ಆರ್ಥಿಕ ಸಬಲೀಕರಣದಿಂದ ಮಹಿಳೆಗೆ ಗೌರವ ಹೆಚ್ಚು

maarikamba microfinance
ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್‌ನ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ಆಯೋಜಿಸಿದ್ದ ಆಟೋಟ ಸ್ಪರ್ಧೆಯನ್ನು ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಉದ್ಘಾಟಿಸಿದರು. ಕೆ.ಎಸ್.ಈಶ್ವರಪ್ಪ, ಕೆ..ಕಾಂತೇಶ್, ಸುವರ್ಣಾ ಶಂಕರ್, ಲಕ್ಷ್ಮೀ ಶಂಕರ್‌ನಾಯ್ಕ ಇತರರಿದ್ದರು.
Published on

ಶಿವಮೊಗ್ಗ: ಮಹಿಳೆಯರು ಆರ್ಥಿಕವಾಗಿ ಸಬಲರಾದಾಗ ಅವಳಿಗೆ ಗೌರವ ಹೆಚ್ಚಾಗುತ್ತದೆ. ಇದಕ್ಕೆ ಕುಟುಂಬದ ಸಹಕಾರ ಅತ್ಯಗತ್ಯ ಎಂದು ಮಹಾನಗರ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಹೇಳಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ 77ನೇ ಜನ್ಮದಿನದ ಅಂಗವಾಗಿ ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್‌ನ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ಆಯೋಜಿಸಿದ್ದ ಆಟೋಟ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸ್ವಸಹಾಯ ಸಂಘಗಳ ಸಾವಿರಕ್ಕೂ ಹೆಚ್ಚು ಸದಸ್ಯರು ಉತ್ಸಾಹ ಕಂಡು ಖುಷಿಯಾಯಿತು. ಮಹಿಳೆ ಸದಾ ಮನೆಯೊಳಗೆ ಕುಟುಂಬದ ನಿರ್ವಹಣೆ ಹಾಗೂ ಮನೆ ಕೆಲಸದಲ್ಲಿ ತೊಡಗುತ್ತ ತನ್ನ ಸರ್ವಸ್ವವನ್ನು ಧಾರೆ ಎರೆದು, ತನ್ನಿಂದ ಏನೂ ಆಗುವುದಿಲ್ಲ ಎಂದುಕೊಂಡು ಬದುಕುತ್ತಿದ್ದಾಳೆ. ಮಹಿಳೆ ಆ ಭಾವನೆಯಿಂದ ಹೊರಬಂದು ತಾನು ಎಲ್ಲರಂತೆ ಸಶಕ್ತಳು ಹಾಗೂ ಏನು ಬೇಕಾದರೂ ಸಾಧಿಸಬಲ್ಲೆ ಎಂಬ ಛಲ ಮೈಗೂಡಿಸಿಕೊಳ್ಳಬೇಕಿದೆ. ಇದರಿಂದ ತನ್ನ ಕುಟುಂಬಕ್ಕೂ ಆರ್ಥಿಕ ನೆರವು ನೀಡುವ ರೀತಿ ಕಾರ್ಯನಿರ್ವಹಿಸಿದರೆ ಆಕೆಯ ಗೌರವವೂ ಹೆಚ್ಚಾಗುತ್ತದೆ ಎಂದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದ ಮೇಘನಾ ಮಾತನಾಡಿ, ಕೆ.ಎಸ್.ಈಶ್ವರಪ್ಪ ಅವರು ಸದಾಕಾಲ ಹೆಣ್ಣುಮಕ್ಕಳಿಗೆ ಬೆನ್ನೆಲುಬಾಗಿ ಮಾರ್ಗದರ್ಶನ ಮಾಡುತ್ತ ಬಂದಿದ್ದಾರೆ. ಯುವಕರೂ ನಾಚುವಂತೆ 77ನೇ ವಯಸ್ಸಿನಲ್ಲೂ ಅನೇಕ ಚಟುವಟಿಕೆಗಳ ಮೂಲಕ ಸಮಾಜ ಸೇವೆ ಮಾಡುತ್ತಿರುವುದು ಎಲ್ಲರಿಗೂ ಆದರ್ಶ ಎಂದರು.

ಕವಿತಾ ಯೋಗಪ್ಪನವರ್, ಮೇಘನಾ ಮತ್ತು ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಗೌತಮಿ ಗೌಡ ಅವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟಗಳಲ್ಲಿ ನೂರಾರು ಮಹಿಳೆಯರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರು.

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಮಾಜಿ ಮೇಯರ್ ಸುವರ್ಣಾ ಶಂಕರ್, ಮಾಜಿ ಉಪಮೇಯರ್ ಲಕ್ಷ್ಮೀ ಶಂಕರ್‌ನಾಯ್ಕ, ಮಾಜಿ ಸದಸ್ಯೆ ಆರತಿ ಪ್ರಕಾಶ್, ಅನಿತಾ ಗೌಡ, ಮೈಕ್ರೋ ಫೈನಾನ್ಸ್‌ನ ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net