ಐಪಿಎಲ್‌ನಲ್ಲಿ ಚೇಸಿಂಗ್ ಸುಲಭವಾಗಿರುವುದಕ್ಕೆ ಕಾರಣ ವಿವರಿಸಿದ ಸಚಿನ್ ತೆಂಡುಲ್ಕರ್

sachin web
Published on

ಮುಂಬೈ: ಅರಬ್ ನಾಡಿನಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯಲ್ಲಿ ಆರಂಭಿಕ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡದ ಗೆಲುವಿನ ಸಾಧ್ಯತೆ ಹೆಚ್ಚಾಗಿತ್ತು. ಆದರೆ ಟೂರ್ನಿಯ ಲೀಗ್ ಹಂತ ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆಯೇ ಚೇಸಿಂಗ್ ಮಾಡುವ ತಂಡವೇ ಗೆಲ್ಲಲಾರಂಭಿಸಿತು. ಲೀಗ್ ಹಂತದ ಕೊನೇ 9 ಪಂದ್ಯಗಳ ಪೈಕಿ 8ರಲ್ಲಿ ಚೇಸಿಂಗ್ ಮಾಡಿದ ತಂಡವೇ ಜಯಿಸಿತು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರೀಗ ಇದಕ್ಕೆ ಸ್ಪಷ್ಟವಾದ ಕಾರಣವನ್ನು ವಿವರಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಟೂರ್ನಿ ಆರಂಭಗೊಂಡಾಗ ಯುಎಇಯಲ್ಲಿ ಹೆಚ್ಚಿನ ಉಷ್ಣಾಂಶವಿತ್ತು. ಸುಡು ಬಿಸಿಲಿನ ವಾತಾವರಣವೇ ತಂಡಗಳಿಗೆ ದೊಡ್ಡ ಸವಾಲಾಗಿತ್ತು. ಆದರೆ ಟೂರ್ನಿ ಮುಂದುವರಿದಂತೆ ಅರಬ್ ನಾಡಿನಲ್ಲಿ ತಾಪಮಾನವೂ ಕುಸಿತ ಕಂಡಿದೆ. ಇದರಿಂದಾಗಿ 2ನೇ ಸರದಿಯಲ್ಲಿ ಇಬ್ಬನಿ ಸಮಸ್ಯೆ ಕಾಡುತ್ತಿದೆ. ಇದರಿಂದಾಗಿ ಚೇಸಿಂಗ್ ಮಾಡುವುದು ಸುಲಭವಾಗುತ್ತಿದೆ ಎಂದು ಸಚಿನ್ ತೆಂಡುಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಟೂರ್ನಿಯ ಮೊದಲ 5 ವಾರಗಳಿಗೆ ಹೋಲಿಸಿದರೆ ದುಬೈ ಮತ್ತು ಅಬುಧಾಬಿಯಲ್ಲಿ ಈಗ ಚೇಸಿಂಗ್ ಮಾಡುವುದು ಸುಲಭವೆನಿಸಿದೆ. ಇದರಿಂದಾಗಿ ಟಾಸ್ ಗೆದ್ದ ತಂಡ ಕಣ್ಣು ಮುಚ್ಚಿ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದು, ಸುಲಭ ಚೇಸಿಂಗ್ ಮೂಲಕ ಗೆಲುವನ್ನೂ ಒಲಿಸಿಕೊಳ್ಳುತ್ತ ಬಂದಿದೆ.

‘ಟೂರ್ನಿ ಆರಂಭಗೊಂಡಾಗ ಯುಎಇಯಲ್ಲಿ ಇದ್ದ ತಾಪಮಾನಕ್ಕೂ ಈಗಿನ ತಾಪಮಾನಕ್ಕೂ ಭಾರಿ ವ್ಯತ್ಯಾಸವಿದೆ. ಈಗ ಸುಮಾರು 6 ಡಿಗ್ರಿಯಷ್ಟು ಉಷ್ಣಾಂಶ ತಗ್ಗಿದೆ. ಸೂರ್ಯಾಸ್ತಮಾನದ ಸಮಯವೂ ಬದಲಾಗಿದೆ. ಇವೆಲ್ಲ ಅಂಶಗಳು ಪಿಚ್ ಮೇಲೆ ಪರಿಣಾಮ ಬೀರುತ್ತಿವೆ. ಹೀಗಾಗಿ 2ನೇ ಇನಿಂಗ್ಸ್ ವೇಳೆಗೆ ಪಿಚ್ ಭಿನ್ನವಾಗಿ ವರ್ತಿಸುತ್ತಿದೆ’ ಎಂದು ಸಚಿನ್ ತೆಂಡುಲ್ಕರ್ ವಿವರಿಸಿದ್ದಾರೆ.

‘ಟೂರ್ನಿಯ ಮೊದಲಾರ್ಧದಲ್ಲಿ ಅಬುಧಾಬಿ ಮತ್ತು ದುಬೈನಲ್ಲಿ ತಂಡಗಳಿಗೆ ಚೇಸಿಂಗ್ ಮಾಡುವುದು ಕಠಿಣವಾಗಿತ್ತು. ಆದರೆ ಕೊನೇ 7-8 ದಿನಗಳಲ್ಲಿ ಚಿತ್ರಣವೇ ಬದಲಾಗಿ ಹೋಗಿತ್ತು. ಚೇಸಿಂಗ್ ಮಾಡುವ ತಂಡಗಳು ನಿರಂತರವಾಗಿ ಗೆಲ್ಲಲಾರಂಭಿಸಿದವು’ ಎಂದು ಸಚಿನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net