

ಪ್ಯಾರಿಸ್: ಸೆರ್ಬಿಯಾದ 24 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ನೊವಾಕ್ ಜೋಕೊವಿಕ್ ತನ್ನ ಸಾಧನೆಗಳ ಪಟ್ಟಿಗೆ ಒಲಿಂಪಿಕ್ಸ್ ಸ್ವರ್ಣ ಪದಕವನ್ನೂ ಸೇರ್ಪಡೆಗೊಳಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಟೆನಿಸ್ ಸ್ಪರ್ಧೆಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾನುವಾರ ರೋಲ್ಯಾಂಡ್ ಗ್ಯಾರಸ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 37 ವರ್ಷದ ಜೊಕೊವಿಕ್ ಸ್ಪೇನ್ ಯುವ ಆಟಗಾರ ಕಾಲೋರ್ಸ್ ಅಲ್ಕರಾಜ್ ಎದುರು 7-6, 7-6 ನೇರಸೆಟ್ಗಳಿಂದ ಅಮೋ ಗೆಲುವು ದಾಖಲಿಸಿದರು. ಈ ಮೂಲಕ ಜೋಕೊವಿಕ್ ಒಲಿಂಪಿಕ್ಸ್ ಟೆನಿಸ್ನಲ್ಲಿ ಚಿನ್ನದ ಪದಕ ಗೆದ್ದ ಅತಿ ಹಿರಿಯ ಆಟಗಾರ ಎನಿಸಿದ್ದಾರೆ. ಜತೆಗೆ ಎಲ್ಲ 4 ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನೊಂದಿಗೆ ಒಲಿಂಪಿಕ್ಸ್ ಚಿನ್ನದ ಪದಕವನ್ನು ಗೆದ್ದು "ಕೆರಿಯರ್ ಗೋಲ್ಡನ್ ಸ್ಲಾಂ' ಸಾಧಿಸಿದ ವಿಶ್ವದ 5ನೇ ಆಟಗಾರ ಎನಿಸಿದರು.
ವಿಶ್ವ ನಂ. 1 ಪಟ್ಟದಲ್ಲಿ ಅತ್ಯಧಿಕ 428 ವಾರಗಳ ಕಾಲ ನೆಲೆಸಿದ ಆಟಗಾರ ಎನಿಸಿರುವ ಜೋಕೊವಿಕ್ 2008ರಿಂದಲೂ ಒಲಿಂಪಿಕ್ಸ್ನಲ್ಲಿ ಆಡುತ್ತಿದ್ದರೂ, ಪದಾರ್ಪಣೆಯ ಆವೃತ್ತಿಯಲ್ಲಿ ಕಂಚು ಗೆದ್ದಿದ್ದೇ ಸಿಂಗಲ್ಸ್ನಲ್ಲಿ ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಎಲ್ಲ 4 ಗ್ರಾಂಡ್ ಸ್ಲಾಂ ಜತೆಗೆ ಡೇವಿಸ್ ಕಪ್, ಎಟಿಪಿ ಫೈನಲ್ಸ್ ಸಹಿತ ಟೆನಿಸ್ನಲ್ಲಿ ಎಲ್ಲ ಪ್ರಶಸ್ತಿ ಗೆದ್ದಿದ್ದ ಜೋಕೋಗೆ ಒಲಿಂಪಿಕ್ಸ್ ಚಿನ್ನದ ಕೊರತೆಯೊಂದೇ ಕಾಡುತ್ತಿತ್ತು. ಜೋಕೋ 2ನೇ ಸುತ್ತಿನಲ್ಲಿ 14 ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್ ರಾಫೆಲ್ ನಡಾಲ್ಗೆ ಸೋಲುಣಿಸಿದ್ದರು. 21 ವರ್ಷದ ಅಲ್ಕರಾಜ್ ಒಲಿಂಪಿಕ್ಸ್ ಚಿನ್ನ ಗೆದ್ದ ಅತಿ ಕಿರಿಯ ಆಟಗಾರ ಎನಿಸುವ ಅವಕಾಶದಿಂದ ವಂಚಿತರಾದರೂ, ಬೆಳ್ಳಿ ಪದಕದ ಸಮಾಧಾನ ಕಂಡರು.
ಜೋಕೊವಿಕ್ "ವೃತ್ತೀಜಿವನದ ಗೋಲ್ಡನ್ ಸ್ಲಾಂ' ಸಾಧಿಸಿದ ವಿಶ್ವದ 5ನೇ ಆಟಗಾರ ಎನಿಸಿದರು. ಸ್ಟೆಫಿ ಗ್ರಾಫ್, ಆಂಡ್ರೆ ಅಗಾಸಿ, ಸೆರೇನಾ ವಿಲಿಯಮ್ಸ್ ಮತ್ತು ರಾಫೆಲ್ ನಡಾಲ್ ಹಿಂದಿನ ನಾಲ್ವರು ಸಾಧಕರಾಗಿದ್ದಾರೆ.