ಬಾಕ್ಸಿಂಗ್​ನಲ್ಲಿ ಭಾರತದ ಅಮಿತ್​, ಜಾಸ್ಮಿನ್​ಗೆ ಪ್ಯಾರಿಸ್​ ಒಲಿಂಪಿಕ್ಸ್​ ಟಿಕೆಟ್​

web boxing
Published on

ಬ್ಯಾಂಕಾಕ್​: ವಿಶ್ವ ಚಾಂಪಿಯನ್​ಷಿಪ್​ ರಜತ ವಿಜೇತ ಬಾಕ್ಸರ್​ ಅಮಿತ್​ ಪಂಗಲ್​ ಮತ್ತು ರಾಷ್ಟ್ರೀಯ ಚಾಂಪಿಯನ್​ ಜಾಸ್ಮಿನ್​ ಲಂಬೋರಿಯಾ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಸಂಪಾದಿಸಿದ್ದಾರೆ. ವಿಶ್ವ ಒಲಿಂಪಿಕ್ಸ್​ ಅರ್ಹತಾ ಕೂಟದಲ್ಲಿ ಸೆಮಿಫೈನಲ್​ ಪ್ರವೇಶಿಸುವ ಮೂಲಕ ಇವರಿಬ್ಬರು ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಪ್ಯಾರಿಸ್​ನಲ್ಲಿ ಕಣಕ್ಕಿಳಿಯಲಿರುವ ಭಾರತೀಯ ಬಾಕ್ಸರ್​ಗಳ ಸಂಖ್ಯೆ 6ಕ್ಕೆ (2 ಪುರುಷ, 4 ಮಹಿಳಾ ಬಾಕ್ಸರ್​) ಏರಿಕೆಯಾಗಿದೆ.

ಅಮಿತ್​ ಪಂಗಲ್​ ಭಾನುವಾರ ನಡೆದ ಪುರುಷರ 51 ಕೆಜಿ ವಿಭಾಗದ ಕ್ವಾರ್ಟರ್​ಫೈನಲ್​ನಲ್ಲಿ ಚೀನಾದ ಚುವಾಂಗ್​ ಲಿಯು ವಿರುದ್ಧ 5-0ಯಿಂದ ಜಯ ಸಾಧಿಸಿದರು. ಈ ಮೂಲಕ ಸತತ 2ನೇ ಬಾರಿ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದರು.

ಜಾಸ್ಮಿನ್​ ಮಹಿಳೆಯರ 57 ಕೆಜಿ ವಿಭಾಗದ ಕ್ವಾರ್ಟರ್​ಫೈನಲ್​ನಲ್ಲಿ ಮಾಲಿಯ ಮರಿನ್​ ಕ್ಯಾಮೆರಾ ವಿರುದ್ಧ ಗೆದ್ದು ಭಾರತಕ್ಕೆ ಮತ್ತೆ ಕೋಟಾ ಸ್ಥಾನ ಗೆದ್ದುಕೊಟ್ಟರು. ಈ ವಿಭಾಗದಲ್ಲಿ ಈ ಮುನ್ನ ಪರ್ವೀನ್​ ಹೂಡಾ ಕೋಟಾ ಸ್ಥಾನ ಗೆದ್ದಿದ್ದರೂ, ಅವರು ಡೋಪಿಂಗ್​ ಪ್ರಕರಣದಲ್ಲಿ ಸಿಕ್ಕಿಬಿದ್ದ ಬಳಿಕ ಇದು ಭಾರತದ ಕೈತಪ್ಪಿತ್ತು. ಹೀಗಾಗಿ ಎಂದಿನ 60 ಕೆಜಿ ವಿಭಾಗಕ್ಕೆ ಬದಲಾಗಿ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಜಾಸ್ಮಿನ್​ ಭಾರತಕ್ಕೆ ಮತ್ತೆ ಈ ಕೋಟಾ ಸ್ಥಾನ ಗೆದ್ದುಕೊಟ್ಟಿದ್ದಾರೆ.

ಪುರುಷರ 57 ಕೆಜಿ ವಿಭಾಗದಲ್ಲಿ ಸೆಮೀಸ್​ ಸೋಲಿನ ಬಳಿಕ ಒಲಿಂಪಿಕ್ಸ್​ ಅರ್ಹತೆಗಾಗಿ ಬಾಕ್ಸ್​-ಆಫ್​​ನಲ್ಲಿ ಸೆಣಸಿದ ಸಚಿನ್​ ಸಿವಾಚ್​ ರ್ಕಿಗಿಸ್ತಾನದ ಮುನರ್ಬೆಕ್​ ವಿರುದ್ಧ 0-5ರಿಂದ ಸೋತು ನಿರಾಸೆ ಅನುಭವಿಸಿದರು.

ನಿಶಾಂತ್​ ದೇವ್​ (71ಕೆಜಿ), ನಿಖತ್​ ಜರೀನ್​ (50), ಪ್ರೀತಿ ಪವಾರ್​ (54) ಮತ್ತು ಲವ್ಲಿನಾ ಬೋಗೋರ್ಹೈನ್​ (75) ಈಗಾಗಲೆ ಪ್ಯಾರಿಸ್​ ಒಲಿಂಪಿಕ್ಸ್​ ಅರ್ಹತೆ ಸಂಪಾದಿಸಿದ್ದ ಭಾರತೀಯ ಬಾಕ್ಸರ್​ಗಳಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net