

ಮುಂಬೈ: ಟೀಮ್ ಇಂಡಿಯಾ 17 ವರ್ಷಗಳ ಟಿ20 ವಿಶ್ವಕಪ್ ಗೆದ್ದ ನಂತರ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಅವರು ವಿಶ್ವಕಪ್ ವಿಜೇತ ತಂಡದ ಎಲ್ಲ ಆಟಗಾರರು ಹಾಗೂ ತರಬೇತಿ ಬಳಗಕ್ಕೆ ಒಟ್ಟು 125 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದರು. ಆದರೆ ಬಹುಮಾನ ಮೊತ್ತ ಆಟಗಾರರು ಮತ್ತು ತರಬೇತಿ ಸಿಬ್ಬಂದಿಗೆ ಹೇಗೆ ಹಂಚಲಾಗುತ್ತದೆ ಎಂಬುದನ್ನು ಭಾರತೀಯ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿಲ್ಲ. ಆದರೆ ಮೂಲಗಳ ಪ್ರಕಾರ ಒಂದೂ ಪಂದ್ಯವನ್ನು ಆಡದ ಸಂಜು ಸ್ಯಾಮ್ಸನ್ ಮತ್ತು ಯುಜುವೇಂದ್ರ ಚಾಹಲ್ ಸೇರಿ ಭಾರತ ತಂಡದ ಎಲ್ಲ 15 ಆಟಗಾರರು ತಲಾ 5 ಕೋಟಿ ಹಾಗೂ ಮುಖ್ಯಕೋಚ್ ರಾಹುಲ್ ದ್ರಾವಿಡ್ 2.5 ಕೋಟಿ ರೂ. ಪಡೆಯಲಿದ್ದಾರೆ ಎನ್ನಲಾಗಿದೆ. ಮೀಸಲು ಆಟಗಾರರು ಬಹುಮಾನ ಪಡೆಯಲು ಅರ್ಹರೆನಿಸಿದ್ದಾರೆ.
ವೆಸ್ಟ್ ಇಂಡೀಸ್ ಹಾಗೂ ಆಮೆರಿಕ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮ ಪಡೆ ಚಾಂಪಿಯನ್ ಎನಿಸಿ, 11 ವರ್ಷಗಳ ಐಸಿಸಿ ಟ್ರೋಫಿ ಗೆಲುವಿನ ಕನಸು ನನಸಾಗಿಸಿತ್ತು. ಟ್ರೋಫಿ ಗೆದ್ದ ಮರು ದಿನವೇ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಎಲ್ಲ ಆಟಗಾರರು, ತರಬೇತಿ ಸಿಬ್ಬಂದಿಗೆ ಬಹುಮಾನ ಘೋಷಿಸಿದ್ದರು. ಟೀಮ್ ಇಂಡಿಯಾದ ಪ್ರಧಾನ ತಂಡದಲ್ಲಿದ್ದ ಎಲ್ಲ ಆಟಗಾರರ ಜತೆಗೆ ಮೀಸಲು ಆಟಗಾರರಾಗಿದ್ದ ರಿಂಕು ಸಿಂಗ್, ಶುಭಮಾನ್ ಗಿಲ್, ಆವೇಶ್ ಖಾನ್ ಮತ್ತು ಖಲೀಲ್ ಅಹ್ಮದ್ ತಲಾ 1 ಕೋಟಿ ರೂ. ಬಹುಮಾನ ಪಡೆಯಲಿದ್ದಾರೆ.
ತರಬೇತಿ ಸಿಬ್ಬಂದಿ ಕೋಚ್ ರಾಹುಲ್ ದ್ರಾವಿಡ್ ಸೇರಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಹಾಂಬ್ರ್ರೆ ತಲಾ 2.5 ಕೋಟಿ ರೂ. ಪಡೆಯಲಿದ್ದಾರೆ. ಇದರೊಂದಿಗೆ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸೇರಿ ಆಯ್ಕೆ ಸಮಿತಿಯ ಎಲ್ಲ 5 ಸದಸ್ಯರು ತಲಾ 1 ಕೋಟಿ ರೂ ಪಡೆಯಲಿದ್ದಾರೆ.
ಟೀಮ್ ಇಂಡಿಯಾ ಸಹಾಯಕ ಸಿಬ್ಬಂದಿಯ ಕಮಲೇಶ್ ಜೈನ್, ಯೋಗೇಶ್ ಪರ್ಮಾರ್, ತುಳಸಿ ರಾಮ್ (ಫಿಸಿಯೋಥೆರಪಿಸ್ಟ್ ), ರಾವೇಂದ್ರ ದ್ವಿಗಿ, ನುವಾನ್ ಉದೆನೆಕೆ, ದಯಾನಂದ್ ಗರಾನಿ (ಥ್ರೋ ಡೌನ್ ತಜ್ಞರು), ರಾಜೀವ್ ಕುಮಾರ್, ಅರಣ್ ಕಾನಡೆ (ಮಸಾಜ್) ಹಾಗೂ ಸೋಹಮ್ ದೇಸಾಯಿ (ಸ್ಟ್ರೆಂತ್ ಮತ್ತು ಕಂಡೀಷನಿಂಗ್) ತಲಾ < 2 ಕೋಟಿ ಬಹುಮಾನ ಪಡೆಯಲಿದ್ದಾರೆ. ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಹಾಗೂ ಆಯ್ಕೆ ಸಮಿತಿ ಹೊರತುಪಡಿಸಿ ವಿಡಿಯೋ ವಿಶ್ಲೇಷಕರು, ಬಿಸಿಸಿಐ ಸಿಬ್ಬಂದಿ ಸದಸ್ಯರು, ಮಾಧ್ಯಮ ಅಧಿಕಾರಿಗಳು ಹಾಗೂ ಲಾಜಿಸ್ಟಿಕ್ಸ್ ಮ್ಯಾನೇಜರ್ಗಳಿಗೂ ಸಹ ಬಹುಮಾನ ನೀಡಲಾಗುವುದು.ಆಟಗಾರರು ಸೇರಿ 42 ಸದಸ್ಯರ ತಂಡ 2024ರ ಟಿ20 ವಿಶ್ವಕಪ್ ಟೂರ್ನಿಗೆ ತೆರಳಿತ್ತು ಎನ್ನಲಾಗಿದೆ.