

ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ, ರನ್ ಮೆಷಿನ್, ಚೇಸಿಂಗ್ ಮಾಸ್ಟರ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಕ್ರೀಡಾ ಲೋಕದಲ್ಲಿ ತಮ್ಮದೇ ಆದ ಫ್ಯಾನ್ ಬೇಸ್ ಹೊಂದಿದ್ದಾರೆ. ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಎಲ್ಲರಿಗೂ ತಿಳಿದಿರುವ ಚಿರಪರಿಚಿತ ವ್ಯಕ್ತಿ ಎಂದು ಹೇಳಬಹುದಾಗಿದೆ. ಆದರೆ, ಇಲ್ಲೊಬ್ಬ ಕ್ರೀಡಾಪಟುವಿಗೆ ವಿರಾಟ್ ಕೊಹ್ಲಿ ಯಾರೆಂಬುದು ತಿಳಿದಿಲ್ಲವಂತೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಡ್ಯಾರೆನ್ ಜೇಸನ್ ವಾಟ್ಕಿನ್ಸ್ ಜೂನಿಯರ್ IShowSpeed ಎಂದೇ ಖ್ಯಾತಿ ಪಡೆದಿರುವ ಯೂಟ್ಯೂಬರ್ ದಿಗ್ಗಜ ಫುಟ್ಬಾಲ್ ಆಟಗಾರ ಝ್ಲಾಟನ್ ಇಬ್ರಾಹಿಮೊವಿಕ್ ಅವರ ಸಂದರ್ಶನ ಮಾಡುತ್ತಾರೆ. ಈ ವೇಳೆ ವಿರಾಟ್ ಕೊಹ್ಲಿ ಕುರಿತು ಪ್ರಶ್ನೆ ಕೇಳಲಾಗುತ್ತದೆ. ಇದಕ್ಕೆ ಉತ್ತರಿಸುವ ಇಬ್ರಾಹಿಮೊವಿಕ್ ನಾನು ಕ್ರಿಕೆಟ್ ನೋಡುವುದಿಲ್ಲ ಹಾಗಾಗಿ ಆತ ಯಾರೆಂಬುದು ನನಗೆ ಗೊತ್ತಿಲ್ಲಾ ಎಂದು ಉತ್ತರಿಸುತ್ತಾರೆ.
ಈ ಬಗ್ಗೆ ಪುನಃ ಪ್ರಶ್ನೆ ಕೇಳಿದಾಗ ಇಲ್ಲ ಆತ ಯಾರೆಂಬುದು ನನಗೆ ನಿಜವಾಗಿಯೂ ತಿಳಿದಿಲ್ಲ. ಅಗೌರವ ತೋರುತ್ತಿದ್ದೇನೆ ಎಂದಲ್ಲಾ. ಆತನ ಬಗ್ಗೆ ನನಗೆ ತಿಳಿದಿಲ್ಲ ಎಂದು ವೈರಲ್ ಆಗಿರುವ ವಿಡಿಯೋದಲ್ಲಿ ಹೇಳುತ್ತಾರೆ. ಯೂಟ್ಯೂಬರ್ ಡ್ಯಾರೆನ್ ಜೇಸನ್ ವಾಟ್ಕಿನ್ಸ್ ಕೊಹ್ಲಿ ಕುರಿತು ಪ್ರಶ್ನೆ ಕೇಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಫುಟ್ಬಾಲ್ ಆಟಗಾರ ರೊನಾಲ್ಡೊ ಅವರ ಬಳಿ ವಿರಾಟ್ ಕೊಹ್ಲಿ ಕುರಿತು ಪ್ರಶ್ನೆ ಕೇಳಿದ್ದರು. ಇದಕ್ಕೆ ರೊನಾಲ್ಡೊ ನೀಡಿದ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.