

ಮುಂಬೈ: ವಿಶ್ವದ ಐದು ಪ್ರಮುಖ ದೇಶಗಳ ದಿಗ್ಗಜ ಮತ್ತು ಮಾಜಿ ಕ್ರಿಕೆಟಿಗರು ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಅವರೆಲ್ಲರ ಉದ್ದೇಶಕ್ಕೆ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ20 ಟೂರ್ನಿ ವೇದಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಶನಿವಾರದಿಂದ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ಲೆಜೆಂಡ್ಸ್ ಮತ್ತು ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡಗಳು ಮುಖಾಮುಖಿ ಆಗಲಿವೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಟೂರ್ನಿಯಲ್ಲಿ ಆಡಲಿರುವ ಇತರ 3 ತಂಡಗಳು. ಟೂರ್ನಿಯಲ್ಲಿ ಹಲವು ದಿಗ್ಗಜ ನಿವೃತ್ತ ಆಟಗಾರರ ಬ್ಯಾಟಿಂಗ್-ಬೌಲಿಂಗ್ ನಿರ್ವಹಣೆಯನ್ನು ಮತ್ತೆ ನೋಡುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ಸಿಗಲಿದೆ.
ದಿಗ್ಗಜ ಸಚಿನ್ ತೆಂಡುಲ್ಕರ್ ಸಾರಥ್ಯದ ಭಾರತ ತಂಡದಲ್ಲಿ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್ ಖಾನ್ರಂಥ ಆಟಗಾರರು ಕಣಕ್ಕಿಳಿಯಲಿದ್ದರೆ, ವಿಂಡೀಸ್ ತಂಡ ಬ್ರಿಯಾನ್ ಲಾರಾ, ಶಿವನಾರಾಯಣ್ ಚಂದ್ರಪಾಲ್, ಕಾರ್ಲ್ ಹೂಪರ್ರಂಥ ಪ್ರಮುಖರನ್ನು ಹೊಂದಿದೆ. ರೌಂಡ್ ರಾಬಿನ್ ಲೀಗ್ ಹಂತದ ಬಳಿಕ ಅಗ್ರ 2 ತಂಡಗಳ ನಡುವೆ ಮಾರ್ಚ್ 22ರಂದು ಫೈನಲ್ ಪಂದ್ಯ ನಡೆಯಲಿದೆ. ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವುದು ಟೂರ್ನಿಯ ಉದ್ದೇಶ.
40 ಪ್ಲಸ್ ಕ್ರಿಕೆಟಿಗರ ಟಿ20 ಆಟ!
47 ವರ್ಷದ ಸಚಿನ್ ತೆಂಡುಲ್ಕರ್, 41 ವರ್ಷದ ವೀರೇಂದ್ರ ಸೆಹ್ವಾಗ್, 50 ವರ್ಷದ ಬ್ರಿಯಾನ್ ಲಾರಾ, 43 ವರ್ಷದ ಬ್ರೆಟ್ ಲೀ, 50 ವರ್ಷದ ಜಾಂಟಿ ರೋಡ್ಸ್, 47 ವರ್ಷದ ಮುತ್ತಯ್ಯ ಮುರಳೀ ಧರನ್ ಸಹಿತ ಟೂರ್ನಿಯಲ್ಲಿ ಬಹುತೇಕ 40 ಪ್ಲಸ್ ಆಟಗಾರರೇ ಕಣಕ್ಕಿಳಿಯುತ್ತಿದ್ದಾರೆ. ಈ ಆಟಗಾರರ ವೃತ್ತಿಜೀವನದ ಬಹುತೇಕ ಸಂಧ್ಯಾಕಾಲದಲ್ಲಿ ಟಿ20 ಕ್ರಿಕೆಟ್ ಆವಿಷ್ಕಾರಗೊಂಡಿತ್ತು. ಹೀಗಾಗಿ ಈ ಆಟಗಾರರು ವೃತ್ತಿಜೀವನದಲ್ಲಿ ಟಿ20 ಪಂದ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಡುವ ಅವಕಾಶ ಪಡೆದಿರಲಿಲ್ಲ. ಇದೀಗ ಇವರೆಲ್ಲರಿಗೂ ತಮ್ಮ ಟಿ20 ಕ್ರಿಕೆಟ್ ಕೌಶಲವನ್ನು ಪ್ರದರ್ಶಿಸುವ ಅವಕಾಶ ದೊರೆತಿದೆ.
ಇಂಡಿಯಾ ಲೆಜೆಂಡ್ಸ್: ಸಚಿನ್ ತೆಂಡುಲ್ಕರ್ (ನಾಯಕ), ಸೆಹ್ವಾಗ್, ಯುವರಾಜ್ ಸಿಂಗ್, ಅಜಿತ್ ಅಗರ್ಕರ್, ಸಂಜಯ್ ಬಂಗಾರ್, ಮುನಾಫ್ ಪಟೇಲ್, ಮೊಹಮದ್ ಕೈಫ್, ಪ್ರಜ್ಞಾನ್ ಓಜಾ, ಸಾಯಿರಾಜ್ ಬಹುತುಳೆ, ಅಬೆ ಕುರುವಿಲ್ಲಾ, ಜಹೀರ್ ಖಾನ್, ಇರ್ಫಾನ್ ಪಠಾಣ್, ಸಮೀರ್ ದಿಘ.
ವೆಸ್ಟ್ ಇಂಡೀಸ್ ಲೆಜೆಂಡ್ಸ್: ಬ್ರಿಯಾನ್ ಲಾರಾ (ನಾಯಕ), ಆಡಂ ಸ್ಯಾನ್ಫೋರ್ಡ್, ಕಾರ್ಲ್ ಹೂಪರ್, ಡರೇನ್ ಗಂಗಾ, ಶಿವನಾರಾಯಣ್ ಚಂದ್ರಪಾಲ್, ರಿಕಾರ್ಡೆ ಪೊವೆಲ್, ರಿಡ್ಲೆ ಜೇಕಬ್ಸ್, ಸ್ಯಾಮ್ಯುಯೆಲ್ ಬದ್ರಿ, ಸುಲೆಮಾನ್ ಬೆನ್, ಟಿನೊ ಬೆಸ್ಟ್, ದೀನನಾಥ ರಾಮ್ಾರಾಯಣ್, ಪೆಡ್ರೋ ಕಾಲಿನ್ಸ್, ಡ್ಯಾಂಜ ಹ್ಯಾಟ್.
ದಕ್ಷಿಣ ಆಫ್ರಿಕಾ ಲೆಜೆಂಡ್ಸ್: ಜಾಂಟಿ ರೋಡ್ಸ್ (ನಾಯಕ), ಹರ್ಶನ್ ಗಿಬ್ಸ್, ಗಾರ್ನೆಟ್ ಕ್ರುಗರ್, ಜಾಕಸ್ ರುಡಾಲ್ಪ್, ಆಂಡ್ರೋ ಹಾಲ್, ಅಲ್ಬಿ ಮಾರ್ಕೆಲ್, ಜೊಹಾನ್ ವಾನ್ ಡರ್ ವಾತ್, ಲ್ಯಾನ್ಸ್ ಕ್ಲುಸ್ನರ್, ಮಾರ್ಟಿನ್ ವಾನ್ ಜಾರ್ಸ್ವೆಲ್ಡ್, ಮಾರ್ನ್ ವಾನ್ ವಿಕ್, ಪೌಲ್ ಹ್ಯಾರಿಸ್, ರೋಜರ್ ಟೆಲೆಮಾಚುಸ್, ರ್ಯಾನ್ ಮೆಕ್ಲಾರೆನ್.
ಆಸ್ಟ್ರೇಲಿಯಾ ಲೆಜೆಂಡ್ಸ್: ಬ್ರೆಟ್ ಲೀ (ನಾಯಕ), ಬ್ರೆಟ್ ಗೀವ್ಸ್, ಜೇಸನ್ ಕ್ರೇಜಾ, ಮಾರ್ಕ್ ಕೋಸ್ಗ್ರೋವ್, ನಾಥನ್ ರಿಯರ್ಡನ್, ಶೇನ್ ಲೀ, ಟ್ರಾವಿಸ್ ಬರ್ಟ್, ಬೆನ್ ಲಾಗ್ಲಿನ್, ಬ್ರಾಡ್ ಹಾಜ್, ಕ್ಲಿಂಟ್ ಮೆಕೇ, ಕ್ಸೇವಿಯರ್ ಡೋಹರ್ಟಿ.ಶ್ರೀಲಂಕಾ ಲೆಜೆಂಡ್ಸ್: ತಿಲಕರತ್ನೆ ದಿಲ್ಶಾನ್ (ನಾಯಕ), ಚಮಿಂಡಾ ವಾಸ್, ಪರ್ವೀಜ್ ಮಹರೂಫ್, ಮಾರ್ವನ್ ಅಟಪಟ್ಟು, ಮುರಳೀಧರನ್, ರಂಗನಾ ಹೆರಾತ್, ರಮೇಶ್ ಕಲುವಿತರಣ, ಸಚಿತ್ರಾ ಸೇನನಾಯಕೆ, ಚಾಮರ ಕಪುಗೆಡೆರ, ತಿಲನ್ ತುಷಾರ, ಉಪುಲ್ ತರಂಗ, ಮಲಿಂಡ ವರ್ಣಾಪುರ.