

ನವದೆಹಲಿ: ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಎಡಗೈ ಆರಂಭಿಕರಲ್ಲಿ ಒಬ್ಬರಾದ ಶಿಖರ್ ಧವನ್ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ಗೆ ಶನಿವಾರ ವಿದಾಯ ಘೋಷಿಸಿದರು. ಟೀಮ್ ಇಂಡಿಯಾ ಪರ ಕೊನೇ ಪಂದ್ಯ ಆಡಿ ಸುಮಾರು ಎರಡು ವರ್ಷಗಳು ಕಳೆದ ಬಳಿಕ 38 ವರ್ಷದ ಧವನ್ ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು. ಧವನ್ ದ್ವಿಪಕ್ಷೀಯ ಸರಣಿಗಳಲ್ಲಿ ಗಳಿಸುತ್ತಿದ್ದ ರನ್ಗಳದ್ದು ಒಂದು ತೂಕವಾದರೆ, ಐಸಿಸಿ ಟೂರ್ನಿಗಳಲ್ಲಿ ಅವರು ಗಳಿಸುತ್ತಿದ್ದ ರನ್ಗಳದ್ದು ಬೇರೆಯದ್ದೇ ತೂಕವಾಗಿರುತ್ತಿತ್ತು. ಇದಕ್ಕಾಗಿಯೇ ಅವರನ್ನು "ಮಿಸ್ಟರ್ ಐಸಿಸಿ' ಎಂದು ಅಭಿಮಾನಿಗಳು ಬಣ್ಣಿಸುತ್ತಿದ್ದರು.
ಐಸಿಸಿ ಟೂರ್ನಿಯಲ್ಲಿ ಅವರ ರನ್ ಸರಾಸರಿ (65.15) ವಿಶ್ವದ ಉಳಿದೆಲ್ಲ ಬ್ಯಾಟರ್ಗಳಿಗಿಂತ ಮಿಗಿಲಾದುದು. ಅದರಲ್ಲೂ ಪ್ರಮುಖವಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಧವನ್ ಪಾಲಿಗೆ ನೆಚ್ಚಿನ ಟೂರ್ನಿಯಾಗಿತ್ತು. 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ 363 ರನ್ ಸಿಡಿಸಿ ಭಾರತದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಸರಣಿಶ್ರೇಷ್ಠರಾಗಿದ್ದರು. 2017ರ ಆವೃತ್ತಿಯಲ್ಲೂ ಗರಿಷ್ಠ 338 ರನ್ ಸಿಡಿಸಿದ್ದರು.
2015ರ ಏಕದಿನ ವಿಶ್ವಕಪ್ಗೆ ಮುನ್ನ ಫಾರ್ಮ್ ಕಳೆದುಕೊಂಡು ಪರದಾಡಿದ್ದ ಧವನ್, ಬಳಿಕ ವಿಶ್ವಕಪ್ನಲ್ಲಿ ಭಾರತ ಪರ ಗರಿಷ್ಠ 412 ರನ್ ಸಿಡಿಸಿ ಮಿಂಚಿದ್ದರು. ಗಾಯದಿಂದಾಗಿ 2019ರ ಏಕದಿನ ವಿಶ್ವಕಪ್ನಲ್ಲಿ ಕೇವಲ 2 ಪಂದ್ಯ ಆಡಿದ್ದರು. ಐಸಿಸಿ ಟೂರ್ನಿಗಳಲ್ಲಿ 20 ಇನಿಂಗ್ಸ್ಗಳಲ್ಲೇ 6 ಶತಕ ಸಿಡಿಸಿದ್ದ ಧವನ್, ಅತಿವೇಗದ ಸಾವಿರ ರನ್ ಸಾಧಕರೂ ಆಗಿದ್ದಾರೆ.