

ನವದೆಹಲಿ: 1983ರ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಭಾರತೀಯ ಕ್ರಿಕೆಟ್ ತಂಡಕ್ಕೆ ಐತಿಹಾಸಿಕವಾಗಿತ್ತು. ಕಪಿಲ್ ದೇವ್ ನೇತೃತ್ವದ ಟೀಮ್ ಇಂಡಿಯಾ ಫೈನಲ್ನಲ್ಲಿ ಬಲಿಷ್ಠ ವೆಸ್ಟ್ಇಂಡೀಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಯಿತು. ಆದರೆ, 39 ವರ್ಷಗಳ ಹಿಂದೆ ಭಾರತೀಯ ಆಟಗಾರರು ವಿಶ್ವಕಪ್ ಗೆದ್ದಾಗ ಅವರ ಸಂಬಳ ಎಷ್ಟಿತ್ತು ಅಂತ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
ಪ್ರಸ್ತುತ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಎತ್ತಿಹಿಡಿದಿದ್ದು, ಆಟಗಾರರಿಗೆ 125 ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ. ಇದರ ನಡುವೆಯೇ 1983ರ ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಸಂಬಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಾಯಕ ಕಪಿಲ್ ದೇವ್, ಮೊಹಿಂದರ್ ಅಮರನಾಥ್, ಸುನಿಲ್ ಗವಾಸ್ಕರ್, ಸಂದೀಪ್ ಪಾಟೀಲ್, ರವಿಶಾಸ್ತ್ರಿ ಮತ್ತು ಮ್ಯಾನೇಜರ್ ಬಿಶನ್ ಸಿಂಗ್ ಬೇಡಿ ಸೇರಿದಂತೆ 14 ಆಟಗಾರರ ವೇತನವನ್ನು ವೈರಲ್ ಆಗುತ್ತಿರುವ ಫೋಟೋದಲ್ಲಿ ನೀವು ನೋಡಬಹುದು. ಆಟಗಾರರಿಗೆ ಅವರ ಪಂದ್ಯದ ಶುಲ್ಕದ ಜೊತೆಗೆ ಎಷ್ಟು ದಿನ ಭತ್ಯೆ ನೀಡಲಾಗುತ್ತದೆ ಎಂಬುದನ್ನು ಸಹ ಇದು ಒಳಗೊಂಡಿದೆ.
ಎಲ್ಲ ಆಟಗಾರರ ಸಂಬಳವನ್ನು 1983ರ ಸೆಪ್ಟೆಂಬರ್ 21ರಂದು ಪಟ್ಟಿ ಮಾಡಲಾಗಿದೆ. ಆ ಸಮಯದಲ್ಲಿ ನಾಯಕ ಕಪಿಲ್ ದೇವ್ ಅವರಿಗೆ ದಿನಕ್ಕೆ 200 ರೂ.ನಂತೆ ಮೂರು ದಿನಗಳವರೆಗೆ 600 ರೂ. ಭತ್ಯೆ ನೀಡಲಾಯಿತು. ಇದರೊಂದಿಗೆ ಪಂದ್ಯದ ಶುಲ್ಕ 1500 ರೂ. ಸೇರಿದಂತೆ ಒಟ್ಟು 2100 ರೂ. ಅನ್ನು ಕಪಿಲ್ ದೇವ್ ಸಹಿ ಪಡೆದು ನೀಡಲಾಗಿದೆ. ಉಪನಾಯಕ ಮೊಹಿಂದರ್ ಅಮರನಾಥ್ ಸೇರಿದಂತೆ ಸುನೀಲ್ ಗವಾಸ್ಕರ್, ಕೆ.ಶ್ರೀಕಾಂತ್, ಯಶಪಾಲ್ ಶರ್ಮ, ಸಂದೀಪ್ ಪಾಟೀಲ್, ಕೀರ್ತಿ ಆಜಾದ್, ರೋಜರ್ ಬಿನ್ನಿ, ಮದನ್ ಲಾಲ್, ಸೈಯದ್ ಕಿರ್ಮಾನಿ, ಬಲ್ವಿಂದರ್ ಸಂಧು, ದಿಲೀಪ್ ವೆಂಗಸರ್ಕರ್, ರವಿಶಾಸ್ತ್ರಿ ಮತ್ತು ಸುನೀಲ್ ವಲ್ಸನ್ ಅವರಿಗೂ ಕೂಡ ಅಷ್ಟೇ ಸಂಬಳವನ್ನು ನೀಡಲಾಗಿದೆ. ಇಲ್ಲಿ ನಾಯಕ ಆಟಗಾರ ಎಂಬ ಯಾವುದೇ ವ್ಯತ್ಯಾಸ ಇರಲಿಲ್ಲ.
1983ರಲ್ಲಿ ಭಾರತ ತಂಡವು ವಿಶ್ವ ಚಾಂಪಿಯನ್ ಆದಾಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಳಿ ಆಟಗಾರರಿಗೆ ಪಾವತಿಸಲು ಹಣವಿರಲಿಲ್ಲ. ಈಗ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐನ ಸ್ಥಿತಿ ಅಂದು ತುಂಬಾ ಕೆಟ್ಟದಾಗಿತ್ತು. ಆಗಿನ ಬಿಸಿಸಿಐ ಅಧ್ಯಕ್ಷ ಎನ್‌ಕೆಪಿ ಸಾಳ್ವೆ ಆಟಗಾರರಿಗೆ ಪ್ರಶಸ್ತಿ ನೀಡಲು ಬಯಸಿದ್ದರು. ಆದರೆ ಹಣದ ಕೊರತೆಯಿಂದ ಏನನ್ನೂ ನೀಡಲು ಸಾಧ್ಯವಾಗಲಿಲ್ಲ.
ಪರಿಸ್ಥಿತಿ ಹೀಗಿರುವಾಗ ಸಾಳ್ವೆ ಅವರು ಗಾಯಕಿ ಲತಾ ಮಂಗೇಶ್ಕರ್ ಸಹಾಯ ಕೇಳಿದರು. ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಲತಾ ಮಂಗೇಶ್ಕರ್ ಅವರು ಭಾರತ ತಂಡದ ವಿಜಯೋತ್ಸವವನ್ನು ಆಚರಿಸಲು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಿಂದ ಬಂದ 20 ಲಕ್ಷ ರೂ. ಹಣವನ್ನು ಭಾರತ ತಂಡದ ಎಲ್ಲ ಸದಸ್ಯರಿಗೆ ಉಡುಗೊರೆಯಾಗಿ ನೀಡಿದರು. ಇಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಗಳಲ್ಲಿ ಒಂದಾಗಿದೆ.
ಇನ್ನು ಮಾಧ್ಯಮ ವರದಿಗಳ ಪ್ರಕಾರ, ಬಿಸಿಸಿಐ ಒಟ್ಟು ಆಸ್ತಿ 14,000 ಕೋಟಿ ರೂ. ಎನ್ನಲಾಗಿದೆ. ಈಗ ಭಾರತದ ಆಟಗಾರರು ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಹೋಲಿಕೆ ಮಾಡಿದರೆ 1983ರಲ್ಲಿ ಇಡೀ ತಂಡಕ್ಕೆ ಕೇವಲ 29,400 ರೂ.ಗಳನ್ನು ನೀಡಿರುವುದು ತುಂಬಾ ಅಚ್ಚರಿ ಮೂಡಿಸಿದೆ. (ಏಜೆನ್ಸೀಸ್)