ಬಾಡಿಗೆ ವಿಮಾನಕ್ಕೆ ಇಸಿಬಿ ಭಾರಿ ವೆಚ್ಚ ಪಾಕ್ ತಂಡಕ್ಕೆ4.7 ಕೋಟಿ ರೂ. , ವಿಂಡೀಸ್ ತಂಡಕ್ಕೆ 3.7 ಕೋಟಿ ರೂ. ಖರ್ಚು

page 9 7
Published on

ಲಂಡನ್: ಕರೊನಾ ಹಾವಳಿಯಿಂದಾಗಿ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳು ಇರುವುದರಿಂದಾಗಿ ಅಂತಾರಾಷ್ಟ್ರೀಯ ವಿಮಾನ ಗಳ ಹಾರಾಟವೂ ಸ್ಥಗಿತಗೊಂಡಿದೆ. ಇದರಿಂದಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ದ್ವಿಪಕ್ಷೀಯ ಸರಣಿ ಆಡಲು ಪ್ರವಾಸಿ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳು ಕರೆತರುವ ಬಾಡಿಗೆ ವಿಮಾನಕ್ಕೆ ಭಾರಿ ವೆಚ್ಚ ಮಾಡುವಂತಾಗಿದೆ. ವೆಸ್ಟ್ ಇಂಡೀಸ್ ತಂಡವನ್ನು ಕರೆತರಲು ಈಗಾಗಲೆ 2 ಬಾಡಿಗೆ ವಿಮಾನಕ್ಕಾಗಿ 3.7 ಕೋಟಿ ರೂ. ಮೊತ್ತವನ್ನು ಇಸಿಬಿ ವ್ಯಯಿಸಿದೆ. ಇದೀಗ ಪಾಕಿಸ್ತಾನ ತಂಡವನ್ನು ಕರೆತರುವ ಬಾಡಿಗೆ ವಿಮಾನಕ್ಕಾಗಿ ಮತ್ತೆ 4.7 ಕೋಟಿ ರೂ. ಮೊತ್ತವನ್ನು ವ್ಯಯಿಸಬೇಕಾಗಿದೆ.

ವಿಂಡೀಸ್ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಕ್ರಿಕೆಟ್ ಸರಣಿಗಳನ್ನು ಆಡಲು ಇಸಿಬಿ ಸಿದ್ಧತೆ ಮಾಡಿಕೊಂಡಿದೆ. ವಿಂಡೀಸ್ ತಂಡ ಈಗಾಗಲೆ ಇಂಗ್ಲೆಂಡ್​ನಲ್ಲಿ ಕ್ವಾರಂಟೈನ್​ನಲ್ಲಿದ್ದು, ಜುಲೈ 8ರಿಂದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಪಾಕಿಸ್ತಾನ ತಂಡ ಮಾಸಾಂತ್ಯದಲ್ಲಿ ಇಂಗ್ಲೆಂಡ್​ಗೆ ತೆರಳುವ ನಿರೀಕ್ಷೆ ಇದ್ದು, ಸೆಪ್ಟೆಂಬರ್​ನಲ್ಲಿ 3 ಟೆಸ್ಟ್ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ.

ವಿಂಡೀಸ್ ವಿರುದ್ಧ ಸರಣಿಯ ಪ್ರತಿ ಟೆಸ್ಟ್​ನಿಂದ 188 ಕೋಟಿ ರೂ.ನಂತೆ ಒಟ್ಟು 564 ಕೋಟಿ ರೂ. ಆದಾಯವನ್ನು ಟಿವಿ ನೇರಪ್ರಸಾರ ಹಕ್ಕಿನಿಂದ ಸಂಪಾದಿಸುವ ನಿರೀಕ್ಷೆ ಇದೆ. ಬಳಿಕ ಪಾಕಿಸ್ತಾನ ವಿರುದ್ಧದ ಸರಣಿಯ ನೇರಪ್ರಸಾರ ಹಕ್ಕಿನಿಂದ ಒಟ್ಟಾರೆ 707 ಕೋಟಿ ರೂ. ಆದಾಯದ ನಿರೀಕ್ಷೆಯಲ್ಲಿದೆ. -ಏಜೆನ್ಸೀಸ್

ಐಪಿಎಲ್​ಗೂ ಇದೇ ವೆಚ್ಚ ಹೊರೆಯಾದೀತು: ಬಿಸಿಸಿಐ ಒಂದು ವೇಳೆ ಭಾರತದಲ್ಲಿ ಅಥವಾ ವಿದೇಶದಲ್ಲಿ ಐಪಿಎಲ್ ಆಯೋಜನೆಗೆ ಮುಂದಾದರೂ ಬಾಡಿಗೆ ವಿಮಾನದ ಮೂಲಕವೇ ವಿದೇಶಿ ಆಟಗಾರರನ್ನು ಕರೆಸಿಕೊಳ್ಳ ಬೇಕಾಗುತ್ತದೆ. ಇದರಿಂದ ಬಿಸಿಸಿಐ ಕೂಡ ಬಾಡಿಗೆ ವಿಮಾನಕ್ಕಾಗಿ ಹೆಚ್ಚಿನ ಮೊತ್ತವನ್ನು ವ್ಯಯಿಸಬೇಕಾಗುತ್ತದೆ. ಸಾಮಾನ್ಯವಾಗಿ ವಿದೇಶಿ ಕ್ರಿಕೆಟಿಗರು ಐಪಿಎಲ್​ಗೆ 5 ದಿನ ಮುನ್ನವಷ್ಟೇ ಫ್ರಾಂಚೈಸಿಯನ್ನು ಕೂಡಿಕೊಳ್ಳುತ್ತಾರೆ. ಆದರೆ ಹಾಲಿ ಪರಿಸ್ಥಿತಿಯಲ್ಲಿ 2 ವಾರ ಮುಂಚಿತವಾಗಿಯೇ ಆಗಮಿಸಿ ಕ್ವಾರಂಟೈನ್​ನಲ್ಲಿರಬೇಕಾದ ಸವಾಲು ಎದುರಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net