ಐಪಿಎಲ್​ ವೇಳೆ 10 ಸೆಕೆಂಡ್​ ಜಾಹೀರಾತು ಬೆಲೆ ಎಷ್ಟಿದೆ ಗೊತ್ತಾ..?

star sports and ipl for web
Published on

ಬೆಂಗಳೂರು: 13ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ದಿನಗಣನೆ ಆರಂಭಗೊಂಡಿದೆ. ಇಂದಿನಿಂದ ಆರ್​ಸಿಬಿ, ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ಸೇರಿದಂತೆ ಬಹುತೇಕ ತಂಡಗಳ ಆಟಗಾರರು ಕ್ವಾರಂಟೈನ್​ ಅವಧಿ ಶುರುಮಾಡಿವೆ. ಸೆ.19 ರಿಂದ ಆರಂಭವಾಗಲಿರುವ 13ನೇ ಲೀಗ್​ಗೆ ಸ್ಟಾರ್​ ಸ್ಪೋರ್ಟ್ಸ್​ ನೇರ ಪ್ರಸಾರದ ಹಕ್ಕುಹೊಂದಿದೆ. ಕೋವಿಡ್​-19 ಮಹಾಮಾರಿ ಜಾಗತಿಕವಾಗಿ ಆರ್ಥಿಕ ಹೊಡೆತ ನೀಡಿದೆ. ಆದರೆ, ಸ್ಟಾರ್​ ಸ್ಪೋರ್ಟ್ಸ್​ ಮಾತ್ರ ಜಾಹೀರಾತು ದರವನ್ನು ಕಡಿಮೆ ಮಾಡಿಲ್ಲ. ಪ್ರತಿ 10 ಸೆಕೆಂಡ್​ಗಳ ಜಾಹೀರಾತಿಗೆ 8 ರಿಂದ 10 ಲಕ್ಷ ರೂಪಾಯಿ ಬೆಲೆ ನಿಗದಿಪಡಿಸಿದೆ. ಇದರಿಂದ ಒಟ್ಟಾರೆ 3 ಸಾವಿರ ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದೆ ಸ್ಟಾರ್​ ವಾಹಿನಿ.

ಮಹಾಮಾರಿ ಕೋವಿಡ್​-19 ನಡುವೆಯೂ 6 ತಿಂಗಳ ಬಳಿಕ 13ನೇ ಆವೃತ್ತಿಯ ಐಪಿಎಲ್​ ಆರಂಭಕ್ಕೆ ಸಕಲ ವೇದಿಕೆ ದೂರದ ಅರಬ್​ ರಾಷ್ಟ್ರದಲ್ಲಿ ಸಿದ್ಧವಾಗಿದೆ. ಭಾರತೀಯ ಪಾಲಿಗೆ ಕ್ರೀಡಾಹಬ್ಬ ಎನಿಸಿರುವ ಚುಟುಕು ಕ್ರಿಕೆಟ್​ ಸಮರ 53 ದಿನಗಳ ಕಾಲ ಯುಎಇಯಲ್ಲಿ ನಡೆಯಲಿದೆ. ದೀಪಾವಳಿ ಹಬ್ಬದ ವೇಳೆಯಾಗಿರುವುದರಿಂದ ಸ್ಟಾರ್​ ಸ್ಪೋರ್ಟ್ಸ್​ ವಾಹಿನಿ ತನ್ನ ಜಾಹೀರಾತು ದರದಲ್ಲಿ ಕಡಿಮೆ ಮಾಡದಿರಲು ನಿರ್ಧರಿಸಿದೆ. ಬಿಸಿಸಿಐಗೆ ನೀಡುವ ವಾರ್ಷಿಕ 3270 ಕೋಟಿ ರೂಪಾಯಿ ಮೊತ್ತದಲ್ಲಿ ಕಡಿಮೆ ಮಾಡದ ಹಿನ್ನೆಲೆಯಲ್ಲಿ ಸ್ಟಾರ್​ ಸ್ಪೋರ್ಟ್ಸ್​ ಕೂಡ ಜಾಹೀರಾತು ದರದಲ್ಲಿ ರಾಜಿಯಾಗಿಲ್ಲ ಎನ್ನಲಾಗಿದೆ.

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ ಟೂರ್ನಿಯ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಸ್ಟಾರ್​ ಸ್ಪೋರ್ಟ್ಸ್​ ವಾಹಿನಿ ಪ್ರತಿ 10 ಸೆಕೆಂಡ್​ಗೆ 25 ಲಕ್ಷ ರೂಪಾಯಿ ನಿಗದಿಪಡಿಸಿತ್ತು. ಇತರ ಪಂದ್ಯಗಳಿಗೆ 16 ರಿಂದ 18 ಲಕ್ಷ ರೂಪಾಯಿ ನಿಗದಿಪಡಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಐಪಿಎಲ್​ನ ಜಾಹೀರಾತು ದರ ಕಡಿಮೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net