ಕನ್ನಡಿಗರಿಗೆ ನಿರಾಸೆಯ ಐಪಿಎಲ್​; ಕಪ್​ ಹಿಡಿಯುವ ಅದೃಷ್ಟ ಒಲಿದಿದ್ದು ರಾಜ್ಯದ ಒಬ್ಬ ಆಟಗಾರನಿಗೆ ಮಾತ್ರ!

web karnataka
Published on

ಬೆಂಗಳೂರು: ಆರ್​ಸಿಬಿ ತಂಡ ಸತತ 17ನೇ ಸಲವೂ ಕಪ್​ ಗೆಲ್ಲಲು ವಿಫಲವಾಗಿದ್ದು ಮಾತ್ರವಲ್ಲದೆ, ಈ ಸಲದ ಐಪಿಎಲ್​ ಟೂರ್ನಿ ಒಟ್ಟಾರೆಯಾಗಿ ಕನ್ನಡಿಗರ ಪಾಲಿಗೆ ನಿರಾಶಾದಾಯಕವೆನಿಸಿತು. ಆದರೆ ಐಪಿಎಲ್​ನಲ್ಲಿ ಆಡಿದ ಒಟ್ಟು 12 ಕನ್ನಡಿಗರ ಪೈಕಿ ಚಾಂಪಿಯನ್​ ಕೆಕೆಆರ್​ ತಂಡದಲ್ಲಿದ್ದ ಏಕಮಾತ್ರ ಕನ್ನಡಿಗ ಮನೀಷ್​ ಪಾಂಡೆಗೆ ಕಪ್​ ಹಿಡಿಯುವ ಅದೃಷ್ಟ ಒಲಿಯಿತು.

ವಿಜೇತ ಕೆಕೆಆರ್​ ತಂಡದಲ್ಲಿ ಮನೀಷ್​ ಪಾಂಡೆ ಆಡಿದ್ದು ಒಂದೇ ಪಂದ್ಯವಾದರೂ, ಮುಂಬೈ ಎದುರು ಕೆಕೆಆರ್​ 57 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದು 42 ರನ್​ ಗಳಿಸುವ ಮೂಲಕ ಕೆಕೆಆರ್​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಮುನ್ನ 2014ರಲ್ಲಿ ಕೆಕೆಆರ್​ ಕೊನೆಯದಾಗಿ ಐಪಿಎಲ್​ ಗೆದ್ದಾಗಲೂ ಮನೀಷ್​ ಅದೇ ತಂಡದಲ್ಲಿದ್ದರು ಮತ್ತು 401 ರನ್​ ಗಳಿಸಿ ಮಿಂಚಿದ್ದರು.

ಲಖನೌ ನಾಯಕರಾಗಿ ಕೆಎಲ್​ ರಾಹುಲ್​ 520 ರನ್​ ಗಳಿಸಿದರೂ, ಅವರ ಸ್ಟ್ರೈಕ್​​ರೇಟ್​ ಮತ್ತು ನಾಯಕತ್ವ ಟೀಕೆಗಳಿಗೆ ಗುರಿಯಾಯಿತು. ಅದೇ ತಂಡದಲ್ಲಿ ಮತ್ತೋರ್ವ ಕನ್ನಡಿಗ ದೇವದತ್​ ಪಡಿಕ್ಕಲ್​ 7 ಪಂದ್ಯ ಆಡಿ ಗಳಿಸಿದ್ದು ಕೇವಲ 38 ರನ್​. 13 ರನ್​ ಗಳಿಸಿದ್ದೇ ಗರಿಷ್ಠವೆನಿಸಿತು. ಕೆ. ಗೌತಮ್​ ಒಂದೇ ಪಂದ್ಯ ಆಡಿ 2 ಓವರ್​ಗಳಲ್ಲಿ 29 ರನ್​ ಚಚ್ಚಿಸಿಕೊಂಡರು. ಕರ್ನಾಟಕ ತಂಡದ ನಾಯಕ ಮಯಾಂಕ್​ ಅಗರ್ವಾಲ್​ ರನ್ನರ್​ಅಪ್​ ಸನ್​ರೈಸರ್ಸ್​ ಪರ 4 ಪಂದ್ಯ ಆಡಿ ಗಳಿಸಿದ್ದು 64 ರನ್​ ಮಾತ್ರ. ವೈಫಲ್ಯ ಮತ್ತು ಗಾಯದಿಂದಾಗಿ 11ರ ಬಳಗದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲಿಲ್ಲ.

ಆರ್​ಸಿಬಿ ತಂಡದಲ್ಲಿ ವೇಗಿ ವೈಶಾಕ್​ ವಿಜಯ್​ಕುಮಾರ್​ 4 ಪಂದ್ಯಗಳಲ್ಲಿ 4 ವಿಕೆಟ್​ ಪಡೆದರೂ, ದುಬಾರಿ ರನ್​ ನೀಡಿದ್ದರಿಂದ ಹೆಚ್ಚಿನ ಅವಕಾಶ ಪಡೆಯಲಿಲ್ಲ. ಮನೋಜ್​ ಭಾಂಡಗೆ ಬೆಂಚ್​ನಲ್ಲೇ ಉಳಿದರು. ಪಂಜಾಬ್​ ತಂಡದಲ್ಲಿ ವಿದ್ವತ್​ ಕಾವೇರಪ್ಪ ಐಪಿಎಲ್​ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ 2 ಪ್ರಮುಖ ವಿಕೆಟ್​ ಕಬಳಿಸಿದರೂ, ನಂತರ ಅವಕಾಶ ಪಡೆಯದಿದ್ದುದು ವಿಪರ್ಯಾಸ. ಗುಜರಾತ್​ ತಂಡದಲ್ಲಿ ಅಭಿನವ್​ ಮನೋಹರ್​ 2 ಪಂದ್ಯಗಳಲ್ಲಿ 9 ರನ್​ ಮಾತ್ರ ಗಳಿಸಿದರೆ, ಮುಂಬೈ ಪರ ಶ್ರೇಯಸ್​ ಗೋಪಾಲ್​ 3 ಪಂದ್ಯಗಳಲ್ಲಿ 3 ವಿಕೆಟ್​ ಮಾತ್ರ ಪಡೆದರು. ಡೆಲ್ಲಿ ತಂಡದಲ್ಲಿದ್ದ ಪ್ರವಿಣ್​ ದುಬೆ ಈ ಬಾರಿ ಕಣಕ್ಕಿಳಿಯಲೇ ಇಲ್ಲ. ವೇಗಿ ಪ್ರಸಿದ್ಧ ಕೃಷ್ಣ (ರಾಜಸ್ಥಾನ) ಟೂರ್ನಿಗೆ ಮುನ್ನವೇ ಗಾಯಗೊಂಡು ಹೊರಬಿದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net