ರೋಜಾ ಒಂದು ನೆಪವಲ್ಲ ಅದೊಂದು... ಉಪವಾಸ ಆಚರಿಸದ ಮೊಹಮ್ಮದ್​ ಶಮಿ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಪಾಕ್​ ಮಾಜಿ ಕ್ರಿಕೆಟಿಗ

Mohammed Shami
Published on

ನವದೆಹಲಿ: ಸುಮಾರು ತಿಂಗಳುಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳಿರುವ ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ (Mohammed Shami) ಸದ್ಯ ಉಪವಾಸದ ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಜ್ಯೂಸ್ ಕುಡಿಯುವ ಮೂಲಕ ಉಪವಾಸವನ್ನು ಮುರಿದಿದ್ದು, ಇದೀಗ ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ, ರಾವಲ್ಪಿಂಡಿ ಎಕ್ಸ್​ಪ್ರೆಸ್​ ಖ್ಯಾತಿಯ ಶೋಯೆಬ್ ಅಖ್ತರ್ ಕೂಡ ಮಾತನಾಡಿದ್ದಾರೆ.

ಮೊಹಮ್ಮದ್ ಶಮಿ (Mohammed Shami) ತಮ್ಮ ದೇಶಕ್ಕಾಗಿ ರಂಜಾನ್ ಉಪವಾಸವನ್ನು ಮುರಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶಮಿ ಉತ್ತಮ ಪ್ರದರ್ಶನ ನೀಡುವ ಸಲುವಾಗಿ ತಮ್ಮ ಉಪವಾಸವನ್ನು ಮುರಿದಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಶಮಿಯ ನಡೆಯನ್ನು ಖಂಡಿಸಿರುವ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಕ್ರಿಮಿನಲ್ ಎಂದು ಕರೆಯುವ ಮೂಲಕ ವಿವಾದಕ್ಕೀಡಾಗಿದ್ದರು. ಇದೀಗ ಶೋಯೆಬ್ ಅಖ್ತರ್​ ಈ ಬಗ್ಗೆ ಟ್ವೀಟ್ ಮಾಡಿದ್ದು, ಮತ್ತೊಂದು ಸುತ್ತಿನ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಈ ಸಂಬಂಧ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿರುವ ಶೋಯೆಬ್ ಅಖ್ತರ್​, ರೋಜಾ ಒಂದು ನೆಪವಲ್ಲ. ಅದು ಪ್ರೇರಣೆ. ತರಬೇತಿ ಪಡೆಯುವುದನ್ನು ಯಾವುದೂ ತಡೆಯಬಾರದು. ಅದನ್ನು ನಿಮ್ಮ ಲಾಭಕ್ಕಾಗಿ ಬಳಸಿ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡುವ ಮೂಲಕ ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ನಡೆದಿದ್ದಿಷ್ಟು

ಮಾರ್ಚ್​ 04ರಂದು ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಭರ್ಜರಿ ಜಯಗಳಿಸಿದ್ದು, ಅಜೇಯವಾಗಿ ಫೈನಲ್ ಪ್ರವೇಶಿಸಿದೆ. ಇನ್ನೂ ಪಂದ್ಯದ ವೇಳೆ ಟೀಮ್​ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ (Mohammed Shami) ಜ್ಯೂಸ್ ಕುಡಿದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಮುಸ್ಲಿಂ ಧರ್ಮಗುರುಗಳಾದ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಮೊಹಮ್ಮದ್​ ಶಮಿಯನ್ನು ಕ್ರಿಮಿನಲ್ ಎಂದು ಕರೆದಿದ್ದರು.

ಈ ಕುರಿತು ಮಾತನಾಡಿರುವ ಅಖಿಲ ಭಾರತ ಮುಸ್ಲಿಂ ಜಮಾತ್‌ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್‌ ರಜ್ವಿ ಬರೇಲ್ವಿ, ಮೊಹಮ್ಮದ್‌ ಶಮಿ (Mohammed Shami) ಓರ್ವ ಕ್ರಮಿನಲ್​, ಆತ ಅಲ್ಲಾಗೆ ಉತ್ತರಿಸಲೇಬೇಕಾಗುತ್ತದೆ. ರೋಜಾ ಮಾಡದೆ ಮೊಹಮ್ಮದ್‌ ಶಮಿ ಅಪರಾಧ ಮಾಡಿದ್ದಾರೆ. ಅವರು ಹೀಗೆ ಮಾಡಬಾರದಾಗಿತ್ತು. ಶರಿಯತ್ ದೃಷ್ಟಿಯಲ್ಲಿ ಅವರು ಖಂಡಿತವಾಗಿಯೂ ಅಪರಾಧಿ. ಅವರು ದೇವರಿಗೆ ಉತ್ತರಿಸಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ಮೌಲಾನಾ ಶಹಾಬುದ್ದೀನ್‌ ರಜ್ವಿ ಬರೇಲ್ವಿ ಹೇಳಿಕೆಯೂ ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ದೇಶವನ್ನು ಪ್ರತಿನಿಧಿಸುವ ಆಟಗಾರನ ಬದ್ಧತೆಯನ್ನು ಪ್ರಶ್ನೆ ಮಾಡುವುದು ಸರಿಯಲ್ಲ. ಒಂದು ವೇಳೆ ಶಮಿ ಉಪವಾಸ ಕೈಗೊಂಡು ಅವರ ಆರೋಗ್ಯದಲ್ಲಿ ಏರು-ಪೇರಾಗಿದ್ದರೆ ಅದು ಖಂಡಿತವಾಗಿಯೂ ತಂಡದ ಮೇಲೆ ಪರಿಣಾಮ ಬೀರುತ್ತಿತ್ತು. ಇದನ್ನು ಮನಗಂಡೇ ಶಮಿ ಉಪವಾಸ ಕೈಗೊಂಡಿಲ್ಲ. ಅಷ್ಟಕ್ಕೆ ಅವರನ್ನು ಧರ್ಮವಿರೋಧಿ, ಅಪರಾಧಿ ಎಂದೆಲ್ಲಾ ಕರೆಯುವುದು ಸಮಂಜಸವಲ್ಲ ಎಂದು ನೆಟ್ಟಿಗರು ಹಾಗೂ ರಾಜಕೀಯ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net