

ಲಂಡನ್: ಇಂಗ್ಲೆಂಡ್ ನೆಲದಲ್ಲಿ ನಡೆಯುವ ಭಾರತ ವಿರುದ್ಧದ ಟೆಸ್ಟ್ ಸರಣಿಯ ವಿಜೇತರಿಗೆ ಮನ್ಸೂರ್ ಅಲಿ ಖಾನ್ ಪಟೌಡಿ ಟ್ರೋಫಿಯನ್ನು ವಿತರಿಸಲಾಗುತ್ತದೆ. ಆದರೆ ಐಪಿಎಲ್ ನಂತರ ಜೂನ್ 20ರಿಂದ ನಡೆಯಲಿರುವ ಭಾರತ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಮುನ್ನ ಈ ಟ್ರೋಫಿಯನ್ನೇ ನಿವೃತ್ತಿಗೊಳಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಯೋಜಿಸಿದೆ.
ಇದಕ್ಕೆ ನಿಖರವಾದ ಕಾರಣವೇನೆಂದು ತಿಳಿದುಬಂದಿಲ್ಲ. ಆದರೆ ಇದರ ಬದಲಾಗಿ ಬೇರೊಂದು ಟ್ರೋಫಿಯನ್ನು ಇಸಿಬಿ ಪರಿಚಯಿಸಿದೆ ಮತ್ತು ಈ ಟ್ರೋಫಿ ಉಭಯ ದೇಶಗಳ ದಿಗ್ಗಜ ಆಟಗಾರರ ಹೆಸರನ್ನು ಹೊಂದಿರಲಿದೆ ಎನ್ನಲಾಗಿದೆ. ಭಾರತ ತಂಡದ ಮಾಜಿ ನಾಯಕ ಎಂಎಕೆ ಪಟೌಡಿ ಸ್ಮರಣಾರ್ಥ 2007ರಿಂದ ಪಟೌಡಿ ಟ್ರೋಫಿಯನ್ನು ನೀಡಲಾಗುತ್ತಿದೆ. ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ಗೆ 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಸಿಬಿ ಈ ಟ್ರೋಫಿಯನ್ನು ಆರಂಭಿಸಿತ್ತು.
ಮೊದಲ ಸರಣಿಯನ್ನು ಭಾರತವೇ ಗೆದ್ದಾಗ ಆಗಿನ ನಾಯಕ ರಾಹುಲ್ ದ್ರಾವಿಡ್ಗೆ ಸ್ವತಃ ಪಟೌಡಿ ಅವರೇ ಟ್ರೋಫಿ ವಿತರಿಸಿದ್ದರು. ಭಾರತದಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವಿಜೇತರಿಗೆ ಆಂಥೋನಿ ಡಿ ಮೆಲ್ಲೋ ಟ್ರೋಫಿಯನ್ನು ವಿತರಿಸಲಾಗುತ್ತದೆ. ಬಿಸಿಸಿಐ ಮಾಜಿ ಅಧ್ಯಕ್ಷ ಆಂಥೋನಿ ಡಿ ಮೆಲ್ಲೋ ಸ್ಮರಣಾರ್ಥ ಈ ಟ್ರೋಫಿ ಆರಂಭಿಸಲಾಗಿತ್ತು.