

ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ 2023ರಿಂದ ಚತುರ್ದಿನ ಟೆಸ್ಟ್ ಪಂದ್ಯ ಕಡ್ಡಾಯವಾಗುವ ಸಾಧ್ಯತೆ ಹೆಚ್ಚಾಗಿದ್ದು ಈಗಾಗಲೇ ಐಸಿಸಿ ಕ್ರಿಕೆಟ್ ಸಮಿತಿ ಶಿಫಾರಸು ಮಾಡಿದೆ.
ಒಮ್ಮೆ ಇದು ಸಾಧ್ಯವಾದರೆ ಐದು ದಿನ ನಡೆಯುವ ಟೆಸ್ಟ್ ಪಂದ್ಯಾವಳಿ ನಾಲ್ಕು ದಿನಕ್ಕೆ ಇಳಿಯಲಿದೆ.
ಐಸಿಸಿ ಚತುರ್ದಿನ ಟೆಸ್ಟ್ ನಡೆಸಲು ನಿರ್ಧಾರ ಮಾಡಿರುವ ಬಗ್ಗೆ ಇಂದು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಗುವಾಹಟಿಯಲ್ಲಿ ಶ್ರೀಲಂಕಾ ವಿರುದ್ಧದ ಟಿ-20 ಪಂದ್ಯಾವಳಿಗೂ ಮೊದಲು ಮಾತನಾಡಿದ ಅವರು, ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಐದು ದಿನಗಳ ಟೆಸ್ಟ್ ಸರಣಿಯನ್ನು ನಾಲ್ಕು ದಿನಕ್ಕೆ ಇಳಿಸಿ ಅದರ ಸ್ವರೂಪ ಕೆಡಿಸುವುದು ಸಮಂಜಸವಲ್ಲ ಎಂದಿದ್ದಾರೆ.
ಐದು ದಿನಗಳ ಟೆಸ್ಟ್ನಲ್ಲಿ ಯಾವುದೇ ಬದಲಾವಣೆ ಮಾಡಬಾರದು. ನಾಲ್ಕುದಿನಗಳ ಟೆಸ್ಟ್ ಬಗ್ಗೆ ಒಂದು ಉತ್ಸಾಹ ಹುಟ್ಟಬಹುದು. ಆದರೆ ಅದು ಕ್ರಿಕೆಟ್ಗೆ ಕಳೆ ತಂದುಕೊಡುತ್ತದೆ ಎಂಬ ನಂಬಿಕೆ ನಮಗೆ ಇಲ್ಲ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರದ ಬಗ್ಗೆ ಕೂಡ ವಿರಾಟ್ ಕೊಹ್ಲಿ ಬಳಿ ಪ್ರಶ್ನೆ ಮಾಡಲಾಯಿತು. ಅದಕ್ಕೆ ಉತ್ತರಿಸಿದ ಅವರು, ನನಗೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಹೆಚ್ಚಿಗೆ ಏನೂ ತಿಳಿದಿಲ್ಲ. ಹೀಗಿರುವಾಗ ನಾನು ಮಾತನಾಡಿದರೆ ಅದು ನನ್ನ ಬೇಜವಾಬ್ದಾರಿಯಾಗುತ್ತದೆ. ಸದ್ಯಕ್ಕಂತೂ ಆಸ್ಸಾಂ, ಗುವಾಹಟಿ ಎಲ್ಲ ಸುರಕ್ಷಿತವಾಗಿದೆ ಎಂದು ನಾವು ಭಾವಿಸಿದ್ದೇವೆ ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಬಿಲ್ ಪಾಸ್ ಆಗಿ ಕಾಯ್ದೆ ಆದ ಮೇಲೆ ಆಸ್ಸಾಂನಲ್ಲೇ ಮೊದಲು ಪ್ರತಿಭಟನೆ ಪ್ರಾರಂಭವಾಗಿತ್ತು. ಈಗ ಅಲ್ಲೇ ಇಂಡಿಯಾ-ಶ್ರೀಲಂಕಾ ಕ್ರಿಕೆಟ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿರಾಟ್ಗೆ ಈ ಬಗ್ಗೆ ಪ್ರಶ್ನಿಸಲಾಗಿತ್ತು. (ಏಜೆನ್ಸೀಸ್)