ಪ್ಲೀಸ್​ ಟೀಮ್​ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳಿಸ್ಬೇಡಿ! ಪಾಕ್​ ಮಾಜಿ ಕ್ರಿಕೆಟಿಗನಿಂದ ಅಸಲಿ ಸಂಗತಿ ಬಯಲು

Ind vs Pak
Published on

ನವದೆಹಲಿ: ಟೀಮ್​ ಇಂಡಿಯಾವನ್ನು ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಕಳುಹಿಸದಂತೆ ಬಿಸಿಸಿಐಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಎಚ್ಚರಿಕೆ ನೀಡಿದ್ದಾರೆ. ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಐಸಿಸಿಯ ಈ ಮೆಗಾ ಈವೆಂಟ್‌ಗಾಗಿ ಭಾರತ ತಂಡವು ತಮ್ಮ ದೇಶಕ್ಕೆ ಪ್ರವಾಸ ಮಾಡಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಆ ದೇಶದ ಮಾಜಿ ಆಟಗಾರರು ಬಯಸಿದ್ದಾರೆ. ಟೀಮ್​ ಇಂಡಿಯಾ ತಮ್ಮ ದೇಶಕ್ಕೆ ಬರದಿದ್ದರೆ ಭಾರತದಲ್ಲಿ ನಡೆಯುವ ಐಸಿಸಿ ಟೂರ್ನಿಗಳಿಗೆ ನಾವು ಭಾಗಿಯಾಗುವುದಿಲ್ಲ ಎಂದು ಪಾಕ್​ ಬ್ಲಾಕ್​ಮೇಲ್ ಮಾಡುತ್ತಿದೆ.

ಆಟಗಾರರ ಭದ್ರತಾ ದೃಷ್ಟಿಯಿಂದ ಭಾರತವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ಸಿದ್ಧವಿಲ್ಲ. ಕಳುಹಿಸಬೇಕಾದರೆ ಕೇಂದ್ರ ಸರ್ಕಾರದ ಅನುಮತಿ ಬೇಕು ಎಂಬುದನ್ನೂ ಬಹಿರಂಗಪಡಿಸಿದೆ. ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವಂತೆ ಈಗಾಗಲೇ ಐಸಿಸಿಗೆ ಬಿಸಿಸಿಐ ಮನವಿ ಮಾಡಿದೆ.

ಟೀಮ್​ ಇಂಡಿಯಾದ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲು ಮನವಿ ಮಾಡಲಾಗಿದೆ. ಆದರೆ, ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಪ್ಪುತ್ತಿಲ್ಲ. ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ, ಚಾಂಪಿಯನ್ಸ್ ಟ್ರೋಫಿಗಾಗಿ ಟೀಮ್​ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಬೇಡಿ ಎಂದು ಸಲಹೆ ನೀಡಿದ್ದಾರೆ.

ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಬಂದು ಚಾಂಪಿಯನ್ಸ್ ಟ್ರೋಫಿ ಆಡಿದರೆ ಪಾಕ್ ಕ್ರಿಕೆಟ್ ಮಂಡಳಿಗೆ ಭಾರೀ ಆದಾಯ ಬರಲಿದ್ದು, ಮಾಧ್ಯಮಗಳಿಗೂ ಒಳ್ಳೆಯ ಸಂಗತಿಗಳು ಬರುತ್ತವೆ. ಅದಕ್ಕಾಗಿಯೇ ಟೀಮ್​ ಇಂಡಿಯಾ ಬರಲೇಬೇಕು ಎಂದು ಹಠ ಮಾಡುತ್ತಿದ್ದಾರೆ. ಆದರೆ, ಇದೆಲ್ಲಕ್ಕಿಂತ ಹೆಚ್ಚಾಗಿ ಭಾರತೀಯ ಆಟಗಾರರ ಸುರಕ್ಷತೆ ಬಹಳ ಮುಖ್ಯ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಭಾರತೀಯ ಆಟಗಾರರ ಸುರಕ್ಷತೆಯ ಬಗ್ಗೆ ಯೋಚಿಸಬೇಕು ಮತ್ತು ಅವರು ತಂಡಕ್ಕೆ ಭದ್ರತೆಯನ್ನು ಒದಗಿಸುವ ಸ್ಥಿತಿಯಲ್ಲಿದ್ದಾರೆಯೇ ಎಂದು ಪರಿಶೀಲಿಸಬೇಕು ಎಂದು ಕನೇರಿಯಾ ಸಲಹೆ ನೀಡಿದರು.

ಬೇರೆ ತಂಡಗಳು ಪಾಕಿಸ್ತಾನಕ್ಕೆ ಬರುವುದೇ ಬೇರೆ, ಭಾರತ ತಂಡ ಬರುವುದೇ ಬೇರೆ. ಭಾರತ ಮತ್ತು ಪಾಕ್​ ನಡುವೆ ಬಿಕ್ಕಟ್ಟನ್ನು ಅರಿತುಕೊಳ್ಳಬೇಕು. ಸುರಕ್ಷತೆಯ ದೃಷ್ಟಿಯಿಂದ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಬೇಕು. ಟೀಮ್​ ಇಂಡಿಯಾದ ಪಂದ್ಯಗಳಿಗೆ ದುಬೈ ಸೂಕ್ತವಾಗಲಿದೆ ಎಂದು ಕನೇರಿಯಾ ಸಲಹೆ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net