

ನ್ಯೂಯಾರ್ಕ್: ಬೌಲಿಂಗ್ ವಿಭಾಗದಲ್ಲಿ ತೋರಿದ ಪ್ರಚಂಡ ನಿರ್ವಹಣೆಯಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ರೋಚಕ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಸೂಪರ್-8 ಹಂತಕ್ಕೆ ಸನಿಹವಾಗಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ನಡೆಯಲಿರುವ ತನ್ನ 3ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡವನ್ನು ಎದುರಿಸಲಿದ್ದು, ಹ್ಯಾಟ್ರಿಕ್ ಗೆಲುವಿನೊಂದಿಗೆ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವ ತವಕ ರೋಹಿತ್ ಶರ್ಮ ಬಳಗದ್ದಾಗಿದೆ.
ಶಿವಂ ದುಬೆ ಬದಲಿಗೆ ಸ್ಪಿನ್ನರ್‌ಗೆ ಚಾನ್ಸ್?
ಸುಲಭ ಎದುರಾಳಿ ಎನಿಸಿರುವ ಅಮೆರಿಕೆ ಎದುರು ಟೀಮ್ ಇಂಡಿಯಾ ಹನ್ನೊಂದರ ಬಳಗ ಬದಲಾಗುವ ಸಾಧ್ಯತೆಗಳಿವೆ. ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಶಿವಂ ದುಬೆ ಮೊದಲೆರಡು ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಲಿಗೆ ಮೈನಸ್ ಪಾಯಿಂಟ್ ಎನಿಸಿದ್ದಾರೆ. ಸ್ಪಿನ್ನರ್‌ಗಳ ಎದುರು ಅಬ್ಬರಿಸುವ ದುಬೆ ಅಮೆರಿಕ ಅಂಗಣದಲ್ಲಿ ಬ್ಯಾಟಿಂಗ್ ಮರೆತಿದ್ದಾರೆ. ಟೂರ್ನಿಯ ಮುಂದಿನ ಹಂತಕ್ಕೂ ಮುನ್ನ ತಂಡದ ಇತರ ಆಟಗಾರರ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ ನೀಡಲು ಬಯಸಿದರೆ ದುಬೆ ಬದಲಿಗೆ ಯಶಸ್ವಿ ಜೈಸ್ವಾಲ್ ಅಥವಾ ಸಂಜು ಸ್ಯಾಮ್ಸನ್ ಸ್ಥಾನ ಗಿಟ್ಟಿಸಿಕೊಳ್ಳಬಹುದು. ಹಿಂದಿನ 2 ಪಂದ್ಯಗಳಲ್ಲಿ ದುಬೆ ಅವರನ್ನು ಬೌಲಿಂಗ್‌ನಲ್ಲಿಯೂ ಬಳಸಿಕೊಳ್ಳುವ ಸನ್ನಿವೇಶ ಸಹ ಎದುರಾಗಿಲ್ಲ. ಆದರೆ ಪೂರ್ಣ ಪ್ರಮಾಣದ ಸ್ಪಿನ್ನರ್‌ಗಳನ್ನು ಆಡುವ ಬಳಗದಿಂದ ಕೈ ಬಿಟ್ಟಿರುವುದು ಸದ್ಯಕ್ಕೆ ಲ ನೀಡಿದರೂ, ಟೂರ್ನಿಯ ಮುಂದಿನ ಹಂತದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ಸೂಪರ್-8 ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆಯುವುದರಿಂದ ಅದಕ್ಕಿಂತ ಮುಂಚಿತವಾಗಿ ಕುಲದೀಪ್-ಚಾಹಲ್ ಜೋಡಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಏಕೆಂದರೆ ಕೆರಿಬಿಯನ್ ಅಂಗಣಗಳು ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡಲಿವೆ.