

ಅನಂತಪುರ: ಎಡಗೈ ಬ್ಯಾಟರ್ ತಿಲಕ್ ವರ್ಮ (111* ರನ್, 193 ಎಸೆತ, 9 ಬೌಂಡರಿ) ಹಾಗೂ ಪ್ರಥಮ್ ಸಿಂಗ್ (122 ರನ್, 189 ಎಸೆತ, 12 ಬೌಂಡರಿ, 1 ಸಿಕ್ಸರ್) ಭರ್ಜರಿ ಶತಕಗಳ ನೆರವಿನಿಂದ ಭಾರತ ಎ ತಂಡ ದೇಶೀಯ ಟೂರ್ನಿ ದುಲೀಪ್ ಟ್ರೋಫಿಯಲ್ಲಿ ಭಾರತ ಡಿ ಎದುರು ಬಿಗಿ ಹಿಡಿತ ಸಾಧಿಸಿದ್ದು, ಗೆಲುವಿನತ್ತ ದೃಷ್ಟಿ ನೆಟ್ಟಿದೆ.
ಆರ್‌ಡಿಟಿಎಸ್ ಎ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಶನಿವಾರ 1 ವಿಕೆಟ್‌ಗೆ 115 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ ಎ, ತಿಲಕ್ ವರ್ಮ ಹಾಗೂ ಶಾಶ್ವತ್ ರಾವತ್ (64* ರನ್, 88 ಎಸೆತ, 7 ಬೌಂಡರಿ) ಜತೆಯಾಟದ ಬಲದಿಂದ 98 ಓವರ್‌ಗಳಲ್ಲಿ 3 ವಿಕೆಟ್‌ಗೆ 380 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. 487 ರನ್‌ಗಳ ಗುರಿ ಪಡೆದಿರುವ ಭಾರತ ಡಿ, ಆರಂಭಿಕ ಅಥರ್ವ ತೈಡೆ (0) ವಿಕೆಟ್ ಕಳೆದುಕೊಂಡು ದಿನದಂತ್ಯಕ್ಕೆ 19 ಓವರ್‌ಗಳಲ್ಲಿ 1 ವಿಕೆಟ್‌ಗೆ 62 ರನ್ ಕಲೆಹಾಕಿದ್ದು, ಗೆಲುವಿಗೆ ಇನ್ನೂ 426 ರನ್‌ಗಳಿಸಬೇಕಿದೆ. ಭಾನುವಾರ ಪಂದ್ಯದ ಅಂತಿಮ ದಿನವಾಗಿದ್ದು, ಮಯಾಂಕ್ ಅಗರ್ವಾಲ್ ಪಡೆಗೆ 9 ವಿಕೆಟ್ ಅವಶ್ಯವಿದೆ. ಆರಂಭಿಕ ಯಶ್ ದುಬೆ (15*) ಜತೆಯಾಗಿ ರಿಕಿ ಭುಯ್ (44*) ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಭಾರತ ಎ: 290 ಹಾಗೂ 3 ವಿಕೆಟ್‌ಗೆ 380 (ಪ್ರಥಮ್ 122, ತಿಲಕ್ 111*, ಪರಾಗ್ 20, ಶಾಶ್ವತ್ 64*, ಸೌರಭ್ 110ಕ್ಕೆ 2). ಭಾರತ ಡಿ: 183 ಹಾಗೂ 1 ವಿಕೆಟ್‌ಗೆ 62 (ಯಶ್ ದುಬೆ 15*, ಅಥರ್ವ 0, ರಿಕಿ ಭುಯ್ 44*, ಖಲೀಲ್ ಅಹ್ಮದ್ 17ಕ್ಕೆ 1).
ಮುನ್ನಡೆ ಹಿಗ್ಗಿಸಿದ ತಿಲಕ್: ಬೆಳಗ್ಗೆ ವೈಯಕ್ತಿಕ 60 ರನ್‌ಗಳಿಂದ ದಿನದ ಆಟ ಆರಂಭಿಸಿದ ಪ್ರಥಮ್ ಸಿಂಗ್ ಜತೆಯಾದ ತಿಲಕ್ ವರ್ಮ ಜೋಡಿ ಎ ತಂಡದ ಮುನ್ನಡೆ ಹೆಚ್ಚಿಸಿತು. ಇವರಿಬ್ಬರು 2ನೇ ವಿಕೆಟ್‌ಗೆ 190 ಎಸೆತಗಳಲ್ಲಿ 104 ರನ್ ಪೇರಿಸಿದರು. ಮೊದಲ ಅವಧಿಯಲ್ಲಿ ಶತಕ ಸಿಡಿಸಿದ 32 ವರ್ಷದ ಪ್ರಥಮ್ ಸಿಂಗ್ ಭೋಜನ ವಿರಾಮಕ್ಕೆ ಮುನ್ನ ಸೌರಭ್ ಕುಮಾರ್ ವಿಕೆಟ್ ನೀಡಿದರು. ಬಳಿಕ ರಿಯಾನ್ ಪರಾಗ್ (20) ಬೇಗನೆ ನಿರ್ಗಮಿಸಿದರು. ನಂತರ ತಿಲಕ್ ವರ್ಮ ಜತೆಯಾದ ಶಾಶ್ವತ್ ರಾವತ್ ಮುನ್ನಡೆಯನ್ನು 450ರ ಗಡಿ ದಾಟಿಸಿದರು. ತಿಲಕ್ ವರ್ಮ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಐದನೇ ಶತಕ ಸಿಡಿಸಿ ಲಯಕ್ಕೆ ಮರಳಿದರು. ಇವರಿಬ್ಬರು 4ನೇ ವಿಕೆಟ್ 174 ಎಸೆತದಲ್ಲಿ 114 ರನ್ ಕಸಿದರು. ತಿಲಕ್ ಸಾಥ್ ನೀಡಿದ ಶಾಶ್ವತ್ ಅರ್ಧಶತಕ ಪೂರೈಸಿದರು. ಚಹಾ ವಿರಾಮ ಬಳಿಕ 15 ನಿಮಿಷ ಬ್ಯಾಟಿಂಗ್ ನಡೆಸಿದ ಎ ತಂಡ ಬಳಿಕ ಡಿಕ್ಲೇರ್ ೋಷಿಸಿತು.