ಇಂದಿನಿಂದ ದೇಶೀಯ ಟಿ20 ಕಾದಾಟ: ಕರ್ನಾಟಕಕ್ಕೆ ಉತ್ತರಾಖಂಡ ಮೊದಲ ಎದುರಾಳಿ

web smat t20
Published on

ಬೆಂಗಳೂರು: ರಣಜಿ ಟ್ರೋಫಿ ಮೊದಲ ಹಂತದ ಮುಕ್ತಾಯದ ಬಳಿಕ ದೇಶೀಯ ಸೀಮಿತ ಓವರ್​ ಕ್ರಿಕೆಟ್​ ಹಣಾಹಣಿಗೆ ವೇದಿಕೆ ಸಜ್ಜಾಗಿದ್ದು, ಶನಿವಾರದಿಂದ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ದೇಶೀಯ ಟಿ20 ಕ್ರಿಕೆಟ್​ ಟೂರ್ನಿ ಶುರುವಾಗಲಿದೆ. ದೇಶದ 5 ನಗರಗಳಲ್ಲಿ ಟೂರ್ನಿಯ ಲೀಗ್​ ಪಂದ್ಯಗಳು ನಡೆಯಲಿವೆ. ಭಾನುವಾರ&ಸೋಮವಾರ ನಡೆಯಲಿರುವ ಐಪಿಎಲ್​ ಮೆಗಾ ಹರಾಜಿಗೆ ಮುನ್ನ ಟೂರ್ನಿಯ ಮೊದಲ ದಿನದ ಪಂದ್ಯಗಳು ಆಯ್ಕೆ ಟ್ರಯಲ್ಸ್​ನಂತೆ ಇರಲಿದ್ದು, ಫ್ರಾಂಚೈಸಿಗಳ ಗಮನಸೆಳೆಯಲು ಯುವ ಆಟಗಾರರಿಗೆ ಉತ್ತಮ ವೇದಿಕೆ ಒದಗಿಸಲಿವೆ. ಎರಡು ಬಾರಿಯ ಚಾಂಪಿಯನ್​ ಕರ್ನಾಟಕ ತಂಡ ಇಂದೋರ್​ನಲ್ಲಿ ಉತ್ತರಾಖಂಡ ವಿರುದ್ಧ ಮೊದಲ ಪಂದ್ಯ ಆಡಲಿದೆ. ಪಂಜಾಬ್​ ಟೂರ್ನಿಯ ಹಾಲಿ ಚಾಂಪಿಯನ್​ ತಂಡವಾಗಿದೆ.

ಸ್ಟಾರ್​ಗಳು ಕಣಕ್ಕೆ

ಐಪಿಎಲ್​ ಮೆಗಾ ಹರಾಜಿಗೆ ಮುನ್ನಾದಿನ ಶುರುವಾಗುತ್ತಿರುವ ಟೂರ್ನಿಯಲ್ಲಿ ಕೆಲ ಸ್ಟಾರ್​ ಕ್ರಿಕೆಟಿಗರೂ ಭಾಗವಹಿಸುತ್ತಿದ್ದಾರೆ. ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಬರೋಡ ಪರ ಕಣಕ್ಕಿಳಿಯಲಿದ್ದು, ಅವರ ಅಣ್ಣ ಕೃನಾಲ್​ ಪಾಂಡ್ಯ ನಾಯಕತ್ವ ವಹಿಸಲಿದ್ದಾರೆ. ಬಂಗಾಳ ಪರ ವೇಗಿ ಮೊಹಮದ್​ ಶಮಿ ಆಡಲಿದ್ದರೆ, ಶ್ರೇಯಸ್​ ಅಯ್ಯರ್​ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಅಜಿಂಕ್ಯ ರಹಾನೆ, ಪೃಥ್ವಿ ಷಾ, ಶಾರ್ದೂಲ್​ ಠಾಕೂರ್​ ಕುಡ ತಂಡದಲ್ಲಿದ್ದಾರೆ.

ಗುಂಪುಗಳು:

ಎ: ಪಂಜಾಬ್​, ಬಂಗಾಳ, ಹೈದರಾಬಾದ್​, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಮಿಜೋರಾಂ, ಮೇಘಾಲಯ. (ಸ್ಥಳ: ರಾಜ್​ಕೋಟ್​)

ಬಿ: ಬರೋಡ, ಗುಜರಾತ್​, ಸೌರಾಷ್ಟ್ರ, ಕರ್ನಾಟಕ, ತಮಿಳುನಾಡು, ಉತ್ತರಾಖಂಡ, ತ್ರಿಪುರ, ಸಿಕ್ಕಿಂ. (ಸ್ಥಳ: ಇಂದೋರ್​)

ಸಿ: ದೆಹಲಿ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಜಾರ್ಖಂಡ್​, ಹರಿಯಾಣ, ಜಮ್ಮು&ಕಾಶ್ಮೀರ, ಮಣಿಪುರ, ಅರುಣಾಚಲ ಪ್ರದೇಶ. (ಸ್ಥಳ: ಮುಂಬೈ)

ಡಿ: ಅಸ್ಸಾಂ, ವಿದರ್ಭ, ರೈಲ್ವೇಸ್​, ಒಡಿಶಾ, ಚಂಡೀಗಢ, ಛತ್ತೀಸ್​ಗಢ, ಪುದುಚೇರಿ. (ಸ್ಥಳ: ವಿಜಯನಗರಂ)

ಇ: ಕೇರಳ, ಮುಂಬೈ, ಗೋವಾ, ಸರ್ವೀಸಸ್​, ಮಹಾರಾಷ್ಟ್ರ, ಆಂಧ್ರ, ನಾಗಾಲ್ಯಾಂಡ್​. (ಸ್ಥಳ: ಹೈದರಾಬಾದ್​).

ಟೂರ್ನಿ ಸ್ವರೂಪ

38 ತಂಡಗಳನ್ನು 5 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಎ,ಬಿ,ಸಿ ಗುಂಪುಗಳಲ್ಲಿ ತಲಾ 8 ತಂಡಗಳಿದ್ದರೆ, ಡಿ, ಇ ಗುಂಪುಗಳಲ್ಲಿ ತಲಾ 7 ತಂಡಗಳಿವೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ನಾಕೌಟ್​ ಹಂತಕ್ಕೇರಲಿವೆ. ಈ ಪೈಕಿ ಪ್ರತಿ ಗುಂಪಿನ ಅಗ್ರ 5 ತಂಡಗಳು ನೇರವಾಗಿ ಕ್ವಾರ್ಟರ್​ ಫೈನಲ್​ಗೇರಲಿವೆ. 2ನೇ ಸ್ಥಾನ ಪಡೆದ 5 ತಂಡಗಳಿಗೆ ಅಂಕ/ಜಯ/ರನ್​ರೇಟ್​ ಆಧಾರದಲ್ಲಿ 6-10 ಶ್ರೇಯಾಂಕ ನೀಡಲಾಗುತ್ತದೆ. ಈ ಪೈಕಿ 6ನೇ ರ್ಯಾಂಕ್​ ತಂಡ ನೇರವಾಗಿ ಕ್ವಾರ್ಟರ್​ಫೈನಲ್​ಗೇರಿದರೆ, ಉಳಿದ 4 ತಂಡಗಳು ಪ್ರಿ ಕ್ವಾರ್ಟರ್​ಫೈನಲ್​ನಲ್ಲಿ ಆಡಲಿವೆ.

*ಇಂಪ್ಯಾಕ್ಟ್​ ಪ್ಲೇಯರ್​ ಇಲ್ಲ

ಐಪಿಎಲ್​ನಲ್ಲಿ 2027ರವರೆಗೆ ಇಂಪ್ಯಾಕ್ಟ್​ ಪ್ಲೇಯರ್​ ನಿಯಮ ಉಳಿಸಿಕೊಂಡಿರುವ ನಡುವೆ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿಯಿಂದ ಈ ಬಾರಿ ಇದನ್ನು ಕೈಬಿಡಲಾಗಿದೆ. 2023ರಲ್ಲಿ ಐಪಿಎಲ್​ಗೂ ಮುನ್ನ ಈ ಟೂರ್ನಿಯಲ್ಲೇ ಮೊದಲ ಬಾರಿಗೆ ಇಂಪ್ಯಾಕ್ಟ್​ ಪ್ಲೇಯರ್​ ನಿಯಮವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ದೇಶೀಯ ಕ್ರಿಕೆಟ್​ನಲ್ಲಿ ಆಲ್ರೌಂಡರ್​ಗಳ ಬೆಳವಣಿಗೆಗೆ ಈ ನಿಯಮ ಮಾರಕವಾಗಿದೆ ಎಂಬ ಕಾರಣಕ್ಕಾಗಿ ಇದನ್ನು ರದ್ದುಗೊಳಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಓವರ್​ಗೆ 2 ನೋಬಾಲ್​ ಎಸೆಯಲು ಅವಕಾಶ ಕಲ್ಪಿಸುವ ನಿಯಮ ಮುಂದುವರಿಯಲಿದೆ.

ಶುಭಾರಂಭದ ತವಕದಲ್ಲಿ ಕರ್ನಾಟಕ

ಕಳೆದ ಆವೃತ್ತಿಯಲ್ಲಿ ಕನಿಷ್ಠ ನಾಕೌಟ್​ ಹಂತಕ್ಕೇರಲು ಸಾಧ್ಯವಾಗದೆ ನಿರಾಸೆ ಅನುಭವಿಸಿದ್ದ ಕರ್ನಾಟಕ ತಂಡ ಹಾಲಿ ಆವೃತ್ತಿಯಲ್ಲಿ ಶುಭಾರಂಭ ಕಾಣುವ ತವಕದಲ್ಲಿದೆ. ಮಯಾಂಕ್​ ಅಗರ್ವಾಲ್​ ಬಳಗ ಶನಿವಾರ, ಉತ್ತರಾಖಂಡ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ರಣಜಿಯಲ್ಲಿ ಆಡಿದ ಮೊದಲ 5 ಲೀಗ್​ ಪಂದ್ಯಗಳಲ್ಲಿ ಸಾಧಾರಣ ನಿರ್ವಹಣೆ ತೋರಿರುವ ಕರ್ನಾಟಕ ತಂಡ ಟಿ20 ಟೂರ್ನಿಯಲ್ಲಿ ಚೇತೋಹಾರಿ ನಿರ್ವಹಣೆ ತೋರಿಸಬೇಕಾಗಿದೆ. ಜತೆಗೆ ಆರಂಭಿಕ ಪಂದ್ಯ ರಾಜ್ಯದ ಕೆಲ ಅನುಭವಿ&ಯುವ ಆಟಗಾರರಿಗೆ ಐಪಿಎಲ್​ ಹರಾಜಿಗೆ ಮುನ್ನ ಫ್ರಾಂಚೈಸಿಗಳ ಗಮನಸೆಳೆಯುವ ಅವಕಾಶ ಕಲ್ಪಿಸಿದೆ.

ಬಿ ಗುಂಪಿನಲ್ಲಿರುವ ಕರ್ನಾಟಕ ತಂಡಕ್ಕೆ ಸಾಂಪ್ರದಾಯಿಕ ಎದುರಾಳಿ ತಮಿಳುನಾಡು ಮತ್ತು ಬರೋಡ ತಂಡಗಳು ಪ್ರಮುಖ ಸವಾಲೆನಿಸಿವೆ. ಪ್ರತಿ ಗುಂಪಿನ ಅಗ್ರ 2 ತಂಡಗಳಷ್ಟೇ ನಾಕೌಟ್​ಗೇರುವುದರಿಂದ ರಾಜ್ಯ ತಂಡ ಇವೆರಡು ಮಾಜಿ ಚಾಂಪಿಯನ್​ ತಂಡಗಳ ಪೈಕಿ ಕನಿಷ್ಠ ಒಂದನ್ನಾದರೂ ಸೋಲಿಸುವ ಅಗತ್ಯವಿದೆ. ಕಳೆದ ಮಹಾರಾಜ ಟ್ರೋಫಿಯಲ್ಲಿ 50 ಸಿಕ್ಸರ್​ ಸಹಿತ 507 ರನ್​ ಸಿಡಿಸಿದ ಅಭಿನವ್​ ಮನೋಹರ್​ ಭರ್ಜರಿ ಫಾರ್ಮ್​ ರಾಜ್ಯಕ್ಕೆ ವರದಾನವೆನಿಸಿದೆ. ಜತೆಗೆ ಅನುಭವಿ ಆಟಗಾರರು ಜವಾಬ್ದಾರಿ ಅರಿತು ಆಡಬೇಕಿದೆ ಮತ್ತು ಯುವ ಆಟಗಾರರು ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ.

ಕರ್ನಾಟಕ ತಂಡ: ಮಯಾಂಕ್​ ಅಗರ್ವಾಲ್​ (ನಾಯಕ), ಮನೀಷ್​ ಪಾಂಡೆ (ಉಪನಾಯಕ), ಅಭಿನವ್​ ಮನೋಹರ್​, ಶ್ರೇಯಸ್​ ಗೋಪಾಲ್​, ಸ್ಮರಣ್​ ಆರ್​, ಕೆಎಲ್​ ಶ್ರೀಜಿತ್​ (ವಿ.ಕೀ), ವೈಶಾಕ್​ ವಿ, ಮ್ಯಾಕ್ನೀಲ್​ ನೋರೋನ್ಹಾ, ಕೌಶಿಕ್​ ವಿ, ಮನೋಜ್​ ಭಾಂಡಗೆ, ವಿದ್ಯಾಧರ್​ ಪಾಟೀಲ್​, ಚೇತನ್​ಎಲ್​ಆರ್​ (ವಿ.ಕೀ), ಶುಭಾಂಗ್​ ಹೆಗ್ಡೆ, ಮನ್ವಂತ್​ ಕುಮಾರ್​ ಎಲ್​, ಅನೀಶ್​ ಕೆವಿ, ಪ್ರವಿಣ್​ ದುಬೆ.

ಕರ್ನಾಟಕದ ಪಂದ್ಯಗಳು

ದಿನಾಂಕ ಎದುರಾಳಿ ಆರಂಭ

ನ.23 ಉತ್ತರಾಖಂಡ ಮ.1.30

ನ.25 ತ್ರಿಪುರ ಬೆಳಗ್ಗೆ 9

ನ.27 ಸೌರಾಷ್ಟ್ರ ಬೆಳಗ್ಗೆ 11

ನ.29 ಸಿಕ್ಕಿಂ ಸಂಜೆ 4.30

ಡಿ.1 ತಮಿಳುನಾಡು ಬೆಳಗ್ಗೆ 9

ಡಿ.3 ಬರೋಡ ಮ.1.30

ಡಿ.5 ಗುಜರಾತ್​ ಬೆಳಗ್ಗೆ 11

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net