

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿರುವ ದಕ್ಷಿಣ ಆಫ್ರಿಕಾದ ವೇಗಿ ಆನ್ರಿಚ್ ನೋರ್ಜೆ 2012ರ ಬಳಿಕ ಐಪಿಎಲ್‌ನಲ್ಲಿ ದಾಖಲಾದ ಅತಿವೇಗದ ಎಸೆತ ಎಸೆದ ಸಾಧನೆ ಮಾಡಿದ್ದಾರೆ. ಬುಧವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಗಂಟೆಗೆ 156.22 ಕಿಮೀ. (97 ಮೈಲಿ) ವೇಗದ ಎಸೆತ ಎಸೆದರು. ಅವರ ಈ ಎಸೆತವನ್ನು ಜೋಸ್ ಬಟ್ಲರ್ ಬೌಂಡರಿಗಟ್ಟಿದ್ದರು. ಆದರೆ 2ನೇ ಅತಿವೇಗದ ಅದರ ಮರು ಎಸೆತದಲ್ಲೇ (ಗಂಟೆಗೆ 155.1 ಕಿಮೀ) ಬಟ್ಲರ್ ಔಟಾದರು. ದಕ್ಷಿಣ ಆಫ್ರಿಕಾದವರೇ ಆದ ಡೇಲ್ ಸ್ಟೈನ್ ಹೆಸರಿನಲ್ಲಿದ್ದ ಐಪಿಎಲ್ ದಾಖಲೆಯನ್ನು ನೋರ್ಜೆ ಮುರಿದರು. ಸ್ಟೈನ್ 2012ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿದ್ದಾಗ ಗಂಟೆಗೆ 154.40 ಕಿಮೀ ವೇಗದಲ್ಲಿ ಚೆಂಡೆಸೆದಿದ್ದರು.
2012ರ ಬಳಿಕ ಐಪಿಎಲ್ ಇತಿಹಾಸದಲ್ಲಿ ದಾಖಲಾಗಿರುವ ಅಗ್ರ 10 ಅತಿವೇಗದ ಎಸೆತಗಳಲ್ಲಿ 5 ಎಸೆತಗಳು ನೋರ್ಜೆ ಅವರದೇ ಆಗಿದೆ. ಅಲ್ಲದೆ ಅಗ್ರ ಮೂರೂ ಅತಿವೇಗದ ಎಸೆತಗಳ ದಾಖಲೆ ಅವರ ಹೆಸರಿನಲ್ಲಿದೆ. ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ವೋಕ್ಸ್ ಟೂರ್ನಿಯಿಂದ ಹಿಂದೆ ಸರಿದ ಕಾರಣ 26 ವರ್ಷದ ನೋರ್ಜೆ ಈ ಬಾರಿ ಕೊನೇಕ್ಷಣದಲ್ಲಿ ಡೆಲ್ಲಿ ತಂಡದ ಪರ ಆಡುವ ಅವಕಾಶ ಪಡೆದುಕೊಂಡಿದ್ದರು. ಅವರು ಟೂರ್ನಿಯಲ್ಲಿ ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದ್ದಾರೆ. 2019ರ ಆವೃತ್ತಿಗೆ ಕೆಕೆಆರ್ ತಂಡದಲ್ಲಿದ್ದರೂ, ಗಾಯದಿಂದಾಗಿ ಆಡಿರಲಿಲ್ಲ. ಅವರು ದಕ್ಷಿಣ ಆಫ್ರಿಕಾ ಇದುವರೆಗೆ 6 ಟೆಸ್ಟ್, 7 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿ ಒಟ್ಟು 35 ವಿಕೆಟ್ ಕಬಳಿಸಿದ್ದಾರೆ.
‘ಐಪಿಎಲ್‌ನಲ್ಲಿ ಅತಿವೇಗದ ದಾಖಲೆ ನಿರ್ಮಿಸಿದ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಪಂದ್ಯದ ಬಳಿಕವಷ್ಟೇ ಈ ಬಗ್ಗೆ ನನಗೆ ತಿಳಿಯಿತು. ಬೌಲಿಂಗ್ ವೇಗ ವೃದ್ಧಿಸಲು ಕಳೆದ ಕೆಲ ಸಮಯದಿಂದ ಶ್ರಮಿಸುತ್ತಿದ್ದೆ. ಅದನ್ನು ಸರಿಯಾದ ಜಾಗಕ್ಕೆ ಎಸೆಯಬೇಕಾದುದು ಹೆಚ್ಚು ಪ್ರಮುಖವಾದುದು’ ಎಂದು ನೋರ್ಜೆ ಹೇಳಿದ್ದಾರೆ.
ಶಾನ್ ಟೇಟ್ ಅತಿವೇಗದ ಸಾಧಕ
ಐಪಿಎಲ್ ವೆಬ್‌ಸೈಟ್‌ನಲ್ಲಿ 2012ರ ನಂತರ ಅತಿವೇಗದ ಎಸೆತಗಳ ಅಂಕಿ-ಅಂಶಗಳಷ್ಟೇ ಇವೆ. 2008ರಿಂದ 2011ರವರೆಗಿನ ಅತಿವೇಗದ ವಿವರಗಳಿಲ್ಲ. ಆದರೆ ಅಂಕಿ-ಅಂಶ ತಜ್ಞರ ಪ್ರಕಾರ, ಆಸ್ಟ್ರೇಲಿಯಾದ ವೇಗಿ ಶಾನ್ ಟೇಟ್ ರಾಜಸ್ಥಾನ ರಾಯಲ್ಸ್ ತಂಡದ ಪರ 2011ರಲ್ಲಿ ಡೆಲ್ಲಿ ತಂಡದ ವಿರುದ್ಧ ಐಪಿಎಲ್ ಇತಿಹಾಸದ ಅತಿವೇಗದ ಎಸೆತ ಎಸೆದಿದ್ದರು. ಟೇಟ್ ಆಗ ಜೈಪುರದಲ್ಲಿ ಆರನ್ ಫಿಂಚ್ ವಿರುದ್ಧ ಗಂಟೆಗೆ 157.7 ಕಿಮೀ ವೇಗದಲ್ಲಿ ಚೆಂಡೆಸೆದಿದ್ದರು. ಆದರೆ ಇದಕ್ಕೆ ಐಪಿಎಲ್‌ನಿಂದ ಅಧಿಕೃತ ಮನ್ನಣೆ ದೊರೆತಿಲ್ಲ. 2012ರ ನಂತರ ಐಪಿಎಲ್ ವೆಬ್‌ಸೈಟ್‌ನಲ್ಲಿ ದಾಖಲಾಗಿರುವ ಅಂಕಿ-ಅಂಶಗಳ ಪ್ರಕಾರ ನೋರ್ಜೆ ಅವರದೇ ಅತಿವೇಗದ ಎಸೆತವಾಗಿದೆ.