿ ಅವರ ಖಾತೆಯಲ್ಲಿ ಕೇವಲ ಎರಡು ಅರ್ಧಶತಕಗಳಿದ್ದವು.

ಅಂದಹಾಗೆ ವಿರಾಟ್ ಕೊಹ್ಲಿ ಐಪಿಎಲ್ (2008) ಉದ್ಘಾಟನಾ ಋತುವಿನಿಂದ ಆರ್‌ಸಿಬಿಯಲ್ಲಿದ್ದಾರೆ. ಆಟಗಾರನಾಗಿ ಮತ್ತು ನಾಯಕನಾಗಿ ಅಭಿಮಾನಿಗಳನ್ನು ರಂಜಿಸಿರುವ ಕೊಹ್ಲಿ ಇಲ್ಲಿಯವರೆಗೆ ತಂಡಕ್ಕೆ ಟ್ರೋಫಿ ತಲುಪಿಸಲು ಸಾಧ್ಯವಾಗಿಲ್ಲ. ಐಪಿಎಲ್-2025 ರ ಸಂದರ್ಭದಲ್ಲಿ, ಬೆಂಗಳೂರು ಫ್ರಾಂಚೈಸಿ ರಜತ್ ಪಾಟಿದಾರ್ ಅವರನ್ನು ತಮ್ಮ ನಾಯಕನನ್ನಾಗಿ ಘೋಷಿಸಿತು. ಈ ಋತುವಿನಲ್ಲಿ ಆರ್‌ಸಿಬಿ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದು, ಮೂರು ಪಂದ್ಯಗಳನ್ನು ಗೆದ್ದಿದೆ. ಪಾಟಿದಾರ್ ಬ್ಯಾಟ್ಸ್‌ಮನ್ ಆಗಿ ಮತ್ತು ನಾಯಕನಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮತ್ತೊಂದೆಡೆ, ಕೊಹ್ಲಿ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಇಲ್ಲಿಯವರೆಗೆ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 164 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net