ಗಲೀಜಾಗುವ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣ

22CBP1
Published on

ಚಿಕ್ಕಬಳ್ಳಾಪುರ: ಇತರ ತಾಲೂಕುಗಳಿಗೆ ಮಾದರಿಯಾಗಿ ಅಭಿವೃದ್ಧಿಯನ್ನು ಕಾಣಬೇಕಾಗಿರುವ ಇಲ್ಲಿನ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣವು, ವಿವಿಧ ಕಾರ್ಯಕ್ರಮಗಳ ಆಯೋಜನೆಯ ಸಂದರ್ಭದಲ್ಲಿ ಸಂಗ್ರಹವಾಗುವ ತ್ಯಾಜ್ಯದ ರಾಶಿಯಿಂದ ಅನೈರ್ಮಲ್ಯ ಸಮಸ್ಯೆಗೀಡಾಗುತ್ತಿದೆ.
ಹೌದು! ಕ್ರೀಡಾ ಚಟುವಟಿಕೆಗೆ ಮಾತ್ರ ಮೀಸಲಿಸಬೇಕಾಗಿರುವ ಕ್ರೀಡಾಂಗಣವು ರಾಷ್ಟ್ರೀಯ ಹಬ್ಬಗಳು, ರಾಜಕೀಯ ಸಮಾವೇಶ, ಉದ್ಯೋಗ ಮೇಳ, ವಿವಿಧ ಕಾರ್ಯಕ್ರಮಗಳಿಗೆ ಆಗಾಗ ಬಳಕೆಯಾಗುತ್ತಿರುತ್ತದೆ. ಇದೇ ವೇಳೆ ತಿಂಡಿ ತಿನಿಸು ಪೊಟ್ಟಣ, ಕುಡಿಯುವ ನೀರಿನ ಪಾಕೇಟ್, ಪ್ಲಾಸ್ಟಿಕ್ ತಟ್ಟೆ, ಲೋಟ ಸೇರಿದಂತೆ ನಾನಾ ತ್ಯಾಜ್ಯಗಳು ವಸ್ತುಗಳು ರಾಶಿಗಟ್ಟಲೇ ಬಿದ್ದಿರುತ್ತವೆ. ಇದನ್ನು ತ್ವರಿತವಾಗಿ ತೆರವುಗೊಳಿಸುವ ನಿಟ್ಟಿನಲ್ಲಿ, ಸಂಘಟಕರಿಗೆ ಸ್ವಚ್ಛತೆಯ ಬಗ್ಗೆ ಕಟ್ಟುನಿಟ್ಟಾಗಿ ಸೂಚಿಸುವುದರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ನಿರ್ಲಕ್ಷ್ಯ ತೋರಿದೆ. ಇದರಿಂದ ಕ್ರೀಡಾಪಟುಗಳು ತೊಂದರೆ ಅನುಭವಿಸಬೇಕಾಗಿದೆ.

  • ಕ್ರೀಡಾಂಗಣದಲ್ಲಿ ತ್ಯಾಜ್ಯ
    ಇತ್ತೀಚೆಗೆ ಲೋಕಸಭಾ ಚುನಾವಣೆಯ ಲೆಕ್ಕಾಚಾರದಲ್ಲಿ ರಾಜಕೀಯ ಹಿನ್ನೆಲೆಯ ಯುವಕರು ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದು ಮಾಜಿ ಸಂಸದರು, ಸಚಿವರು, ಪಕ್ಷಗಳ ಮುಖಂಡರು ಮತ್ತು ಜಿಲ್ಲಾಧಿಕಾರಿಗಳು ಸೇರಿದಂತೆ ಹಲವರು ಭಾಗಿಯಾಗಿದ್ದರು. ಟೂರ್ನಮೆಂಟ್ ಯಶಸ್ವಿಯಾಗಿ ನಡೆದರೂ ಎಲ್ಲೆಂದರಲ್ಲಿ ತ್ಯಾಜ್ಯ ಸಾಮಗ್ರಿಗಳನ್ನು ಬಿಸಾಡಲಾಗಿದೆ. ಇದು ವಾಯು ವಿಹಾರಿಗಳು ಮತ್ತು ಕ್ರೀಡಾಪಟುಗಳ ಆಕ್ರೋಶಕ್ಕೆ ಕಾರಣವಾಗಿದೆ.
    ಪ್ಲಾಸ್ಟಿಕ್ ಬಾಟಲ್, ತಂಪು ಪಾನೀಯಾ ಪಾಕೇಟ್, ಪೇಪರ್ ತಟ್ಟೆಗಳು, ಪ್ರಚಾರ ಕರಪತ್ರಗಳು ಸೇರಿದಂತೆ ಹಲವು ವಸ್ತುಗಳು ಕ್ರೀಡಾಂಗಣದಲ್ಲಿ ಬಿದ್ದು ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದ್ದನ್ನು ಕಂಡ ವಾಯು ವಿಹಾರಿಗಳು ಸಂಬಂಧಪಟ್ಟವರ ನಿರ್ಲಕ್ಷ್ಯ ಧೋರಣೆಗೆ ಕಿಡಿಕಾರಿದ್ದಾರೆ. ಇದು ಜಿಲ್ಲಾ ಕ್ರೀಡಾಂಗಣದ ದುಸ್ಥಿತಿ ಎಂದು ಕಿಡಿಕಾರಿದ್ದಾರೆ.
  • ಅಭಿವೃದ್ಧಿಗಿಂತಲೂ ಹಾಳು
    ಇಲ್ಲಿನ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ‍್ಯಾಕ್ ನಿರ್ಮಾಣ, ಹೆಚ್ಚಿನ ಮೂಲ ಸೌಕರ್ಯ, ವಿವಿಧ ಅಂಗಣದ ಅಭಿವೃದ್ಧಿ ಸೇರಿದಂತೆ ಪ್ರಗತಿದಾಯಕ ಕೆಲಸಗಳ ಅಗತ್ಯತೆಯ ಬಗ್ಗೆ ಕ್ರೀಡಾಪಟುಗಳು ಒಂದೂ ವರೆ ದಶಕದಿಂದಲೂ ಗಮನ ಸೆಳೆಯುತ್ತಿದ್ದಾರೆ. ಆದರೆ, ಇಲ್ಲಿ ಪ್ರಗತಿದಾಯಕ ಕೆಲಸಗಳಿಗಿಂತಲೂ ಕಿರಿಕಿರಿ ಚಟುವಟಿಕೆಯೇ ಹೆಚ್ಚಾಗಿದೆ.
    ಮಳೆ ಬಂದರೆ ಮೈದಾನವು ಜಲಾವೃತಗೊಂಡಿರುತ್ತದೆ. ಕೆಸರಿನ ಮಣ್ಣಿನಲ್ಲಿ ಓಡಾಡಲು ಕಷ್ಟವಾಗುತ್ತದೆ. ಮತ್ತೊಂದೆಡೆ ತ್ಯಾಜ್ಯ ಗಿಡಗಳು ಬೆಳೆದಿದ್ದು ಸರ್ಮಪಕ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ. ಇಲ್ಲಿಗೆ ಬರುವ ಕ್ರೀಡಾಪಟುಗಳ ಅನುಕೂಲಕ್ಕಾಗಿ ಅನುಗುಣವಾಗಿ ಮೂಲ ಸೌಕರ್ಯ ಇಲ್ಲ. ಗಲೀಜಾಗುವ ನೆಪದಲ್ಲಿ ಶೌಚಗೃಹ ಬಾಗಿಲು ಮುಚ್ಚುವ, ಕಿತ್ತುಹೋದ ನಲ್ಲಿಗಳನ್ನು ಸರಿಪಡಿಸದಿರುವ ಧೋರಣೆಯನ್ನು ಮಾತ್ರ ಮೊದಲಿನಿಂದಲೂ ಪಾಲಿಸಲಾಗುತ್ತಿದೆ. ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವುದಾಗಿ ಭರವಸೆ ನೀಡಿದ್ದಾರೆ.
  • ಅನ್ಯ ಕಾರ್ಯಕ್ರಮಗಳಿಗೆ ಬೇಡ
    ಕ್ರೀಡಾಂಗಣವು ಅನ್ಯ ಬೃಹತ್ ಕಾರ್ಯಕ್ರಮಗಳಿಗೆ ಬಳಕೆಯಾಗುವುದು ಹೆಚ್ಚು. ಈ ಹಿನ್ನೆಲೆಯಲ್ಲಿ ವೇದಿಕೆ ಸಿದ್ಧತೆ, ಕಾರ್ಯಕ್ರಮ ಚಟುವಟಿಕೆ, ಅಳವಡಿಕೆಯ ವಸ್ತುಗಳ ತೆರವಿನ ಕೆಲಸಗಳಿಂದ ಕನಿಷ್ಠ ಮೂರ್ನಾಲ್ಕು ದಿನ ನಿರಂತರವಾಗಿ ಇಲ್ಲಿ ಕ್ರೀಡೆಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಕ್ರೀಡಾಪಟುಗಳು ತಾತ್ಕಾಲಿಕವಾಗಿ ಬೇರೆ ಮೈದಾನಗಳನ್ನು ಆವಲಂಬಿಸಬೇಕು ಇಲ್ಲವೇ ಕ್ರೀಡೆಗಳಿಂದ ದೂರ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆ ಇಲ್ಲಿನ ಕ್ರೀಡಾಂಗಣವನ್ನು ಅನ್ಯ ಕಾರ್ಯಕ್ರಮಗಳಿಗೆ ಬಳಕೆಗೆ ನೀಡಬಾರದು ಎಂಬ ಒತ್ತಾಯ ಕೇಳಿ ಬರುತ್ತಿದೆ.

*ಕ್ರೀಡಾಂಗಣದಲ್ಲಿ ಕಾರ್ಯಕ್ರಮದ ಆಯೋಜನೆಯ ಸಂದರ್ಭದಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿರುವುದರ ಬಗ್ಗೆ ಹಲವು ಬಾರಿ ಗಮನ ಸೆಳೆಯಲಾಗುತ್ತಿದೆ. ಆದರೆ, ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ.

ಮಂಚನಬಲೆ ಶ್ರೀನಿವಾಸ್, ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net