

ಬೆಂಗಳೂರು: ಕೋವಿಡ್-19 ಮಹಾಮಾರಿ ಜಗತ್ತಿನ ಮೂಲೆಮೂಲೆಯಲ್ಲೂ ಭೀತಿ ಸೃಷ್ಟಿಸಿದೆ. ಅರಸನಿಂದ ಹಿಡಿದು ಆಳಿನವರೆಗೂ ಇದರ ಕಾಟ ತಪ್ಪಿದ್ದಲ್ಲ. ಕಳೆದ ಎರಡು ತಿಂಗಳ ಕರೊನಾ ವೈರಸ್ ಭೀತಿಯಿಂದಾಗಿ, ಬೇಸಗೆಯಲ್ಲಿ ನಡೆಯಬೇಕಿದ್ದ ಕ್ರೀಡಾ ಚಟುವಟಿಕೆಗಳೇ ಸಂಪೂರ್ಣ ಸ್ತಬ್ಧಗೊಂಡಿವೆ. ಕೆಲ ವೃತ್ತಿಪರ ಕ್ರೀಡಾಪಟುಗಳು ಮನೆಯಲ್ಲೇ ಕುಳಿತು ಫಿಟ್ನೆಸ್ಗೆ ಗಮನ ಕೊಡುತ್ತಿದ್ದರೆ, ಮತ್ತೆ ಕೆಲವರು ಆನ್ಲೈನ್ ಮೂಲಕ ತರಬೇತುದಾರರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಇಂಥ ಆಪತ್ತಿನ ಸಮಯದಲ್ಲಿ ಆನ್ಲೈನ್ ಎಂಬುದೇ ಕ್ರೀಡಾಪಟುಗಳ ಪಾಲಿಗೆ ಆಶಾಕಿರಣವಾಗಿದೆ. ಚೆಸ್, ಶೂಟಿಂಗ್ ಕ್ರೀಡೆಗಳ ಬಳಿಕ ಈಗ ಕ್ರಿಕೆಟ್, ಬ್ಯಾಡ್ಮಿಂಟನ್, ಫುಟ್ಬಾಲ್, ಗಾಲ್ಪ್ಗಳಲ್ಲೂ ಮನೆಯಲ್ಲೇ ಇದ್ದು, ಆನ್ಲೈನ್ ಮೂಲಕ ತರಬೇತಿ ಪಡೆಯಲಾಗುತ್ತಿದೆ.
ಫುಟ್ಬಾಲ್: ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಈಗಾಗಲೇ ತನ್ನ 3 ಹಾಗೂ 4ನೇ ಗ್ರೇಡ್ನ 200 ರೆಫ್ರಿಗಳಿಗೆ ಆನ್ಲೈನ್ ಮೂಲಕ ತರಬೇತಿ ನೀಡುತ್ತಿದೆ. ಪ್ರತಿದಿನ ಮೂರು ಬಾರಿ ತಲಾ 2 ಗಂಟೆಗಳ ಕಾಲ ತರಬೇತಿ ನೀಡಲಾಗುತ್ತಿದೆ. ಫಿಟ್ನೆಸ್, ತಾಂತ್ರಿಕತೆ ದೃಷ್ಟಿಯಿಂದ ರೆಫ್ರಿಗಳಿಗೆ ಅನುಕೂಲವಾಗುತ್ತದೆ ಎಂದು ಎಐಎಫ್ಎಫ್ ರೆಫ್ರಿಗಳ ನಿರ್ದೇಶಕ ಜೆ.ರವಿಶಂಕರ್ ತಿಳಿಸಿದ್ದಾರೆ.
ಚೆಸ್: ಆನ್ಲೈನ್ ಮೂಲಕ ಹೆಚ್ಚು ಜನಪ್ರಿಯಗೊಂಡಿರುವ ಕ್ರೀಡೆ ಎಂದರೆ ಚೆಸ್. ಲಾಕ್ಡೌನ್ ಸಮಸ್ಯೆಯಲ್ಲೂ ಸಾಕಷ್ಟು ಜನರನ್ನು ಆಕರ್ಷಿಸಿದೆ. ಇದಕ್ಕೆ ಆನ್ಲೈನ್ ಅನುಕೂಲ. ಸ್ಥಳೀಯ ಮಟ್ಟದಿಂದ ಹಿಡಿತು ಅಂತಾರಾಷ್ಟ್ರೀಯ ಮಟ್ಟದವರೆಗೂ ಆನ್ಲೈನ್ ಚೆಸ್ ತರಬೇತಿ, ಟೂರ್ನಿಗಳು ಸಾಕಷ್ಟು ಪ್ರಸಿದ್ಧಿ ಪಡೆದಿವೆ.
ಗಾಲ್ಪ್: ಅತಿ ವಿಶಾಲವಾದ ಮೈದಾನದಲ್ಲಿ ನಡೆಯುವ ಕ್ರೀಡೆ ಗಾಲ್ಪ್ಗೂ ಆನ್ಲೈನ್ ಟಚ್ ಸಿಕ್ಕಿದೆ. ಕೋಚ್ ಇಂದ್ರಜಿತ್ ಭಲೊಟಿಯಾ ಹೇಳುವಂತೆ, ಸಿಎಫ್ಎಲ್ ಲೈವ್ ತರಗತಿಗಳ ಮೂಲಕ ದೇಶದ ಯಾವುದೇ ಮೂಲೆಯಲ್ಲಿರುವ ಅಗ್ರ ಆಟಗಾರರನ್ನು ಸಂಕರ್ಪಸಿ ತರಬೇತಿ ನೀಡಲಾಗುತ್ತಿದೆ. ಪ್ರತಿ ಅವಧಿಗೂ ಚರ್ಚಾಕೂಟಗಳು ನಡೆಯುತ್ತಿವೆ.
ಬ್ಯಾಡ್ಮಿಂಟನ್: ಕಳೆದ ಹಲವು ವರ್ಷಗಳಿಂದ ಸಾಕಷ್ಟು ಜನಪ್ರಿಯಗೊಂಡಿರುವ ಕ್ರೀಡೆ ಬ್ಯಾಡ್ಮಿಂಟನ್. ಪ್ರತಿ ಪಾಲಕರು ತಮ್ಮ ಮಕ್ಕಳು ಪಿವಿ ಸಿಂಧು, ಸೈನಾ ನೆಹ್ವಾಲ್ ಆಗಬೇಕು ಎಂದು ಕನಸು ಕಾಣುತ್ತಿರುವ ಕಾಲ ಇದು. ಎಲ್ಲ ಅಕಾಡೆಮಿಗಳು ಲಾಕ್ ಆಗಿರುವುದರಿಂದ ಆಟಗಾರರನ್ನು ಮಾನಸಿಕವಾಗಿ ಸದೃಢಗೊಳಿಸುವ ದೃಷ್ಟಿಯಿಂದ ಆನ್ಲೈನ್ ಮೂಲಕ ತರಗತಿ ತಗೆದುಕೊಳ್ಳಲಾಗುತ್ತಿದೆ. ಸ್ಕೈಪ್ ಮೂಲಕ ಫಿಟ್ನೆಸ್, ಸ್ಟ್ರೆಂಟ್, ಕಂಡೀಷನಿಂಗ್, ಯೋಗ ತರಗತಿ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಹೆಸರಾಂತ ಕೋಚ್ ವಿಮಲ್ ಕುಮಾರ್.
ಧೋನಿ, ಅಶ್ವಿನ್ ಆನ್ಲೈನ್ ಕಮಾಲ್: ಟೀಮ್ ಇಂಡಿಯಾ, ಐಪಿಎಲ್ನ ಸಿಎಸ್ಕೆ ತಂಡದಲ್ಲಿ ಕಮಾಲ್ ಮಾಡಿದ ಜೋಡಿ ಮಾಜಿ ಎಂಎಸ್ ಧೋನಿ ಹಾಗೂ ಸ್ಪಿನ್ನರ್ ಆರ್.ಅಶ್ವಿನ್. ಬಹುತೇಕ ವೃತ್ತಿಜೀವನದ ಸಂಧ್ಯಾಕಾಲದಲ್ಲಿರುವ ಈ ಜೋಡಿ ಈಗಾಗಲೇ ಮುಂದಿನ ಗುರಿ ಅಕಾಡೆಮಿ, ಕೋಚಿಂಗ್ ವೃತ್ತಿ ಎಂದು ನಿರ್ಧರಿಸಿದಂತಿದೆ. ಇದೀಗ ಲಾಕ್ಡೌನ್ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ತಮ್ಮ ಕ್ರಿಕೆಟ್ ಅಕಾಡೆಮಿಗಳಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಶ್ವಿನ್ ಐಪಿಎಲ್ ಹಾಗೂ ಟೆಸ್ಟ್ ತಂಡಕ್ಕೆ ಸೀಮಿತವಾಗಿದ್ದರೆ, ಧೋನಿ ಈಗಾಗಲೇ ಟೆಸ್ಟ್ಗೆ ನಿವೃತ್ತಿ ಹೇಳಿದ್ದು, ಸೀಮಿತ ಓವರ್ಗಳಿಂದಲೂ ದೂರವೇ ಉಳಿದಿದ್ದಾರೆ.
ಎಂಎಸ್ ಧೋನಿ ನೇರವಾಗಿ ಆನ್ಲೈನ್ ಕೋಚಿಂಗ್ ನೀಡದಿದ್ದರೂ ಅಕಾಡೆಮಿಯಲ್ಲಿರುವ ಕೋಚ್ಗಳಿಗೆ ಅಗತ್ಯ ಮಾಹಿತಿ ರವಾನಿಸುತ್ತಿದ್ದಾರೆ. ಕ್ರಿಕೆಟಿಗರಿಗೆ ಅಭ್ಯಾಸ ನೀಡುವುದಕ್ಕೂ ಮೊದಲು ಧೋನಿ, ತರಬೇತುದಾರರನ್ನು ಸನ್ನದ್ಧಗೊಳಿಸಿದ್ದಾರೆ. ಬೇಸಿಗೆ ಶಿಬಿರ ರದ್ದುಗೊಂಡಿರುವ ಹಿನ್ನೆಲೆಯಲ್ಲಿ ಆನ್ಲೈನ್ ಅಸ್ತ್ರವಾಗಿದೆ. ಧೋನಿ ಕ್ರಿಕೆಟ್ ಅಕಾಡೆಮಿ ಮುಖ್ಯಕೋಚ್ ಹಾಗೂ ಮಾಜಿ ಕ್ರಿಕೆಟಿಗ ಸತ್ರಜಿತ್ ಲಾಹಿರಿ ಪ್ರಕಾರ, ಪ್ರತಿ ವಿಡಿಯೋವನ್ನು 10 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸುತ್ತಾರೆ.
ಕ್ರಿಕೆಟರ್ ಹೆಸರಿನಲ್ಲಿ ಸ್ವತಃ ಆಪ್ ಹೊಂದಿದ್ದು, ತರಬೇತಿಗೆ ಆಗಮಿಸುವ ಆಟಗಾರರಿಗೆ ನೀಡಲಾಗುತ್ತಿದೆ. ಆಪ್ನಲ್ಲಿ ಪ್ರತಿದಿನ ಬ್ಯಾಟಿಂಗ್, ಬೌಲಿಂಗ್ ಶೈಲಿಯ ವಿಡಿಯೋ ಅಪ್ಲೋಡ್ ಮಾಡಲಾಗುವುದು. ಬಳಿಕ ಆಟಗಾರರಿಂದ ಪ್ರತಿಕ್ರಿಯೆ ಪಡೆಯಲಾಗುವುದು ಎಂದಿದ್ದಾರೆ. ಚೆನ್ನೈನಲ್ಲಿ 5 ಹಾಗೂ ಶಾರ್ಜಾದಲ್ಲಿ ಒಂದು ಅಕಾಡೆಮಿ ಹೊಂದಿರುವ ಅಶ್ವಿನ್ ಆನ್ಲೈನ್ ತರಬೇತಿ ಕೈಗೆತ್ತಿಕೊಂಡಿದ್ದಾರೆ. ತಮಿಳುನಾಡಿನ ಮಾಜಿ ಆಟಗಾರ ವಿದ್ಯುತ್ ಶಿವರಾಮಕೃಷ್ಣನ್ ಆನ್ಲೈನ್ ಕೂಡ ಚೆನ್ನೈನಲ್ಲಿ ಈಗಾಗಲೇ ತರಬೇತಿ ಆರಂಭಿಸಿದ್ದಾರೆ. ಇತ್ತೀಚಿನ ಹುಡುಗರಲ್ಲಿ ಆನ್ಲೈನ್ ಕುರಿತು ಸಾಕಷ್ಟು ತಿಳುವಳಿಕೆ ಇರುವುದರಿಂದ ಹೇಳಿಕೊಡಲು ಕಷ್ಟವಾಗುವುದಿಲ್ಲ.