

ನವದೆಹಲಿ: 2025ರ ಐಪಿಎಲ್ 18ನೇ ಆವೃತ್ತಿ ಶುರುವಾಗುವ ಮುನ್ನವೇ ವ್ಯಾಪಕ ಚರ್ಚೆಗಳು ಭುಗಿಲೆದ್ದಿದ್ದು, ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ತೀವ್ರ ಕುತೂಹಲ ಹಾಗೂ ಕಾತರ ವ್ಯಕ್ತಪಡಿಸಿದ್ದಾರೆ. ಸದ್ಯ ಮುಂದಿನ ತಿಂಗಳಲ್ಲಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ (IPL 2025) ನಡೆಯಲಿದ್ದು, ಯಾವ ಸ್ಟಾರ್ ಆಟಗಾರರು ಯಾವ ತಂಡಕ್ಕೆ ಸೇರುತ್ತಾರೆ? ಈಗಿರುವ ಯಾವ ಆಟಗಾರರನ್ನು ಆಯಾ ಫ್ರಾಂಚೈಸಿಗಳು ಕೈಬಿಡಲು ಲೆಕ್ಕಾಚಾರಗಳನ್ನು ಹಾಕಿಕೊಂಡಿವೆ ಎಂಬ ಗೊಂದಲ ಸದ್ಯ ಕ್ರೀಡಾಭಿಮಾನಿಗಳಲ್ಲಿ ಕಾಡುತ್ತಿದೆ. ಇದಕ್ಕೆಲ್ಲ ಉತ್ತರ ಸಿಗಬೇಕೆಂದರೆ ಆಕ್ಷನ್ ದಿನಕ್ಕಾಗಿ ಕಾಯಬೇಕಿದೆ. ಇದೆಲ್ಲದರ ಮಧ್ಯೆ ತೀವ್ರ ಗೊಂದಲ ಮೂಡಿಸಿರುವುದು ಐಪಿಎಲ್ನ ಐದು ಬಾರಿ ಚಾಂಪಿಯನ್ಸ್ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ನಡೆ.
2025ರಲ್ಲಿ ಮಹೇಂದ್ರ ಸಿಂಗ್ ಧೋನಿ ತಮ್ಮ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡ್ತಾರಾ ಅಥವಾ ನಿವೃತ್ತಿ ಘೋಷಿಸಲಿದ್ದಾರಾ? ಎಂಬ ಪ್ರಶ್ನೆಗಳು ಇದೀಗ ಕ್ರಿಕೆಟ್ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ ಈ ಕುರಿತು 'ಕ್ಯಾಪ್ಟನ್ ಕೂಲ್' ಸಹ ಇಲ್ಲಿಯವರೆಗೂ ತಮ್ಮ ನಿರ್ಧಾರವೇನು ಎಂಬುದನ್ನು ಟೀಮ್ ಮ್ಯಾನೇಜ್ಮೆಂಟ್ಗೆ ತಿಳಿಸಿಲ್ಲ. ಮತ್ತೊಂದೆಡೆ, ಧೋನಿ ಅವರಿಂದ ಯಾವುದೇ ಮಾತುಗಳು ಕೇಳಿಬರದೆ ಇರುವುದು ಅಭಿಮಾನಿಗಳಲ್ಲಿ ತೀವ್ರ ಗೊಂದಲ ಹುಟ್ಟುಹಾಕಿದೆ. ಇಂತಹ ಸಾಲು ಸಾಲು ಪ್ರಶ್ನೆಗಳಿಂದ ಕಂಗಾಲಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್, “ನಮಗೆ ಧೋನಿ ಇನ್ನೂ ಏನು ಹೇಳಿಲ್ಲ. ತಮ್ಮ ಇರುವಿಕೆಯ ಬಗ್ಗೆ ಅವರು ದೃಢೀಕರಿಸಿಲ್ಲ. ಆದ್ರೆ, ಮುಂಬರುವ 18ನೇ ಆವೃತ್ತಿಯಲ್ಲಿ ಅವರು ಆಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿ ಕೈತೊಳೆದುಕೊಂಡಿದ್ದರು.
“ಚೆನ್ನೈ ಸೂಪರ್ ಕಿಂಗ್ಸ್ ಪರ ಕ್ಯಾಪ್ಟನ್ ಕೂಲ್ ಆಡಬೇಕೆಂಬುದು ನಮ್ಮ ಬಯಕೆಯೂ ಹೌದು. ಇಷ್ಟು ದಿನಗಳವರೆಗೆ ಅವರಿಂದ ಯಾವುದೇ ಖಚಿತ ಉತ್ತರ ನಮಗೆ ಲಭ್ಯವಾಗಿರಲಿಲ್ಲ. ಆದರೆ, ಇದೇ ತಿಂಗಳ ಅಕ್ಟೋಬರ್ 31ರಂದು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಐಪಿಎಲ್ 2025ರಲ್ಲಿ ಸಿಎಸ್ಕೆ ಪರ ತಾವು ಆಡಲಿದ್ದಾರೋ ಅಥವಾ ನಿರ್ಗಮನ ಬಯಸುತ್ತಾರೋ ಎಂಬುದನ್ನು ಸ್ವತಃ ಧೋನಿ ಅವರೇ ಸ್ಪಷ್ಟಪಡಿಸಲಿದ್ದಾರೆ ನಿರೀಕ್ಷಿಸಿ" ಎಂದು ಕಾಸಿ ವಿಶ್ವನಾಥನ್ ಹೇಳಿದ್ದಾರೆ,(ಏಜೆನ್ಸೀಸ್).