ಮಯಾಂಕ್ ಪಡೆಗೆ ಭರ್ಜರಿ ಗೆಲುವು: ಶ್ರೇಯಸ್ ಅಯ್ಯರ್ ಬಳಗಕ್ಕೆ ಸತತ 2ನೇ ಸೋಲು

New-Project-15
Published on

ಅನಂತಪುರ: ರಿಕಿ ಭುಯ್ (113 ರನ್, 195 ಎಸೆತ, 14 ಬೌಂಡರಿ, 3 ಸಿಕ್ಸರ್) ಶತಕದ ಪ್ರತಿರೋಧದ ನಡುವೆಯೂ ಭಾರತ ಡಿ ತಂಡ ದೇಶೀಯ ಕ್ರಿಕೆಟ್ ಟೂರ್ನಿ ದುಲೀಪ್ ಟ್ರೋಫಿಯಲ್ಲಿ ಭಾರತ ಎ ಎದುರು 186 ರನ್‌ಗಳಿಂದ ಸೋಲು ಅನುಭವಿಸಿದೆ.

ಸ್ಪಿನ್ನರ್‌ಗಳಾದ ತನುಷ್ ಕೋಟ್ಯಾನ್ (73ಕ್ಕೆ 4) ಹಾಗೂ ಶಮ್ಸ್ ಮುಲಾನಿ (117ಕ್ಕೆ 3) ಬಿಗಿ ದಾಳಿಯ ನೆರವಿನಿಂದ ಮಯಾಂಕ್ ಅಗರ್ವಾಲ್ ಪಡೆ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದರೆ, ಶ್ರೇಯಸ್ ಅಯ್ಯರ್ ಬಳಗ ಸತತ 2ನೇ ಸೋಲಿನೊಂದಿಗೆ ಅಂಕಪಟ್ಟಿಯ ಕೊನೇ ಸ್ಥಾನದಲ್ಲೇ ಉಳಿದು ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದೆ.

ಆರ್‌ಡಿಟಿಎಸ್ ಎ ಗ್ರೌಂಡ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಗೆಲುವಿಗೆ 488ರನ್ ಗುರಿ ಪಡೆದಿದ್ದ ಭಾರತ ಡಿ ತಂಡ 82.2 ಓವರ್‌ಗಳಲ್ಲಿ 301 ರನ್‌ಗಳಿಗೆ ದ್ವಿತೀಯ ಇನಿಂಗ್ಸ್‌ನಲ್ಲಿ ಸರ್ವಪತನ ಕಂಡಿತು. ಬೆಳಗ್ಗೆ 1 ವಿಕೆಟ್‌ಗೆ 62 ರನ್‌ಗಳಿಂದ 4ನೇ ದಿನದ ಆಟ ಆರಂಭಿಸಿದ ರಿಕಿ ಭುಯ್ ಹಾಗೂ ಯಶ್ ದುಬೆ (37) ಮತ್ತೆ 40 ರನ್ ಪೇರಿಸಿ ಬೇರ್ಪಟ್ಟಿತು. ನಂತರ ಮೊದಲ ಇನಿಂಗ್ಸ್‌ನಲ್ಲಿ ಶತಕ ವಂಚಿತರಾಗಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ (1) ಶಮ್ಸ್ ಮುಲಾನಿ ಎಸೆತದಲ್ಲಿ ಬೌಲ್ಡ್ ಆದರು. ಬಳಿಕ ನಾಯಕ ಶ್ರೇಯಸ್ ಅಯ್ಯರ್ (41) ಹಾಗೂ ರಿಕಿ ಭುಯ್ 4ನೇ ವಿಕೆಟ್ 90 ಎಸೆತಗಳಲ್ಲಿ 53 ರನ್‌ಗಳಿಸಿ ಚೇತರಿಕೆ ನೀಡಿದರು. ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ (40) ಕೆಲ ಹೊತ್ತು ಬಿರುಸಿನಾಟದ ಮೂಲಕ ರನ್ ಕಲೆಹಾಕಿದರು. ಇವರಿಬ್ಬರು ಶಮ್ಸ್ ಮುಲಾನಿಗೆ ವಿಕೆಟ್ ಒಪ್ಪಿಸಿದರು. ಕೆಳ ಕ್ರಮಾಂಕದಲ್ಲಿ ಸೌರಭ್ ಕುಮಾರ್ (22), ಹರ್ಷಿತ್ ರಾಣಾ (24) ಹೋರಾಟ ಸೋಲಿನ ಅಂತರ ತಗ್ಗಿಸಿತು.

ಭಾರತ ಎ: 290 ಹಾಗೂ 3 ವಿಕೆಟ್ 380 ಡಿ. ಭಾರತ ಡಿ: 183 ಹಾಗೂ 82.2 ಓವರ್‌ಗಳಲ್ಲಿ 301 (ಯಶ್ ದುಬೆ 37, ರಿಕಿ ಭುಯ್ 113, ಪಡಿಕ್ಕಲ್ 1,ಶ್ರೇಯಸ್ 41, ಸ್ಯಾಮ್ಸನ್ 40, ಸೌರಭ್ 22, ಹರ್ಷಿತ್ 24, ತನುಷ್ 73ಕ್ಕೆ 4, ಶಮ್ಸ್ ಮುಲಾನಿ 117ಕ್ಕೆ 3). ಪಂದ್ಯಶ್ರೇಷ್ಠ: ಶಮ್ಸ್ ಮುಲಾನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net