

ಸಿಡ್ನಿ: ಜಾಗತಿಕ ಟೆಸ್ಟ್ ಕ್ರಿಕೆಟ್ ಸ್ಪರ್ಧೆಯನ್ನು ಎರಡು ಡಿವಿಷನ್ಗಳಲ್ಲಿ ವಿಭಾಗಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ (ಐಸಿಸಿ) ಹೊಸ ಚೇರ್ಮನ್ ಜಯ್ ಷಾ ಒಲವು ತೋರಿದ್ದಾರೆ. ಈ ಸಂಬಂಧ ಅವರು ಈಗಾಗಲೆ ಪ್ರಮುಖ 3 ಟೆಸ್ಟ್ ರಾಷ್ಟ್ರಗಳಾದ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೆಲಿಯಾ ಜತೆಗೆ ಮಾತುಕತೆಯನ್ನೂ ಆರಂಭಿಸಿದ್ದು, ಪೂರಕ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದು ವರದಿಯಾಗಿದೆ.
ಟೆಸ್ಟ್ ಕ್ರಿಕೆಟ್ ಎರಡು ಡಿವಿಷನ್ಗಳಲ್ಲಿ ವಿಭಾಗವಾಗುವುದರಿಂದ ಭಾರತ, ಇಂಗ್ಲೆಂಡ್ ಮತ್ತು ಆಸೀಸ್ ತಂಡಗಳು ಪರಸ್ಪರ ಹೆಚ್ಚಾಗಿ ಮುಖಾಮುಖಿಯಾಗುವ ಅವಕಾಶ ಲಭಿಸುತ್ತವೆ. ಪ್ರಸಕ್ತ ಭಾರತ ತಂಡ ಇಂಗ್ಲೆಂಡ್ ಮತ್ತು ಆಸೀಸ್ ಎದುರು 4 ವರ್ಷಗಳಲ್ಲಿ ತಲಾ 2 ಬಾರಿ ಆಡುತ್ತಿದ್ದರೆ, ಡಿವಿಷನ್ ಮಾದರಿಯಿಂದ 3 ವರ್ಷಗಳ ಅಂತರದಲ್ಲೇ ತಲಾ 2 ಬಾರಿ ಆಡುವ ಅವಕಾಶ ಲಭಿಸುತ್ತದೆ.
ಎರಡು ಡಿವಿಷನ್ಗಳಲ್ಲಿ ವಿಭಾಗಿಸುವ ಬಗ್ಗೆ ಜಯ್ ಷಾ, ಕ್ರಿಕೆಟ್ ಆಸ್ಟ್ರೆಲಿಯಾ ಮುಖ್ಯಸ್ಥ ಮೈಕ್ ಬೈರ್ಡ್ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಿಚರ್ಡ್ ಥಾಂಪ್ಸನ್ ಇದೇ ತಿಂಗಳು ಸಭೆಯೊಂದನ್ನು ನಡೆಸಲಿದ್ದಾರೆ. ಭಾರತ-ಆಸೀಸ್ ನಡುವೆ ಭಾನುವಾರ ಮುಕ್ತಾಯಗೊಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ 5 ಪಂದ್ಯಗಳಿಗೆ 8 ಲಕ್ಷಕ್ಕೂ ಅಧಿಕ ಜನರು ಹಾಜರಾಗಿರುವುದು ಮತ್ತು ಟಿವಿಯಲ್ಲೂ ವೀಕ್ಷಕರ ಸಂಖ್ಯೆ ಹೆಚ್ಚಾಗಿದ್ದು, ಪ್ರಮುಖ ತಂಡಗಳು ಆಗಾಗ ಮುಖಾಮುಖಿ ಆಗುವಂತೆ ಮಾಡುವತ್ತ ಒಲವು ಮೂಡಿಸಿದೆ.
ಟೆಸ್ಟ್ ಕ್ರಿಕೆಟ್ ಜೀವಂತ ಉಳಿಯಬೇಕಾದರೆ ಅಗ್ರ ಮತ್ತು ಬಲಿಷ್ಠ ತಂಡಗಳು ಹೆಚ್ಚು ಹೆಚ್ಚು ಮುಖಾಮುಖಿ ಆಗಬೇಕು. ಇದರಿಂದ ಪಂದ್ಯಗಳ ರೋಚಕತೆ ಹೆಚ್ಚುತ್ತವೆ ಎಂದು ಭಾರತ ತಂಡದ ಮಾಜಿ ಕೋಚ್ ಮತ್ತು ವೀಕ್ಷಕ ವಿವರಣೆಕಾರ ರವಿಶಾಸ್ತ್ರಿ ಹಲವು ಬಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇತರ ಕೆಲ ಮಾಜಿ ಆಟಗಾರರೂ ಇಂಥದ್ದೇ ಅಭಿಪ್ರಾಯಗಳನ್ನು ಆಗಾಗ ಹಂಚಿಕೊಳ್ಳುತ್ತ ಬಂದಿದ್ದಾರೆ.
ಜಾಗತಿಕ ಕ್ರಿಕೆಟ್ನಲ್ಲಿ ಸದ್ಯ ಟಿ20 ಫ್ರಾಂಚೈಸಿ ಲೀಗ್ ಮತ್ತು ಖಾಸಗಿ ಮಾಲೀಕತ್ವಗಳು ಹೆಚ್ಚುತ್ತಿವೆ. ಇದು ಆಟಗಾರರಿಗೆ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡುವಂತೆ ಮಾಡುತ್ತಿವೆ. ಇದು ಟೆಸ್ಟ್ ಕ್ರಿಕೆಟ್ಗೆ ಹೆಚ್ಚಿನ ಸವಾಲೊಡ್ಡಿದ್ದು, "ಲಾಭದಾಯಕ ಮತ್ತು ಲಾಭದಾಯಕವಲ್ಲದ ಕ್ರಿಕೆಟ್' ನಡುವಿನ ಸ್ಪರ್ಧೆಯಂತೆ ಕಾಣಿಸಿದೆ.
2027ರ ನಂತರವೇ ಜಾರಿ?
ಟೆಸ್ಟ್ ಕ್ರಿಕೆಟ್ಅನ್ನು 2 ಡಿವಿಷನ್ಗಳಲ್ಲಿ ವಿಂಗಡಿಸುವುದೇ ಆದರೂ ಇದು 2027ರ ನಂತರವೇ ಜಾರಿಯಾಗಲಿದೆ. ಯಾಕೆಂದರೆ 2027ರವರೆಗಿನ ಐಸಿಸಿ ಫ್ಯೂಚರ್ ಟೂರ್ಸ್ ಪ್ರೋಗ್ರಾಮ್ (ಎಫ್ಟಿಪಿ) ಈಗಾಗಲೆ ಸಿದ್ಧಗೊಂಡಿದೆ. ಹೀಗಾಗಿ 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಫೈನಲ್ ನಡೆದ ಬಳಿಕ ಎರಡು ಡಿವಿಷನ್ ಜಾರಿಗೆ ಬರಬಹುದು. ಇದರಿಂದ 2019ರಲ್ಲಿ ಶುರುವಾದ ಡಬ್ಲ್ಯುಟಿಸಿಯ ಹಾಲಿ ಮಾದರಿ ಇನ್ನೊಂದು ಆವೃತ್ತಿಗೆ ಮಾತ್ರ ಇರಲಿದೆ ಎನ್ನಬಹುದು.
ಎರಡು ಡಿವಿಷನ್ಗಳು:
ಮೊದಲ ಡಿವಿಷನ್: ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೆಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ, ಪಾಕಿಸ್ತಾನ.
ಎರಡನೇ ಡಿವಿಷನ್: ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಐರ್ಲೆಂಡ್, ಅಫ್ಘಾನಿಸ್ತಾನ, ಜಿಂಬಾಬ್ವೆ.
ಹೊಸ ಯೋಚನೆ ಅಲ್ಲ!
ಟೆಸ್ಟ್ ಕ್ರಿಕೆಟ್ ಅನ್ನು 2 ಡಿವಿಷನ್ಗಳಲ್ಲಿ ವಿಂಗಡಿಸುವುದು ಹೊಸ ಯೋಚನೆ ಏನಲ್ಲ. 2016ರಲ್ಲೇ ಐಸಿಸಿ ಮಟ್ಟದಲ್ಲಿ ಇಂಥದ್ದೊಂದು ಚಿಂತನೆ ನಡೆದಿತ್ತು. ಆದರೆ ಆಗ ಬಿಸಿಸಿಐಯೇ ಇದನ್ನು ಪ್ರಮುಖವಾಗಿ ವಿರೋಧಿಸಿತ್ತು. ಸಣ್ಣ ಟೆಸ್ಟ್ ದೇಶಗಳ ಮಾತನ್ನು ಕೇಳಿದ್ದ ಬಿಸಿಸಿಐ, ಐಸಿಸಿ ಈ ಹೆಜ್ಜೆ ಇಡುವುದಕ್ಕೆ ಅಡ್ಡಗಾಲು ಹಾಕಿತ್ತು. ಬಿಸಿಸಿಐ ಜತೆಗೆ ಶ್ರೀಲಂಕಾ, ಬಾಂಗ್ಲಾದೇಶ, ಜಿಂಬಾಬ್ವೆ ಕ್ರಿಕೆಟ್ ಮಂಡಳಿಗಳೂ ಈ ಪ್ರಸ್ತಾಪವನ್ನು ವಿರೋಧಿಸಿದ್ದವು. ಆಗ ಆಸೀಸ್, ಇಂಗ್ಲೆಂಡ್, ದ. ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮಂಡಳಿಗಳಷ್ಟೇ ಬೆಂಬಲ ಸೂಚಿಸಿದ್ದವು. "ಟೆಸ್ಟ್ ಕ್ರಿಕೆಟ್ಅನ್ನು 2 ವಿಭಾಗ ಮಾಡಿದರೆ ಸಣ್ಣ ದೇಶಗಳಿಗೆ ಹೆಚ್ಚಿನ ನಷ್ಟವಾಗುತ್ತದೆ. ಇದಕ್ಕೆ ಬಿಸಿಸಿಐ ಅವಕಾಶ ಕೊಡುವುದಿಲ್ಲ' ಎಂದು ಆಗಿನ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದರು.
ಪ್ರಸಾರ ವಾಹಿನಿಗಳ ಬೇಡಿಕೆ ಕಾರಣ...
ಟೆಸ್ಟ್ ಕ್ರಿಕೆಟ್ಅನ್ನು 2 ಡಿವಿಷನ್ ಆಗಿ ವಿಂಗಡಿಸುವ ಯೋಚನೆ ಸರಿಸುಮಾರು 8 ವರ್ಷಗಳ ಬಳಿಕ ಮರುಹುಟ್ಟು ಪಡೆದುಕೊಳ್ಳಲು ನೇರಪ್ರಸಾರ ವಾಹಿನಿಗಳ ಬೇಡಿಕೆಯೂ ಪ್ರಮುಖ ಕಾರಣವಾಗಿದೆ. ಪ್ರಮುಖ ದೇಶಗಳ ಸರಣಿ ಮತ್ತು ಇತರ ಸರಣಿಗಳ ನಡುವಿನ ಪ್ರೇಕ್ಷಕರು, ವೀಕ್ಷಕರು ಮತ್ತು ಪ್ರಾಯೋಜಕರ ಆಸಕ್ತಿಯಲ್ಲಿನ ವ್ಯತ್ಯಾಸಗಳನ್ನು ಡಿಸ್ನಿ+ಸ್ಟಾರ್ ಸಹಿತ ಪ್ರಮುಖ ಪ್ರಸಾರ ವಾಹಿನಿಗಳು ಗಮನಿಸಿವೆ. ಆಸ್ಟ್ರೆಲಿಯಾದ ಪ್ರಸಾರ ವಾಹಿನಿಗಳಾದ "ಫಾಕ್ಸ್ಟೆಲ್' ಮತ್ತು "ಸೆವೆನ್' ಕೂಡ ಭಾರತ ಮತ್ತು ಇಂಗ್ಲೆಂಡ್ ಎದುರಿನ ಹೆಚ್ಚಿನ ಸರಣಿಗಾಗಿ "ಕ್ರಿಕೆಟ್ ಆಸ್ಟ್ರೆಲಿಯಾ'ಗೆ ಬೇಡಿಕೆ ಸಲ್ಲಿಸಿವೆ. ಜಯ್ ಷಾ ಐಸಿಸಿ ಚೇರ್ಮನ್ ಆಗಿ ಆಸೀಸ್, ಇಂಗ್ಲೆಂಡ್ ಬೆಂಬಲವೂ ನೆರವಾಗಿದ್ದರಿಂದ ಅವರೂ ಈಗ ತಕ್ಕ ಸ್ಪಂದನೆ ನೀಡುತ್ತಿದ್ದಾರೆ.
*ಡಬ್ಲ್ಯುಟಿಸಿ ಹಾಲಿ ಸ್ವರೂಪಕ್ಕೆ ಟೀಕೆ
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ (ಡಬ್ಲ್ಯುಟಿಸಿ) ಹಾಲಿ ಸ್ವರೂಪಕ್ಕೆ ಈಗಾಗಲೆ ಟೀಕೆಗಳು ಕೇಳಿಬರಲಾರಂಭಿಸಿವೆ. ಪ್ರಮುಖವಾಗಿ ಎರಡು ತಂಡಗಳನ್ನು ಫೈನಲ್ಗೆ ಆರಿಸುವ ಮಾನದಂಡದ ಬಗ್ಗೆ ಅಸಮಾಧಾನಗಳಿವೆ. ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ನಿರ್ವಹಣೆಯನ್ನೇ ತೋರುತ್ತ ಬಂದಿದ್ದರೂ, 3 ಆವೃತ್ತಿಗಳಲ್ಲೂ ಫೈನಲ್ ಸನಿಹವೂ ಬಂದಿಲ್ಲ. ಹೀಗಾಗಿ ಡಬ್ಲ್ಯುಟಿಸಿ ಸ್ವರೂಪವೇ ಗೊಂದಲಮಯವಾಗಿದೆ ಎಂದು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ದೂರಿದ್ದರು. ಈ ಟೀಕೆಗಳೂ ಡಬ್ಲ್ಯುಟಿಸಿಗೆ ಎರಡು ಡಿವಿಷನ್ಗಳ ಹೊಸ ಸ್ವರೂಪವನ್ನು ನೀಡಲು ಮತ್ತೊಂದು ಕಾರಣವೆನಿಸಲಿದೆ.