16ರ ಘಟ್ಟಕ್ಕೇರಿದ ಜೋಕೋ, ಸಬಲೆಂಕಾ: ರಾಡುಕಾನು, ಅಜರೆಂಕಾ, ಶೆಲ್ಟನ್​ ನಿರ್ಗಮನ

New Project
Published on

ನ್ಯೂಯಾರ್ಕ್​: ನಾಲ್ಕು ಬಾರಿಯ ಚಾಂಪಿಯನ್​ ನೊವಾಕ್​ ಜೋಕೊವಿಕ್​, 2ನೇ ಶ್ರೇಯಾಂಕಿತ ಕಾಲೋರ್ಸ್​ ಅಲ್ಕರಾಜ್​, ಆತಿಥೇಯ ಅಮೆರಿಕದ ತಾರೆಯರಾದ ಟೇಲರ್​ ಫ್ರಿಟ್ಜ್​, ಜೆಸ್ಸಿಕಾ ಪೆಗುಲಾ, ಟೇಲರ್​ ಟೌನ್​ಸೆಂಡ್​, ಮಹಿಳಾ ಸಿಂಗಲ್ಸ್​ ಹಾಲಿ ಚಾಂಪಿಯನ್​ ಬೆಲಾರಸ್​ ಬೆಡಗಿ ಅರಿನಾ ಸಬಲೆಂಕಾ, ಕಜಾಕ್​ಸ್ತಾನದ ಎಲಿನಾ ರೈಬಕಿನಾ, ಇಟಲಿಯ ಜಾಸ್ಮಿನ್​ ಪಾವೊಲಿನಿ ಮತ್ತು ಜೆಕ್​ ತಾರೆ ಬಾರ್ಬೊರಾ ಕ್ರೆಜ್ಸಿಕೋವಾ ವರ್ಷದ ಕೊನೇ ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿ ಯುಎಸ್​ ಓಪನ್​ನಲ್ಲಿ ಪ್ರಿ ಕ್ವಾರ್ಟರ್​ಫೈನಲ್​ ಹಂತಕ್ಕೇರಿದ್ದಾರೆ. ಮೂರು ಬಾರಿಯ ರನ್ನರ್​ಅಪ್​ ವಿಕ್ಟೋರಿಯಾ ಅಜರೆಂಕಾ, ಮಾಜಿ ಚಾಂಪಿಯನ್​ ಎಮ್ಮಾ ರಾಡುಕಾನು, 5ನೇ ಶ್ರೇಯಾಂಕಿತೆ ಮಿರಾ ಆಂಡ್ರೀವಾ ಮತ್ತು ಆತಿಥೇಯ ಅಮೆರಿಕದ ತಾರೆ ಬೆನ್​ ಶೆಲ್ಟನ್​ ಮೂರನೇ ಸುತ್ತಿನಲ್ಲೇ ಮುಗ್ಗರಿಸಿದ್ದಾರೆ.

25ನೇ ಗ್ರಾಂಡ್​ ಸ್ಲಾಂ ಪ್ರಶಸ್ತಿಯ ಕನಸಿನಲ್ಲಿರುವ ಸೆರ್ಬಿಯಾ ತಾರೆ ಜೋಕೊವಿಕ್​ ಶುಕ್ರವಾರ ನಡೆದ 3ನೇ ಸುತ್ತಿನ ಕಾದಾಟದಲ್ಲಿ ಬ್ರಿಟನ್​ನ ಕ್ಯಾಮರಾನ್​ ನೋರಿ ವಿರುದ್ಧ 6-4, 6-7, 6-2, 6-3 ಸೆಟ್​ಗಳಿಂದ ಎರಡು ಗಂಟೆ 50 ನಿಮಿಷಗಳಲ್ಲಿ ಗೆಲುವು ಸಾಧಿಸಿದರು. 38 ವರ್ಷದ ಜೋಕೊವಿಕ್​ ಪಂದ್ಯದ ಆರಂಭದಲ್ಲಿ ಬೆನ್ನು ನೋವಿನ ಸಮಸ್ಯೆ ಎದುರಿಸಿದರು ಮತ್ತು ವೈದ್ಯಕಿಯ ವಿರಾಮವನ್ನೂ ಪಡೆದರು. ಆದರೆ ನಂತರ ಒಟ್ಟಾರೆ 18 ಏಸ್​ಗಳನ್ನು ಸಿಡಿಸುವ ಮೂಲಕ 1991ರ ಬಳಿಕ ಟೂರ್ನಿಯ 4ನೇ ಸುತ್ತಿಗೇರಿದ ಅತ್ಯಂತ ಹಿರಿಯ ಆಟಗಾರ ಎನಿಸಿದರು. ಜೋಕೋ 69ನೇ ಬಾರಿ ಗ್ರಾಂಡ್​ ಸ್ಲಾಂ ಟೂರ್ನಿಯ ಅಂತಿಮ 16ರ ಘಟ್ಟಕ್ಕೇರಿ ಸ್ವಿಸ್​ ದಿಗ್ಗಜ ರೋಜರ್​ ಫೆಡರರ್​ ದಾಖಲೆ ಸರಿಗಟ್ಟಿದರು. 7ನೇ ಶ್ರೇಯಾಂಕಿತ ಜೋಕೋಗೆ ಜರ್ಮನಿಯ ಅರ್ಹತಾ ಸುತ್ತಿನ ಅಟಗಾರ ಜಾನ್​ ಲೆನಾರ್ಡ್​​ ಮುಂದಿನ ಎದುರಾಳಿಯಾಗಿದ್ದಾರೆ.

ಅಲ್ಕರಾಜ್​ಗೂ ಗಾಯದ ಸಮಸ್ಯೆ: ಸ್ಪೇನ್​ ಯುವತಾರೆ ಅಲ್ಕರಾಜ್​ ಕೂಡ 3ನೇ ಸುತ್ತಿನ ಪಂದ್ಯದ ವೇಳೆ ಗಾಯದ ಸಮಸ್ಯೆ ಎದುರಿಸಿದರೂ, ಇಟಲಿಯ ಲುಸಿಯಾನೊ ಡಾರ್ಡೆರಿ ವಿರುದ್ಧ 6-2, 6-4, 6-0 ನೇರಸೆಟ್​ಗಳಿಂದ ಒಂದು ಗಂಟೆ 44 ನಿಮಿಷಗಳಲ್ಲೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. 5 ಗ್ರಾಂಡ್​ ಸ್ಲಾಂ ಪ್ರಶಸ್ತಿಗಳ ಒಡೆಯ ಅಲ್ಕರಾಜ್​ ಮೊದಲ 14 ಗೇಮ್​ಗಳಲ್ಲಿ 10ರಲ್ಲಿ ಗೆದ್ದ ಬಳಿಕ ಮೊಣಕಾಲು ನೋವು ಎದುರಿಸಿದರು. 22 ವರ್ಷದ ಅಲ್ಕರಾಜ್​ ಮೆಡಿಕಲ್​ ಟೈಮ್​ ಔಟ್​ ಬಳಿಕವೂ ಲಯ ಕಾಯ್ದುಕೊಂಡರು. ಇದು ಗ್ರಾಂಡ್​ ಸ್ಲಾಂನಲ್ಲಿ ಅವರಿಗೆ 80ನೇ ಪಂದ್ಯ ಗೆಲುವಾಗಿದೆ.

ಸಬಲೆಂಕಾ, ಪೆಗುಲಾಗೆ ಜಯ

ಅಗ್ರ ಶ್ರೇಯಾಂಕಿತೆ ಸಬಲೆಂಕಾ ಕೆನಡಾದ ಲೈಲಾ ಫೆರ್ನಾಂಡೆಜ್​ ಎದುರು 6-3, 7-6 ನೇರಸೆಟ್​ಗಳಿಂದ ಗೆದ್ದರೆ, 4ನೇ ಶ್ರೇಯಾಂಕಿತೆ ಪೆಗುಲಾ 6-1, 7-5ರಿಂದ ಅನುಭವಿ ಆಟಗಾರ್ತಿ ಅಜರೆಂಕಾ ಎದುರು ಜಯಿಸಿದರು. ಕಳೆದ ಪಂದ್ಯದ ಬಳಿಕ ಒಸ್ತಾಪೆಂಕೊ ಜತೆ ವಾಗ್ವಾದ ನಡೆಸಿ ಸುದ್ದಿಯಾಗಿದ್ದ ಅಮೆರಿಕದ ಟೇಲರ್​ ಟೌನ್​ಸೆಂಡ್​ ಈ ಬಾರಿ ರಷ್ಯಾದ 19 ವರ್ಷದ ತಾರೆ ಆಂಡ್ರೀವಾಗೆ 7-5, 6-2ರಿಂದ ಆಘಾತ ನೀಡಿ ಗಮನಸೆಳೆದರು. 9ನೇ ಶ್ರೇಯಾಂಕಿತೆ ರೈಬಕಿನಾ ಬ್ರಿಟನ್​ನ ರಾಡುಕಾನು ವಿರುದ್ಧ 6-1, 6-2 ನೇರಸೆಟ್​ಗಳಿಂದ ಸುಲಭ ಗೆಲುವು ಸಾಧಿಸಿದರು. 7ನೇ ಶ್ರೇಯಾಂಕಿತೆ ಪಾವೊಲಿನಿ ಜೆಕ್​ ಗಣರಾಜ್ಯದ ವೊಂಡ್ರೌಸೋವಾ ಎದುರು 6-7, 1-6ರಿಂದ ಆಘಾತ ಎದುರಿಸಿದರು.

ಶೆಲ್ಟನ್​ಗೆ ಶಾಕ್​

ಆರನೇ ಶ್ರೇಯಾಂಕಿತ ಬೆನ್​ ಶೆಲ್ಟನ್​ 3ನೇ ಸುತ್ತಿನಲ್ಲಿ 6-3, 3-6, 6-4, 4-6ರಿಂದ ಸಮಬಲದ ಹೋರಾಟ ನಡೆಸುತ್ತಿದ್ದಾಗ ಕಾಡಿದ ಎಡ ಭುಜ ನೋವಿನಿಂದಾಗಿ ಪಂದ್ಯ ತ್ಯಜಿಸಿದರು. ಇದರಿಂದ ಫ್ರಾನ್ಸ್​ನ 37 ವರ್ಷದ ಆಡ್ರಿಯನ್​ ಮ್ಯಾನರಿನೊ ಯುಎಸ್​ ಓಪನ್​ನಲ್ಲಿ 15ನೇ ಯತ್ನದಲ್ಲಿ ಮೊದಲ ಬಾರಿ 4ನೇ ಸುತ್ತು ಪ್ರವೇಶಿಸುವಲ್ಲಿ ಯಶಸ್ವಿಯಾದರು. ಅಮೆರಿಕದ ಮತ್ತೋರ್ವ ಆಟಗಾರ ​ ಟಿಯಾಫೋಯಿ ಜರ್ಮನಿಯ ಜಾನ್​ ಲಿನಾರ್ಡ್​ ​ ಎದುರು 4-6, 3-6, 6-7ರಿಂದ ಶರಣಾದರು.

ಇದರಿಂದ ಟೂರ್ನಿಯ ಆರಂಭದಲ್ಲಿ ಕಣದಲ್ಲಿದ್ದ ಆತಿಥೇಯ ಅಮೆರಿಕದ 23 ಆಟಗಾರರ ಪೈಕಿ ಈಗ ಇಬ್ಬರಷ್ಟೇ ಸವಾಲು ಜೀವಂತ ಉಳಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರು ಹಾಲಿ ರನ್ನರ್​ಅಪ್​ ಟೇಲರ್​ ಫ್ರಿಟ್ಜ್​. ಅವರ 3ನೇ ಸುತ್ತಿನಲ್ಲಿ ಸ್ವಿರ್ಜಲೆಂಡ್​ನ ಜೆರೋಮ್​ ಕಿಮ್​ ವಿರುದ್ಧ 7-6, 6-7, 6-4, 6-4ರಿಂದ ಗೆಲುವು ಸಾಧಿಸಿದರು. 14ನೇ ಶ್ರೇಯಾಂಕಿತ ಟಾಮಿ ಪೌಲ್​ ಪುರುಷರ ಸಿಂಗಲ್ಸ್​ನಲ್ಲಿ ಸವಾಲು ಉಳಿಸಿಕೊಂಡಿರುವ ಮತ್ತೋರ್ವ ಅಮೆರಿಕ ಆಟಗಾರರಾಗಿದ್ದಾರೆ.

ಭಾರತೀಯರ ಶುಭಾರಂಭ

ಪುರುಷರ ಡಬಲ್ಸ್​ನಲ್ಲಿ ಭಾರತದ ಅನಿರುದ್ಧ ಚಂದ್ರಶೇಖರ್​ ಮತ್ತು ವಿಜಯ್​ ಪ್ರಶಾಂತ್​ ಜೋಡಿ 8ನೇ ಶ್ರೇಯಾಂಕಿತ ಸ್ಥಳಿಯ ಜೋಡಿಯಾದ ಕ್ರಿಶ್ಚಿಯನ್​ ಹ್ಯಾರಿಸನ್​ ಮತ್ತು ಇವಾನ್​ ಕಿಂಗ್​ಗೆ 3-6, 6-3, 6-4ರಿಂದ ಆಘಾತ ನೀಡುವ ಮೂಲಕ ಶುಭಾರಂಭ ಕಂಡರು. ಭಾರತದ ಮತ್ತೊಂದು ಜೋಡಿಯಾದ ರಿತ್ವಿಕ್​ ಬೊಲ್ಲಿಪಲ್ಲಿ ಮತ್ತು ಎನ್​. ಬಾಲಾಜಿ ಶ್ರೀರಾಮ್​ ಜೋಡಿ ಮೊದಲ ಸುತ್ತಿನಲ್ಲೇ ಪರಾಭವಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net