

Virat Kohli : ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಅವರು ಟೀಮ್ ಇಂಡಿಯಾ ಸ್ಟಾರ್ ಹಾಗೂ ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆಧುನಿಕ ಪೀಳಿಗೆಯಲ್ಲಿ ಕೊಹ್ಲಿಗೆ ಸರಿಸಾಟಿಯಾದ ಮತ್ತೊಬ್ಬ ಕ್ರಿಕೆಟಿಗ ಇಲ್ಲ ಎಂದಿದ್ದಾರೆ. ಈ ರನ್ ಮಷಿನ್ ಮೂರು ಮಾದರಿಯಲ್ಲೂ ಅಪರೂಪದ ಸಾಧನೆಯನ್ನು ಮಾಡಿದ್ದಾರೆಂದು ಅಮೀರ್ ಕೊಂಡಾಡಿದ್ದಾರೆ.
81 ಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿಯೊಂದಿಗೆ ಇತರರನ್ನು ಹೋಲಿಸಿದಾಗ ನನಗೆ ನಗು ತಡೆಯಲು ಸಾಧ್ಯವಿಲ್ಲ ಎಂದು ಅಮೀರ್ ಹೇಳಿದ್ದಾರೆ. ಅಂದಹಾಗೆ ಕೊಹ್ಲಿ, ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (100) ನಂತರ ಅತಿಹೆಚ್ಚು ಶತಕಗಳನ್ನು ಪೂರೈಸಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಏಕದಿನ ಮಾದರಿಯಲ್ಲಿ 50 ಶತಕಗಳನ್ನು ಗಳಿಸಿದ ಏಕೈಕ ಕ್ರಿಕೆಟಿಗನಾಗಿ ಉಳಿದಿರುವ ಕೊಹ್ಲಿ, ಟೆಸ್ಟ್‌ನಲ್ಲಿ 30 ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಂದು ಶತಕವನ್ನು ಗಳಿಸಿದ್ದಾರೆ.
ಟೀಮ್ ಇಂಡಿಯಾ ಪರ ಒಟ್ಟು 81 ಶತಕಗಳನ್ನು ಸಿಡಿಸಿರುವ ಕೊಹ್ಲಿ ಇನ್ನೂ ಹಲವು ಅಪರೂಪದ ದಾಖಲೆಗಳನ್ನು ಹೊಂದಿದ್ದಾರೆ. ಇದೇ ಸಮಯದಲ್ಲಿ ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಾಮ್ ಕೊಹ್ಲಿ ಅವರ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಹಲವು ಮಾಜಿ ಕ್ರಿಕೆಟಿಗರು ಬಾಬರ್ ಅವರನ್ನು ಕೊಹ್ಲಿಗೆ ಹೋಲಿಸಿ ಆಗಾಗ ಕಾಮೆಂಟ್ ಮಾಡುತ್ತಿರುತ್ತಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮೊಹಮ್ಮದ್ ಅಮೀರ್, ಕೊಹ್ಲಿ ಓರ್ವ ಶ್ರೇಷ್ಠ ಬ್ಯಾಟ್ಸ್‌ಮನ್. ಕೊಹ್ಲಿಯನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ ಮತ್ತು ಅಂತಹ ಹೋಲಿಕೆಗಳು ಹಾಸ್ಯಾಸ್ಪದ. ಹೊಸ ತಲೆಮಾರಿನ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ, ಅವರನ್ನು ಬಾಬರ್ ಅಜಮ್ ಅಥವಾ ಸ್ಟೀವ್ ಸ್ಮಿತ್ ಅಥವಾ ಜೋ ರೂಟ್‌ಗೆ ಹೋಲಿಸಿದಾಗ ನಾನು ನಗುತ್ತೇನೆ ಎಂದರು.
ಕೊಹ್ಲಿಯನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ. ಬೇರೆ ಯಾರೂ ಅವರಿಗೆ ಸರಿಸಾಟಿಯಾಗಲಾರರು. ಏಕೆಂದರೆ, ಕೊಹ್ಲಿ ಅವರು ಏಕಾಂಗಿಯಾಗಿ ಹಲವು ಬಾರಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಅದೂ ಕೂಡ ಯಾವುದೇ ಒಂದು ಫಾರ್ಮ್ಯಾಟ್‌ನಲ್ಲಿ ಅಲ್ಲ, ಮೂರೂ ಫಾರ್ಮ್ಯಾಟ್‌ಗಳಲ್ಲಿ ಅದ್ಭುತವಾಗಿ ಮಿಂಚುತ್ತಿದ್ದಾರೆ. ಬೇರೆ ಯಾವ ಆಟಗಾರನೂ ಈ ಸಾಧನೆ ಮಾಡಲು ಸಾಧ್ಯವಿಲ್ಲ. ಕೊಹ್ಲಿ ಈ ಪೀಳಿಗೆಯ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಮೊಹಮ್ಮದ್ ಅಮೀರ್ ಅವರು ಕ್ರಿಕೆಟ್ ಪ್ರೆಡಿಕ್ಟಾ ಶೋನಲ್ಲಿ ಕೊಹ್ಲಿಯ ಕೌಶಲ್ಯವನ್ನು ಶ್ಲಾಘಿಸಿದರು.
ಅಂದಹಾಗೆ ವಿರಾಟ್ ಕೊಹ್ಲಿ ಅವರು ಪ್ರಸ್ತುತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ನಿರತರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಐದು ಟೆಸ್ಟ್‌ಗಳ ಸರಣಿಯಲ್ಲಿ ಪರ್ತ್‌ನಲ್ಲಿ ಶತಕ ಸಿಡಿಸಿದ್ದ ಕೊಹ್ಲಿ, ಅಡಿಲೇಡ್ ಮತ್ತು ಬ್ರಿಸ್ಬೇನ್ ಟೆಸ್ಟ್‌ಗಳಲ್ಲಿ ವಿಫಲರಾದರು. ಹೀಗಾಗಿ ಕೊಹ್ಲಿಯ ಆಟದ ಶೈಲಿ ಟೀಕೆಗೆ ಗುರಿಯಾಯಿತು. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಿಂದ ಬೇಗನೆ ಚೇತರಿಸಿಕೊಳ್ಳುವ ಕೊಹ್ಲಿಯ ಸಾಮರ್ಥ್ಯವೇ ತಾನು ಕಲಿತ ಪಾಠ ಎಂದು ಮೊಹಮ್ಮದ್ ಅಮೀರ್ ಹೇಳಿದ್ದಾರೆ. 2014ರಲ್ಲಿ ಆಂಗ್ಲರ ನೆಲದಲ್ಲಿ ಕೊಹ್ಲಿ ಕಠಿಣ ಪರಿಸ್ಥಿತಿ ಎದುರಿಸಿದ ಕೊಹ್ಲಿ, ಆ ನಂತರದ ಹತ್ತು ವರ್ಷಗಳ ಕಾಲ ಕ್ರಿಕೆಟ್ನಲ್ಲಿ ಮಿಂಚಿದ್ದು ಇದಕ್ಕೆ ಸಾಕ್ಷಿ ಎಂದು ಅಮೀರ್ ಹೇಳಿದರು. (ಏಜೆನ್ಸೀಸ್)