

ಕೋಲ್ಕತ: ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಸಿಬ್ಬಂದಿಗೆ ಕರೊನಾ ಪಾಸಿಟಿವ್ ಬಂದ ಕಾರಣ ವಾರದ ಹಿಂದೆಯಷ್ಟೇ ಸೀಲ್‌ಡೌನ್ ಆಗಿದ್ದ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಈಗ ಕೋಲ್ಕತ ಪೊಲೀಸರಿಗೆ ಕ್ವಾರಂಟೈನ್ ಕೇಂದ್ರವಾಗಿ ಮಾರ್ಪಟ್ಟಿದೆ.
ತುರ್ತು ಕಾರಣಗಳಿಂದಾಗಿ ಕ್ರೀಡಾಂಗಣದ ಗ್ಯಾಲರಿಗಳನ್ನು ಪೊಲೀಸರಿಗೆ ಕ್ವಾರಂಟೈನ್ ಕೇಂದ್ರವಾಗಿಸಲು ಅವಕಾಶ ನೀಡಬೇಕೆಂದು ಕೋಲ್ಕತ ಪೊಲೀಸ್ ಇಲಾಖೆ ಸಿಬಿಗೆ ಮನವಿ ಸಲ್ಲಿಸಿತ್ತು. ಇದರ ಅನ್ವಯ ಇ, ಎಫ್, ಜಿ ಮತ್ತು ಎಚ್ ಬ್ಲಾಕ್ ಗ್ಯಾಲರಿಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಬದಲಾಯಿಸಲಾಗಿದೆ. ಹೆಚ್ಚಿನ ಜಾಗ ಬೇಕೆನಿಸಿದರೆ ಜೆ ಬ್ಲಾಕ್ ಕೂಡ ಬಳಕೆಯಾಗಲಿದೆ. ಬಿ, ಸಿ, ಡಿ, ಕೆ ಮತ್ತು ಎಲ್ ಬ್ಲಾಕ್‌ಗಳನ್ನು ಬಳಕೆ ಮಾಡಲಾಗುವುದಿಲ್ಲ. ಇವು ಸಿಎಬಿ ಬಳಕೆಗೆ ಮೀಸಲಾಗಿರಲಿವೆ ಎನ್ನಲಾಗಿದೆ. ಈ ವಾರ ಸುಮಾರು 500 ಪೊಲೀಸರಿಗೆ ಕರೊನಾ ಪಾಸಿಟಿವ್ ವರದಿ ಬಂದಿದೆ.
‘ಈ ಸಂಕಷ್ಟದ ಸಮಯದಲ್ಲಿ ಸೇವೆ ಸಲ್ಲಿಸುವುದು ನಮ್ಮ ಕರ್ತವ್ಯ. ಕೋವಿಡ್ ವಾರಿಯರ್ಸ್ ಆಗಿರುವ ಪೊಲೀಸರಿಗೆ ನಾವು ವ್ಯವಸ್ಥೆಗಳನ್ನು ಕಲ್ಪಿಸಿದ್ದೇವೆ. ಇದೇ ವೇಳೆ ಕ್ರಿಕೆಟ್ ಚಟುವಟಿಕೆಗಳಿಗೆ ತೊಂದರೆ ಆಗದಿರುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಸಿಎಬಿ ಅಧ್ಯಕ್ಷ ಅವಿಷೇಕ್ ದಾಲ್ಮಿಯಾ ತಿಳಿಸಿದ್ದಾರೆ. ಅಹಮದಾಬಾದ್‌ನ ಹೊಸ ಕ್ರೀಡಾಂಗಣ ಇನ್ನೂ ಉದ್ಘಾಟನೆ ಆಗದಿರುವ ಹಿನ್ನೆಲೆಯಲ್ಲಿ ಈಡನ್ ಗಾರ್ಡನ್ಸ್ ಈಗಲೂ ದೇಶದ ಅತಿದೊಡ್ಡ ಕ್ರೀಡಾಂಗಣವೆನಿಸಿದೆ. ಕೋಲ್ಕತದಲ್ಲೂ ದಿನೇದಿನೇ ಕರೊನಾ ಹಾವಳಿ ಹೆಚ್ಚಾಗುತ್ತಲೇ ಇದೆ.