

ಅನಂತಪುರ: ದುಲೀಪ್ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯಗಳು ಗುರುವಾರ ಆರಂಭವಾಗಲಿದ್ದು, ಮೊದಲ ಸುತ್ತಿನಲ್ಲಿ ಸೋಲುಂಡಿರುವ ಭಾರತ ಎ- ಭಾರತ ಡಿ ತಂಡಗಳು ಅನಂತಪುರದ ಎ ಗ್ರೌಂಡ್‌ನಲ್ಲಿ ಮುಖಾಮುಖಿಯಾಗಲಿವೆ. ಮತ್ತೊಂದು ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ಮುನ್ನಡೆಸಲಿರುವ ಭಾರತ ಸಿ ಹಾಗೂ ಅಭಿಮನ್ಯು ಈಶ್ವರನ್ ನಾಯಕತ್ವದ ಭಾರತ ಬಿ ತಂಡಗಳು ಬಿ ಗ್ರೌಂಡ್‌ನಲ್ಲಿ ಸೆಣಸಾಡಲಿವೆ. ಶುಭಮಾನ್ ಗಿಲ್ ಗೈರಿನಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಭಾರತ ಎ ತಂಡವನ್ನು ಮುನ್ನಡೆಸಲಿದ್ದಾರೆ.
ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳಲ್ಲಿ ಭಾರತ ಸಿ, ಬಿ ತಂಡಗಳು ಶುಭಾರಂಭ ಕಂಡಿದ್ದು, ತಲಾ ಆರು ಅಂಕ ಕಲೆಹಾಕಿವೆ. ರೌಂಡ್ ರಾಬಿನ್‌ನಲ್ಲಿ ಎಲ್ಲ ತಂಡಗಳು ತಲಾ 3 ಪಂದ್ಯ ಆಡಲಿದ್ದು, ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಆರಂಭಿಕ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಶುಭಮಾನ್ ಗಿಲ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ ಬಾಂಗ್ಲಾದೇಶ ಸರಣಿಗಾಗಿ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದು, ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಆಯ್ಕೆ ಸಮಿತಿಯ ಗಮನ ಸೆಳೆಯಲು ಯುವ ಆಟಗಾರರಿಗೆ ಇದು ಉತ್ತಮ ಅವಕಾಶ ಎನಿಸಿದೆ. ಮೊದಲ ಪಂದ್ಯದಿಂದ ಹೊರಗುಳಿದಿದ್ದ ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣ, ಭಾರತ ಎ ಪರ 2ನೇ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಭಾರತ ತಂಡದ ಆಯ್ಕೆಗೆ ಪ್ರಸಿದ್ಧ ಕೃಷ್ಣ ಅವರನ್ನು ಪರಿಗಣಿಸಲು ಅವರ ಪ್ರದರ್ಶನವನ್ನು ಆಯ್ಕೆಗಾರರು ಗಮನಿಸಲಿದ್ದಾರೆ ಎನ್ನಲಾಗಿದೆ. 2022ರ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ವಿಲವಾಗಿರುವ ಮಯಾಂಕ್, ಮತ್ತೆ ಪುನರಾಗಮನದ ತವಕದಲ್ಲಿದ್ದಾರೆ.
ಇನ್ನು ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯದಕ್ಕೆ ಭಾರತ ಟೆಸ್ಟ್ ತಂಡದಿಂದ ಕೈ ಬಿಡಲಾಗಿರುವ ಶ್ರೇಯಸ್ ಅಯ್ಯರ್, ಕನ್ನಡಿಗ ದೇವದತ್ ಪಡಿಕ್ಕಲ್ ಆರಂಭಿಕ ಸುತ್ತಿನಲ್ಲಿ ಅರ್ಧಶತಕ ಸಿಡಿಸಿ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್ ಡಿ ತಂಡದಲ್ಲಿರುವ ಪ್ರಮುಖ ಆಟಗಾರರಾಗಿದ್ದಾರೆ.
ವಿದ್ವತ್-ವೈಶಾಕ್ ಎದುರಾಳಿ: ಭಾರತ ಸಿ-ಬಿ ತಂಡಗಳ ಕಾದಾಟದಲ್ಲಿ ಕರ್ನಾಟಕದ ವೇಗಿಗಳಾದ ವೈಶಾಕ್ ವಿಜಯ್ ಕುಮಾರ್, ವಿದ್ವತ್ ಕಾವೇರಪ್ಪ ಪರಸ್ಪರ ಎದುರಾಗಲಿದ್ದಾರೆ. ದೇಶೀಯ ಟೂರ್ನಿಯಲ್ಲಿ ಉತ್ತಮ ದಾಖಲೆ ಹೊಂದಿದ್ದರೂ ಆರಂಭಿಕ ಸುತ್ತಿನಿಂದ ಕೈಬಿಡಲಾಗಿದ್ದ ಎಡಗೈ ಬ್ಯಾಟರ್ ರಿಂಕು ಸಿಂಗ್ ಭಾರತ ಬಿ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಅಭಿಮನ್ಯು ಈಶ್ವರನ್ ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ರನ್‌ಗಳಿಸಲು ಪರದಾಡಿದ್ದರು. ಇಂಗ್ಲೆಂಡ್ ವಿರುದ್ಧ ಯಶಸ್ವಿ ಟೆಸ್ಟ್ ಪದಾರ್ಪಣೆ ಮಾಡಿದ್ದ ರ್ಸ್ರಾಜ್ ಖಾನ್‌ಗೆ ಸಹೋದರ್ ಮುಶೀರ್ ಖಾನ್ ನಿಕಟ ಪೈಪೋಟಿ ಎನಿಸಿದ್ದಾರೆ. ಕಳೆದ 10 ಇನಿಂಗ್ಸ್‌ಗಳಲ್ಲಿ ರ್ಸ್ರಾಜ್ ನಿರ್ವಹಣೆ ಸಾಧಾರಣ ಎನಿಸಿದೆ. ಆಸ್ಟ್ರೇಲಿಯಾ ಎ ವಿರುದ್ಧ ಸರಣಿಗೆ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವ ಮುಶೀರ್ ಈ ಪಂದ್ಯದ ಬಳಿಕ ರಾಷ್ಟ್ರೀಯ ಭಾರತ ಎ ತಂಡ ಸೇರಲಿದ್ದಾರೆ. ರಿಷಭ್ ಪಂತ್, ಯಶಸ್ವಿ ಜೈಸ್ವಾಲ್ ಅಲಭ್ಯರಾಗಿದ್ದಾರೆ. ಮೀಸಲು ಆರಂಭಿಕ ಆಟಗಾರರ ರೇಸ್‌ನಲ್ಲಿರುವ ಸಾಯಿ ಸುದರ್ಶನ್, ಋತುರಾಜ್ ಗಾಯ್ಕಕ್ವಾಡ್ ಟೀಮ್ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ತವಕದಲ್ಲಿದ್ದಾರೆ. ಹಿಂದಿನ ಪಂದ್ಯ ಹೀರೋ ಮಾನವ್ ಸುಥಾರ್ ಸಿ ತಂಡದಲ್ಲಿ ಗಮನ ಸೆಳೆದಿದ್ದಾರೆ. ರಜತ್ ಪಾಟೀದಾರ್ ಸಹ ರಾಷ್ಟ್ರೀಯ ತಂಡದಿಂದ ಹೊರಬಿದ್ದಿದ್ದಾರೆ.
ಆರಂಭ: ಬೆಳಗ್ಗೆ 9.30
ನೇರಪ್ರಸಾರ: ಜಿಯೋ ಸಿನಿಮಾ