ಧೋನಿ ಭವಿಷ್ಯ ಅತಂತ್ರ! ಐಪಿಎಲ್​ನಂತೆ ಮಾಜಿ ನಾಯಕನ ಸ್ಥಿತಿಯೂ ಅನಿಶ್ಚಿತ

dhoni
Published on

ಮಾರಕ ಕರೊನಾ ಸೋಂಕಿನ ಭೀತಿಯಿಂದಾಗಿ 13ನೇ ಆವೃತ್ತಿಯ ಐಪಿಎಲ್ ಭವಿಷ್ಯ ಅನಿಶ್ಚಿತವಾಗಿದ್ದರೆ, ಇದೇ ಟೂರ್ನಿಯಲ್ಲಿ ಸಾಮರ್ಥ್ಯವನ್ನು ಮತ್ತೊಮ್ಮೆ ನಿರೂಪಿಸಲು ಸಜ್ಜಾಗಿದ್ದ ಟೀಮ್ ಇಂಡಿಯಾದ ಮಾಜಿ ನಾಯಕರಾಗಿರುವ 38 ವರ್ಷದ ಎಂಎಸ್ ಧೋನಿ ಭವಿಷ್ಯವೂ ಅತಂತ್ರವಾಗಿದೆ. 2019ರ ಏಕದಿನ ವಿಶ್ವಕಪ್ ಬಳಿಕ ಯಾವುದೇ ಸ್ಪರ್ಧಾತ್ಮಕ ಪಂದ್ಯಗಳನ್ನು ಆಡದಿರುವ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಧೋನಿ ಅಗತ್ಯ ಈಗಲೂ ಭಾರತ ತಂಡಕ್ಕಿದೆಯೇ ಎಂಬ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಪರ-ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ. ಅವುಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಸೈಲೆಂಟಾಗಿ ರಿಟೈರ್ ಆಗಲಿ

‘ಖಂಡಿತವಾಗಿಯೂ ಧೋನಿ ಅವರನ್ನು ಟಿ20 ವಿಶ್ವಕಪ್ ತಂಡದಲ್ಲಿ ಬಯಸುತ್ತೇನೆ. ಆದರೆ ಅದು ಸಂಭವಿಸುವುದು ಕಷ್ಟ. ಭಾರತ ತಂಡ ಈಗಾಗಲೆ ಮುಂದಿನ ಹೆಜ್ಜೆ ಇಟ್ಟಾಗಿದೆ. ಧೋನಿ ದೊಡ್ಡ ಘೊಷಣೆಗಳಿಗೆ ಹೆಸರಾದವರಲ್ಲ. ಹೀಗಾಗಿ ಅವರು ಸೈಲೆಂಟಾಗಿ ಕ್ರಿಕೆಟ್​ನಿಂದ ನಿವೃತ್ತಿ ಹೊಂದಲಿ’ ಎಂದು ಮಾಜಿ ನಾಯಕ ಹಾಗೂ ಹಾಲಿ ವೀಕ್ಷಕವಿವರಣೆಕಾರ ಸುನೀಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ‘ಫಿಟ್ನೆಸ್ ಒಂದೇ ಮುಖ್ಯವಾಗುವುದಿಲ್ಲ. ಜುಲೈನಿಂದ ಭಾರತ ತಂಡದ ಪರ ಆಡಲು ಲಭ್ಯರಾಗದ ಅವರು ತಮ್ಮಲ್ಲೇ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು’ ಎಂದಿದ್ದಾರೆ.

ವಾಪಸ್ ಬರುವುದು ಕಷ್ಟ

‘ಸುದೀರ್ಘ ಕಾಲದವರೆಗೆ ಆಡದಿದ್ದರೆ ವಾಪಸ್ ತಂಡಕ್ಕೆ ಮರಳುವುದು ಕಷ್ಟಕರ. ಐಪಿಎಲ್​ನಲ್ಲಿ ಆಡಿದರಷ್ಟೇ ಆಯ್ಕೆಗಾರರು ಅವರ ಬಗ್ಗೆ ಯೋಚಿಸಲು ಸಾಧ್ಯ. ಧೋನಿ ದೇಶಕ್ಕಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಆದರೆ 6-7 ತಿಂಗಳಿನಿಂದ ಅವರು ಯಾವುದೇ ಪಂದ್ಯ ಆಡದಿರುವ ಕಾರಣ ಎಲ್ಲರ ಮನಸ್ಸಿನಲ್ಲೂ ಅನುಮಾನಗಳು ಸಹಜ’ ಎಂದು 1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

ನಿವೃತ್ತಿಗೆ ಒತ್ತಾಯಿಸಬೇಡಿ

‘ಎಂಎಸ್ ಧೋನಿಯಂಥ ಆಟಗಾರ ಒಂದು ತಲೆಮಾರಿಗೆ ಒಬ್ಬನೇ ಸಿಗುತ್ತಾರೆ. ಒಮ್ಮೆ ಅವರು ನಿರ್ಗಮಿಸಿದರೆ ಮರಳಿ ಸಿಗುವುದಿಲ್ಲ. ಅವರನ್ನು ನಿವೃತ್ತಿಗೆ ಒತ್ತಾಯಿಸಬೇಡಿ. ಧೋನಿ ಅವರಿಗಷ್ಟೇ ಅವರ ಮಾನಸಿಕ ಸ್ಥಿತಿಗತಿ ಬಗ್ಗೆ ಗೊತ್ತಿದೆ. ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿ’ ಎಂದು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಭಾರತಕ್ಕೆ ಸಲಹೆ ನೀಡಿದ್ದಾರೆ.

ಐಪಿಎಲ್ ನಡೆಯದಿದ್ದರೆ ವಾಪಸಿಲ್ಲ

ಐಪಿಎಲ್ 13ನೇ ಆವೃತ್ತಿ ನಡೆಯದಿದ್ದರೆ ಧೋನಿ ಭಾರತದ ಟಿ20 ವಿಶ್ವಕಪ್ ತಂಡಕ್ಕೆ ಮರಳುವ ಸಾಧ್ಯತೆ ಬಹಳ ಕ್ಷೀಣವಾಗಿದೆ ಎಂದು ಮಾಜಿ ಆಟಗಾರ ಹಾಗೂ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಕೆ. ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ. ನಾನೀಗ ಆಯ್ಕೆ ಸಮಿತಿ ಅಧ್ಯಕ್ಷನಾಗಿದ್ದರೂ ಇದೇ ಮಾತನ್ನು ಹೇಳುತ್ತಿದ್ದೆ ಎಂದು ಶ್ರೀಕಾಂತ್ ತಿಳಿಸಿದ್ದಾರೆ.

ಯುವಕರಿಗೆ ಆದ್ಯತೆ ಸಿಗಲಿ

‘ನಿವೃತ್ತಿ ವೈಯಕ್ತಿಕ ನಿರ್ಧಾರ. ಆಡಲು ಬಯಸುವವರೆಗೆ ಅವಕಾಶ ನೀಡಬೇಕು. ಆದರೆ ಇದೇ ವೇಳೆ ಭವಿಷ್ಯದ ಬಗ್ಗೆಯೂ ಗಮನಹರಿಸಬೇಕು. ಧೋನಿ ಮುಂದಿನ ಏಕದಿನ ವಿಶ್ವಕಪ್​ವರೆಗೆ ತಂಡದಲ್ಲಿರಲಾರರು. ಹೀಗಾಗಿ ತಂಡದ ಯೋಜನೆಗೆ ಹೊಂದಾಣಿಕೆಯಾಗದಿದ್ದರೆ ಅವರಿಗೆ ಈ ಬಗ್ಗೆ ಮೊದಲೇ ತಿಳಿಸಿಬಿಡಬೇಕು. ಮುಂದಿನ 4-5 ವರ್ಷಗಳಿಗೆ ಯುವ ಆಟಗಾರರನ್ನು ಬೆಳೆಸುವ ಸಮಯ ಇದಾಗಿದೆ. ಯಾಕೆಂದರೆ ಅಂತಿಮವಾಗಿ ಧೋನಿಗಿಂತ ದೇಶ ಮುಖ್ಯವಾದುದು’ ಎಂದು ಮಾಜಿ ಬ್ಯಾಟ್ಸ್​ಮನ್ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

2019ರಲ್ಲೇ ನಿವೃತ್ತರಾಗಬೇಕಿತ್ತು

‘ಧೋನಿ ಕ್ರಿಕೆಟ್​ಗೆ ಶ್ರೇಷ್ಠ ಕೊಡುಗೆ ನೀಡಿದ್ದು, ಗೌರವಯುತವಾಗಿಯೇ ನಿರ್ಗಮಿಸಬೇಕು. 2019ರ ವಿಶ್ವಕಪ್ ಬೆನ್ನಲ್ಲೇ ಅವರು ನಿವೃತ್ತರಾಗಬೇಕಿತ್ತು. ನಿವೃತ್ತಿಯನ್ನು ಯಾಕಿಷ್ಟು ತಡಮಾಡಿದರು ಎಂಬುದು ಗೊತ್ತಾಗುತ್ತಿಲ್ಲ. ನಾನು ಅವರ ಸ್ಥಾನದಲ್ಲಿದ್ದರೆ ನಿವೃತ್ತಿಯಾಗಿರುತ್ತಿದ್ದೆ. 2011ರ ಏಕದಿನ ವಿಶ್ವಕಪ್ ಬಳಿಕ ನನಗೂ ಚುಟುಕು ಕ್ರಿಕೆಟ್​ನಲ್ಲಿ 3-4 ವರ್ಷಗಳ ಕಾಲ ಮುಂದುವರಿಯಬಹುದಿತ್ತು. ಆದರೆ ನನಗೆ ಶೇ. 100ರಷ್ಟು ನಿರ್ವಹಣೆ ಸಾಧ್ಯವಾಗುತ್ತಿರಲಿಲ್ಲ’ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಹೇಳಿದ್ದಾರೆ. ‘ಧೋನಿ ವಿಶ್ವಕಪ್ ಗೆದ್ದುಕೊಟ್ಟಿರುವ ನಾಯಕ. ಅದೇ ರೀತಿ ಉತ್ತಮ ವ್ಯಕ್ತಿತ್ವ ಹೊಂದಿರುವವರು. ಅವರಿಗೆ ಗೌರವಯುತ ಬೀಳ್ಕೊಡುಗೆ ಅಗತ್ಯವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಅವರು ಇಕ್ಕಟ್ಟಿನಲ್ಲಿ ಸಿಲುಕಿಕೊಂಡಂತಿದೆ’ ಎಂದು ಅಖ್ತರ್ ಹೇಳಿದ್ದಾರೆ.

ಮತ್ತೆ ಬರಲು ಸ್ಥಾನ ಎಲ್ಲಿದೆ?

ಧೋನಿ ಮತ್ತೆ ಭಾರತ ತಂಡಕ್ಕೆ ಬರಲು ಎಲ್ಲಿ ಸ್ಥಾನ ಖಾಲಿ ಇದೆ ಎಂದು ಮಾಜಿ ಬ್ಯಾಟ್ಸ್​ಮನ್ ವೀರೇಂದ್ರ ಸೆಹ್ವಾಗ್ ಪ್ರಶ್ನಿಸಿದ್ದಾರೆ. ವಿಕೆಟ್ ಕೀಪರ್​ಗಳಾಗಿ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಉತ್ತಮ ನಿರ್ವಹಣೆ ತೋರುತ್ತಿದ್ದಾರೆ. ಅದರಲ್ಲೂ ಕೆಎಲ್ ರಾಹುಲ್ ಅಮೋಘ ಬ್ಯಾಟಿಂಗ್ ನಿರ್ವಹಣೆಯನ್ನೂ ತೋರುತ್ತಿದ್ದಾರೆ. ಹೀಗಾಗಿ ಹಾಲಿ ತಂಡಕ್ಕೆ ಅಂಟಿಕೊಳ್ಳದಿರಲು ಯಾವುದೇ ಕಾರಣಗಳು ಕಾಣಿಸುತ್ತಿಲ್ಲ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಫಿಟ್ ಆಗಿದ್ದರೆ ಕಡೆಗಣಿಸಲಾಗದು

ಎಂಎಸ್ ಧೋನಿ ಫಿಟ್ ಆಗಿದ್ದು, ಫಾಮರ್್​ನಲ್ಲಿದ್ದರೆ ಅವರನ್ನು ಭಾರತ ತಂಡ ಆಯ್ಕೆಗೆ ಖಂಡಿತವಾಗಿಯೂ ಕಡೆಗಣಿಸಲಾಗದು. ಅವರು ವಿಕೆಟ್ ಹಿಂದೆ ತಂಡಕ್ಕೆ ದೊಡ್ಡ ಆಸ್ತಿಯಾಗಬಲ್ಲರು. ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಅನುಭವದಿಂದ ಇನ್ನೂ ಸಾಕಷ್ಟು ಕಲಿಯಬೇಕಾಗಿದೆ. ರಾಹುಲ್​ರ ಕೀಪಿಂಗ್ ಭಾರವನ್ನು ಧೋನಿ ಇಳಿಸಬಲ್ಲರು ಎಂದು ಮಾಜಿ ಬ್ಯಾಟ್ಸ್​ಮನ್ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ಟಿ20 ವಿಶ್ವಕಪ್ ತಂಡಕ್ಕೆ ಆಸ್ತಿ

ಧೋನಿ ಈಗಲೂ ಫಿಟ್ ಆಗಿದ್ದು, ವಿಕೆಟ್ ಕೀಪರ್ ಆಗಿ ಅದ್ಭುತ ಕೌಶಲ ಹೊಂದಿದ್ದಾರೆ. ಅವರು ಈಗಲೂ ಶ್ರೇಷ್ಠ ಫಿನಿಷರ್ ಆಗಿದ್ದಾರೆ. ಟಿ20 ವಿಶ್ವಕಪ್ ತಂಡಕ್ಕೆ ದೊಡ್ಡ ಆಸ್ತಿ ಆಗಬಲ್ಲರು ಎಂದು ಭಾರತ ತಂಡದ ಮಾಜಿ ಬ್ಯಾಟ್ಸ್​ಮನ್ ಹಾಗೂ ಸಿಎಸ್​ಕೆ ಅಟಗಾರ ಸುರೇಶ್ ರೈನಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net