

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮದುವೆಯಾಗಿ ಮುಂಬರುವ ಡಿಸೆಂಬರ್ಗೆ 3 ವರ್ಷಗಳಾಗಲಿವೆ. ಆದರೆ, ಮದುವೆಯಾದ ಆರಂಭದ 6 ತಿಂಗಳಲ್ಲಿ ಕೇವಲ 21 ದಿನ ಮಾತ್ರ ಈ ಜೋಡಿ ಒಟ್ಟಾಗಿದ್ದರಂತೆ. ಈ ಗೌಪ್ಯ ವಿಚಾರವನ್ನು ಸ್ವತಃ ಅನುಷ್ಕಾ ಶರ್ಮಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ವೆಬ್ ಸಿರೀಸ್ನಲ್ಲಿ ಪ್ರಕಾಶ್ ರಾಜ್ ಮುಖ್ಯಭೂಮಿಕೆ
ಹೌದು, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮದುವೆಯಾದ ಸಂದರ್ಭದಲ್ಲಿ ಸಾಲು ಸಾಲು ವಿದೇಶಿ ಸರಣಿಗಳಲ್ಲಿ ಭಾಗವಹಿಸಿದ್ದರು. ಟೆಸ್ಟ್, ಏಕದಿನ ಮತ್ತು ಟಿ 20 ಸರಣಿಗಳಲ್ಲಿ ಭಾಗವಹಿಸಿದ್ದರು. ಆ ವೇಳೆ ಬಿಡುವು ಮಾಡಿಕೊಂಡು ಅನುಷ್ಕಾ ಮತ್ತು ಕೊಹ್ಲಿ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು. ‘ವಿರಾಟ್ ನನ್ನನ್ನು ಭೇಟಿಯಾಗಲು ಅಥವಾ ನಾನು ವಿರಾಟ್ನನ್ನು ಭೇಟಿಯಾಗಲು ಬಂದಾಗೆಲ್ಲ ಜನ ಹಾಲಿಡೇ ಎಂದುಕೊಳ್ಳುತ್ತಿದ್ದರು. ಆದರೆ, ವಿರಾಟ್ ಆನ್ ಡ್ಯೂಟಿ ಅಂತ ಯಾರಿಗೂ ಗೊತ್ತಿರುತ್ತಿರಲಿಲ್ಲ’ ಎನ್ನುತ್ತಾರೆ ಅನುಷ್ಕಾ.
‘ಮದುವೆಯಾದ ಆರಂಭದ 6 ತಿಂಗಳು ನಾವು ಒಟ್ಟಿಗೆ ಕಳೆದ ದಿನಗಳು ಕೇವಲ 21 ದಿನ ಮಾತ್ರ. ನಾನು ಅದನ್ನು ಲೆಕ್ಕಹಾಕಿದ್ದೇನೆ. ವಿದೇಶದಲ್ಲಿದ್ದಾಗ ಭೇಟಿಯಾದಾಗ, ಒಟ್ಟಿಗೆ ಕುಳಿತು ಒಂದೇ ಊಟಮಾಡುವಷ್ಟು ಸಮಯ ಸಿಗುತ್ತಿತ್ತು. ಆ ಸಮಯವೇ ನನಗೆ ಬಹುಮುಖ್ಯವಾಗಿತ್ತು’ ಎಂಬುದು ಅನುಷ್ಕಾ ಮಾತು.
ಇದೀಗ ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸುದೀರ್ಘ ಸಮಯವನ್ನು ಒಟ್ಟಿಗೆ ಕಳೆಯುತ್ತಿದ್ದೇವೆ ಎಂದೂ ಹೇಳಿಕೊಳ್ಳುತ್ತಾರೆ ಅನುಷ್ಕಾ. (ಏಜೆನ್ಸೀಸ್)