ಐಪಿಎಲ್​ನಿಂದಲೂ ನಿವೃತ್ತಿಯಾದರೇ ಶಿಖರ್​ ಧವನ್? ಇಲ್ಲಿದೆ ಉತ್ತರ...

web dhawan ipl
Published on

ನವದೆಹಲಿ: ಟೀಮ್​ ಇಂಡಿಯಾ ಎಡಗೈ ಆರಂಭಿಕ ಶಿಖರ್​ ಧವನ್​ ವಿದಾಯ ಘೋಷಣೆಯ ವಿಡಿಯೋದಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್​ನಿಂದ ನಿವೃತ್ತಿ ಎಂದು ಹೇಳಿದ್ದಾರೆ. ಆದರೆ ಐಪಿಎಲ್​ ಬಗ್ಗೆ ಏನನ್ನೂ ಹೇಳಿಲ್ಲ. ಇದರಿಂದ ಅವರು ಐಪಿಎಲ್​ನಲ್ಲಿ ಆಡುವುದನ್ನು ಮುಂದುವರಿಸುವರೇ ಎಂಬುದು ಸ್ಪಷ್ಟವಾಗಿಲ್ಲ.

ಕಳೆದ ಆವೃತ್ತಿಯಲ್ಲಿ ಪಂಜಾಬ್​ ಕಿಂಗ್ಸ್​ ತಂಡದ ನಾಯಕರಾಗಿದ್ದ ಧವನ್​, 2025ರ ಆವೃತ್ತಿಗೆ ರಿಟೇನ್​ ಆಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಅಲ್ಲದೆ ಪಂಜಾಬ್​ ಕಿಂಗ್ಸ್​ ತಂಡ ಧವನ್​ ನಿವೃತ್ತಿ ಬಗ್ಗೆ ಪೋಸ್ಟ್​ ಮಾಡಿರುವ "ಥ್ಯಾಂಕ್​ಯೂ ಶಿಖರ್​ ಧವನ್​' ವಿಡಿಯೊ, ಅವರು ಐಪಿಎಲ್​ನಿಂದಲೂ ನಿವೃತ್ತಿ ಹೊಂದಿರುವ ಸೂಚನೆ ನೀಡಿದೆ. ಐಪಿಎಲ್​ನಲ್ಲಿ ಡೆಲ್ಲಿ, ಮುಂಬೈ, ಸನ್​ರೈಸರ್ಸ್​ ತಂಡಗಳನ್ನೂ ಧವನ್​ ಪ್ರತಿನಿಧಿಸಿದ್ದಾರೆ.

ಯುವ ಆರಂಭಿಕರಿಗೆ ದಾರಿ...

ಧವನ್​ 2013ರಿಂದ 2020ರವರೆಗೆ ಟೀಮ್​ ಇಂಡಿಯಾದ ಆರಂಭಿಕರಾಗಿ ಮಿಂಚಿದ್ದರು. ರೋಹಿತ್​ ಶರ್ಮ ಆರಂಭಿಕರಾಗಿ ಬಡ್ತಿ ಪಡೆದ ಬಳಿಕ ಇಬ್ಬರೂ ಭರ್ಜರಿ ಜತೆಯಾಟವಾಡಿದ್ದರು. ಇಬ್ಬರ ನಡುವೆ ಏಕದಿನ ಕ್ರಿಕೆಟ್​ನಲ್ಲಿ ಮೊದಲ ವಿಕೆಟ್​ಗೆ 18 ಶತಕದ ಜತೆಯಾಟ ಏರ್ಪಟ್ಟಿತ್ತು. ಇದು ಸಚಿನ್​-ಗಂಗೂಲಿ ಜೋಡಿ ಬಳಿಕ ಭಾರತ ಪರ ಗರಿಷ್ಠ ಶತಕದ ಜತೆಯಾಟವಾಗಿದೆ. ಧವನ್​-ರೋಹಿತ್​ ಜತೆಯಾಗಿ 5,148 ರನ್​ ಸೇರಿಸಿದ್ದರು. 2022ರಲ್ಲಿ ಫಾರ್ಮ್​ ಕೈಕೊಟ್ಟ ಬಳಿಕ ಯುವ ಆಟಗಾರರು ಧವನ್​ ಸ್ಥಾನ ತುಂಬಲು ಸರದಿಯಲ್ಲಿ ನಿಂತಿದ್ದರು. ಶುಭಮಾನ್​ ಗಿಲ್​ 2023ರ ಏಕದಿನ ವಿಶ್ವಕಪ್​ನಲ್ಲಿ ಧವನ್​ರನ್ನು ಹಿಮ್ಮೆಟ್ಟಿಸಿ ಆರಂಭಿಕನ ಸ್ಥಾನ ಸಂಪಾದಿಸಿದರು. ಭಾರತಕ್ಕೆ ಮತ್ತೆ ಎಡಗೈ ಆರಂಭಿಕನ ಅಗತ್ಯ ಕಂಡಾಗ ಯಶಸ್ವಿ ಜೈಸ್ವಾಲ್​ ಆ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದಾರೆ. ಋತುರಾಜ್​ ಗಾಯಕ್ವಾಡ್​, ಅಭಿಷೇಕ್​ ಶರ್ಮ ಸಹಿತ ಇನ್ನೂ ಕೆಲ ಆರಂಭಿಕರು ರೇಸ್​ನಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net