

ಬೆಂಗಳೂರು: ಆರ್ಸಿಬಿ ತಂಡದ ಆರಂಭಿಕರಿಬ್ಬರನ್ನು 4ನೇ ಓವರ್ನೊಳಗೆ ಡಗೌಟ್ಗೆ ಅಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಜತ್ ಪಾಟೀದಾರ್&ವಿಲ್ ಜಾಕ್ಸ್ ಜೋಡಿಯನ್ನೂ ಬೇಗನೆ ಔಟ್ ಮಾಡಿ ಸಂಪೂರ್ಣ ಮೇಲುಗೈ ಸಾಧಿಸುವ ಅವಕಾಶವಿತ್ತು. ಆದರೆ ಫೀಲ್ಡರ್ಗಳು 4-5 ಕ್ಯಾಚ್ಗಳನ್ನು ಕೈಚೆಲ್ಲಿದ್ದರಿಂದ ಪಾಟೀದಾರ್-ಜಾಕ್ಸ್ ನಡುವೆ 88 ರನ್ಗಳ ಅಮೂಲ್ಯ ಜತೆಯಾಟ ಏರ್ಪಟ್ಟಿತು. ಅಂತಿಮವಾಗಿ ಆರ್ಸಿಬಿ ತಂಡದ 47 ರನ್ ಗೆಲುವಿನಲ್ಲಿ ಈ ಜತೆಯಾಟವೇ ನಿರ್ಣಾಯಕ ಪಾತ್ರ ವಹಿಸಿತು. ಡೆಲ್ಲಿ ತಂಡದ ಹಂಗಾಮಿ ನಾಯಕ ಅಕ್ಷರ್ ಪಟೇಲ್ ಕೂಡ ಸೋಲಿನ ಬಳಿಕ ಇದೇ ಕಾರಣವನ್ನು ನೀಡಿದರು.
"ಕ್ಯಾಚ್ಗಳನ್ನು ಕೈಚೆಲ್ಲಿದ್ದು ನಮಗೆ ಹಿನ್ನಡೆ ತಂದಿತು. ಇಲ್ಲದಿದ್ದರೆ ನಾವು 150 ರನ್ಗಳಿಗೆ ಆರ್ಸಿಬಿ ತಂಡವನ್ನು ನಿಯಂತ್ರಿಸಬಹುದಾಗಿತ್ತು. ಪವರ್ಪ್ಲೇನಲ್ಲೇ 4 ವಿಕೆಟ್ ಕಳೆದುಕೊಂಡಿದ್ದು ಕೂಡ ಚೇಸಿಂಗ್ಗೆ ದೊಡ್ಡ ಹೊಡೆತ ನೀಡಿತು. ಈ ಪಿಚ್ನಲ್ಲಿ 160&170 ರನ್ ಕೂಡ ಸ್ಪರ್ಧಾತ್ಮಕವೆನಿಸುತ್ತಿತ್ತು' ಎಂದು ಅಕ್ಷರ್ ಪಟೇಲ್ ಸೋಲಿನ ಬಳಿಕ ಬೇಸರಿಸಿದರು.
ಆರ್ಸಿಬಿ ತಂಡದ 187 ರನ್ ಸವಾಲಿಗೆ ಪ್ರತಿಯಾಗಿ ಡೆಲ್ಲಿ ತಂಡ ಯಶ್ ದಯಾಳ್ (20ಕ್ಕೆ 3), ಗ್ಯುರ್ಸನ್ (23ಕ್ಕೆ 2) ದಾಳಿಗೆ ಕುಸಿದು 19.1 ಓವರ್ಗಳಲ್ಲಿ 140 ರನ್ಗಳಿಗೆ ಸರ್ವಪತನ ಕಂಡಿತು. ಮೊದಲ 4 ಓವರ್ಗಳಲ್ಲೇ 4 ವಿಕೆಟ್ ಕಳೆದುಕೊಂಡ ಡೆಲ್ಲಿ ನಂತರ ಅಕ್ಷರ್ ಪಟೇಲ್ (57) ಹೋರಾಟದಿಂದ ಸೋಲಿನ ಅಂತರ ತಗ್ಗಿಸಿಕೊಂಡಿತು. ಜೇಕ್ ಫ್ರೇಸರ್ ಮೆಕ್ಗುರ್ಕ್ (21) ಮತ್ತು ಟ್ರಿಸ್ಟಾನ್ ಸ್ಟಬ್ಸ್ (3) ರನೌಟ್ ಬಲೆಗೆ ಬಿದ್ದಿದ್ದು ಡೆಲ್ಲಿಗೆ ದೊಡ್ಡ ಹೊಡೆತ ನೀಡಿತು. ಆಲ್ರೌಂಡ್ ನಿರ್ವಹಣೆ ತೋರಿದ ಕ್ಯಾಮರಾನ್ ಗ್ರೀನ್ (32 ರನ್, 1 ವಿಕೆಟ್, 1 ರನೌಟ್) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಆರ್ಸಿಬಿ ತಂಡ ಐಪಿಎಲ್ನಲ್ಲಿ 4ನೇ ಬಾರಿ ಸತತ 5 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯ ಜಯಿಸಿತು. 2009, 2016ರಲ್ಲೂ ಸತತ 5 ಪಂದ್ಯ ಗೆದ್ದಿದ್ದರೆ, 2011ರಲ್ಲಿ ಸತತ 7 ಪಂದ್ಯ ಜಯಿಸಿದ್ದು ಗರಿಷ್ಠವಾಗಿದೆ.
ಶ್ರೇಷ್ಠ ನಿರ್ವಹಣೆ ತೋರಿದೆವು. ಆರಂಭಿಕ 5-6 ಪಂದ್ಯಗಳಲ್ಲಿ ನಮ್ಮ ಬೌಲಿಂಗ್ ಕೆಟ್ಟದಾಗಿತ್ತು. ಇದೀಗ ನಾವು ನಿರಂತರವಾಗಿ ವಿಕೆಟ್ ಕಬಳಿಸುತ್ತಿದ್ದೇವೆ ಮತ್ತು 3 ಬಾರಿ ಎದುರಾಳಿ ತಂಡವನ್ನು ಆಲೌಟ್ ಮಾಡಿದ್ದೇವೆ ಎಂದು ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಹೇಳಿದರು.