

Virat Kohli : 18 ವರ್ಷದ ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ ಒಂದೇ ಒಂದು ಕ್ಷಣಕ್ಕಾಗಿ ಎದುರು ನೋಡುತ್ತಿದ್ದರು. ಅದೇ ಐಪಿಎಲ್ ಟ್ರೋಫಿ. ಸಾಕಷ್ಟು ಟೀಕೆ, ಅವಮಾನಗಳು ಹಾಗೂ ಟ್ರೋಲ್ಗಳನ್ನು ಎದುರಿಸಿದ ಕೊಹ್ಲಿ, ಕೊನೆಗೂ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ತಮ್ಮ ಸುದೀರ್ಘ ಐಪಿಎಲ್ ಪ್ರಯಾಣಕ್ಕೆ ಈಗ ಒಂದು ಅರ್ಥ ಸಿಕ್ಕಿದೆ. ಇದೇ ಖುಷಿಯಲ್ಲಿ ತೇಲಾಡುತ್ತಿರುವ ಕೊಹ್ಲಿ, ಭಾವುಕವಾಗಿ ಮಾತನಾಡಿದರು. ಆದರೆ, ಅವರು ಹೇಳಿದ ಒಂದು ಹೇಳಿಕೆಯನ್ನು ಉಲ್ಲೇಖಿಸಿ, ಕೆಲವರು ನೆಗಿಟಿವ್ ಪ್ರಚಾರ ಮಾಡುತ್ತಿದ್ದಾರೆ.
ಮಂಗಳವಾರ (ಜೂನ್ 03) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಇದರೊಂದಿಗೆ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಪಂದ್ಯದ ನಂತರ ವಿರಾಟ್ ಕೊಹ್ಲಿ ಮಾಡಿರುವ ಕಾಮೆಂಟ್‌ಗಳು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕೊನೆಯ ದಿನದವರೆಗೂ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಮಾತ್ರ ಆಡುವುದಾಗಿ ಕೊಹ್ಲಿ ಸ್ಪಷ್ಟಪಡಿಸಿದರು. ಅದೇ ಸಮಯದಲ್ಲಿ, ಅವರು ಇಂಪ್ಯಾಕ್ಟ್ ಆಟಗಾರನಾಗಿ ಆಡುವುದಿಲ್ಲ ಎಂದರು. 20 ಓವರ್‌ಗಳ ಕಾಲ ಮೈದಾನದಲ್ಲಿದ್ದ ಪ್ರಭಾವ ಬೀರಲು ಪ್ರಯತ್ನಿಸುತ್ತೇನೆ ಎಂದರು.
ನನಗೆ ಈ ಆಟವನ್ನು ಆಡಲು ಹಲವು ವರ್ಷಗಳ ಕಾಲ ಅವಕಾಶವಿಲ್ಲ. ಆದ್ದರಿಂದ ನನ್ನ ವೃತ್ತಿಜೀವನ ಹತ್ತಿರದಲ್ಲಿದೆ. ನಾನು ನನ್ನ ಬೂಟುಗಳನ್ನು ಸ್ಥಗಿತಗೊಳಿಸುವ ಹೊತ್ತಿಗೆ, ನಾನು ನನ್ನಲ್ಲಿರುವ ಎಲ್ಲವನ್ನೂ ಈ ತಂಡಕ್ಕೆ ನೀಡಿದ್ದೇನೆ ಎಂದು ಹೇಳಲು ಬಯಸುತ್ತೇನೆ. ಅಲ್ಲದೆ, ನನ್ನನ್ನು ನಾನು ಸುಧಾರಿಸಲು ಮಾರ್ಗಗಳನ್ನು ಹುಡುಕುತ್ತೇನೆ. ಯಾವುದೇ ಕಾರಣಕ್ಕೂ ಇಂಪ್ಯಾಕ್ಟ್ ಆಟಗಾರನಾಗಿ ಆಡಲು ಸಾಧ್ಯವಿಲ್ಲ. ನಾನು 20 ಓವರ್‌ಗಳನ್ನು ಫೀಲ್ಡಿಂಗ್ ಮಾಡಲು ಮತ್ತು ಮೈದಾನದಲ್ಲಿ ಪ್ರಭಾವ ಬೀರಲು ಬಯಸುತ್ತೇನೆ. ನಾನು ಅಂತಹ ಆಟಗಾರ ಮತ್ತು ದೇವರು ನನಗೆ ಆ ದೃಷ್ಟಿಕೋನದಿಂದ, ಪ್ರತಿಭೆಯನ್ನು ಆಶೀರ್ವದಿಸಿದ್ದಾರೆ. ವೃತ್ತಿಜೀವನದ ಬಳಿಕ ತಂಡಕ್ಕೆ ಸಹಾಯ ಮಾಡಲು ನೀವು ವಿಭಿನ್ನ ಮಾರ್ಗಗಳನ್ನು ಕಂಡುಕೊಳ್ಳುತ್ತೀರಿ ಎಂದು ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಕೊಹ್ಲಿ ಹೇಳಿದರು.
ಕೊಹ್ಲಿ ಮಾಡಿದ ಈ ಕಾಮೆಂಟ್ ವೈರಲ್ ಆಗುತ್ತಿದೆ. ಪ್ರಸ್ತುತ, ಕೆಲವು ಹಿರಿಯ ಆಟಗಾರರು ಇಂಪ್ಯಾಕ್ಟ್ ಪ್ಲೇಯರ್‌ಗಳಾಗಿ ಮಾತ್ರ ಆಡುತ್ತಿದ್ದಾರೆ. ಅವರು 20 ಓವರ್‌ಗಳ ಕಾಲ ಮೈದಾನದಲ್ಲಿ ಇರುವುದಿಲ್ಲ. ಉದಾಹರಣೆಗೆ, ರೋಹಿತ್ ಶರ್ಮ ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಹೆಚ್ಚಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದಾರೆ. ಅವರು ಬ್ಯಾಟಿಂಗ್ ಮಾತ್ರ ಮಾಡಿದ್ದಾರೆ. ಅವರನ್ನು ಮೈದಾನದಲ್ಲಿ ಹೆಚ್ಚು ನೋಡಲಾಗಿಲ್ಲ.
ಕೊಹ್ಲಿ ಅವರ ಹೇಳಿಕೆಗಳು ಪರೋಕ್ಷವಾಗಿ ರೋಹಿತ್ ಶರ್ಮ ಅವರನ್ನು ಗುರಿಯಾಗಿರಿಸಿಕೊಂಡಿವೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ಪ್ರಚಾರವನ್ನು ಹರಿಬಿಟ್ಟಿದ್ದಾರೆ. ಈ ಸಮಯದಲ್ಲಿ ಕೊಹ್ಲಿಯಿಂದ ಈ ಮಾತು ಬೇಕಿತ್ತಾ ಎಂದು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ರೋಹಿತ್ ಮತ್ತು ಕೊಹ್ಲಿ ಒಳ್ಳೆಯ ಸ್ನೇಹಿತರು ಮತ್ತು ಕೊಹ್ಲಿ ಸಾಮಾನ್ಯವಾಗಿ ಆ ಹೇಳಿಕೆಗಳನ್ನು ನೀಡಿದ್ದಾರೆ ಹೊರತು ಉದ್ದೇಶಪೂರ್ವಕವಾಗಿ ರೋಹಿತ್ ಶರ್ಮ ಬಗ್ಗೆ ಹೇಳಿದ್ದಲ್ಲ ಎಂದು ಕೊಹ್ಲಿ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿತು. ವಿರಾಟ್ ಕೊಹ್ಲಿ (43 ರನ್, 35 ಎಸೆತ, 3 ಬೌಂಡರಿ) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮಯಾಂಕ್ ಅಗರ್ವಾಲ್ (24), ರಜತ್ ಪಟಿದಾರ್ (26), ಲಿಯಾಮ್ ಲಿವಿಂಗ್‌ಸ್ಟೋನ್ (25), ಮತ್ತು ಜಿತೇಶ್ ಶರ್ಮಾ (24) ಉಪಯುಕ್ತ ರನ್ಗಳ ಕಾಣಿಕೆ ನೀಡಿದರು. ಪಂಜಾಬ್ ಬೌಲರ್‌ಗಳಲ್ಲಿ ಅರ್ಷದೀಪ್ ಸಿಂಗ್ ಮತ್ತು ಜೇಮಿಸನ್ ತಲಾ ಮೂರು ವಿಕೆಟ್ ಪಡೆದರು. ವಿಜಯ್ ಕುಮಾರ್ ವೈಶಾಕ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಪಂಜಾಬ್ ಪರ ಶಶಾಂಕ್ ಸಿಂಗ್ (ಅಜೇಯ 61 ರನ್, 30 ಎಸೆತ, 3 ಬೌಂಡರಿ, 6 ಸಿಕ್ಸರ್) ಮತ್ತು ಜೋಶ್ ಇಂಗ್ಲಿಷ್ (39 ರನ್, 23 ಎಸೆತ, 1 ಬೌಂಡರಿ, 4 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲರಾದರು, ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 184 ರನ್‌ಗಳಿಗೆ ಸೀಮಿತವಾಯಿತು. ಆರ್‌ಸಿಬಿ ಬೌಲರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು. ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್)