

ನವದೆಹಲಿ: ಎರಡು ಬಾರಿಯ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಎಂಎಸ್ ಧೋನಿ, ಶೀಘ್ರದಲ್ಲಿಯೇ ಏಕದಿನ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಲಿದ್ದಾರೆ ಎಂದು ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಖಾಸಗಿ ಸಂವಾದ ಕಾರ್ಯಕ್ರಮವೊಂದರಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ ಅವರು, ಐಸಿಸಿಯ ಚತುರ್ದಿನ ಟೆಸ್ಟ್ ಪ್ರಸ್ತಾಪವನ್ನು ಮೂರ್ಖ ನಿರ್ಧಾರ ಎಂದು ಜರಿದರು.
‘ನಾನು ಧೋನಿಯೊಂದಿಗೆ ಮಾತನಾಡಿದ್ದೇನೆ. ಈಗಾಗಲೇ ಅವರು ಟೆಸ್ಟ್ಗೆ ನಿವೃತ್ತಿ ಹೇಳಿದ್ದಾರೆ. ಶೀಘ್ರದಲ್ಲಿಯೇ ಏಕದಿನ ಮಾದರಿಗೂ ನಿವೃತ್ತಿ ಘೋಷಣೆ ಮಾಡುತ್ತಾರೆ. ಈಗಾಗಲೇ ಅವರು ಏಕದಿನ ಮಾದರಿಯ ಕ್ರಿಕೆಟ್ನಲ್ಲಿ ತಮ್ಮ ಆಟವನ್ನು ಮುಗಿಸಿದ್ದಾರೆ’ ಎಂದರು. ಧೋನಿಯ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಬೇಕು. ಒಂದಷ್ಟು ವರ್ಷಗಳ ಕಾಲ ನಿರಂತರವಾಗಿ ಅವರು ಎಲ್ಲ ಮಾದರಿಯ ಕ್ರಿಕೆಟ್ನಲ್ಲೂ ಆಡಿದ್ದರು’ ಎಂದು ಹೇಳಿದ್ದಾರೆ.
ಈ ವಯಸ್ಸಿನಲ್ಲಿ ಅವರು ಒಂದೇ ಮಾದರಿಯಲ್ಲಿ ಆಡಲು ಬಯಸಿದ್ದಾರೆ. ಟಿ20 ಆಡಬೇಕು ಎನ್ನುವುದು ಅವರ ಬಯಕೆ ಆ ಮೂಲಕ ಯುವ ಆಟಗಾರರನ್ನು ಬೆಳೆಸಬೇಕು ಎನ್ನುವ ಆಸೆಯಲ್ಲಿದ್ದಾರೆ. ಐಪಿಎಲ್ನಲ್ಲಿ ಆಡುವ ವೇಳೆ ತಮ್ಮ ದೇಹ ಕ್ರಿಕೆಟ್ನ ಪರಿಸ್ಥಿತಿಗೆ ಹೇಗೆ ಒಗ್ಗಿಕೊಳ್ಳುತ್ತದೆ ಎನ್ನುವುದನ್ನು ಅವರು ಅಂದಾಜಿಸಬಹುದು. ಅವರು ಖಂಡಿತವಾಗಿ ಐಪಿಎಲ್ನಲ್ಲಿ ಆಡುತ್ತಾರೆ. ಎಂದಿಗೂ ತಂಡಕ್ಕೆ ಭಾರವಾಗಿ ಇರುವುದನ್ನು ಅವರು ಬಯಸುವುದಿಲ್ಲ. ಐಪಿಎಲ್ನಲ್ಲಿ ಅವರಿಂದ ಉತ್ತಮ ನಿರ್ವಹಣೆ ಬಂದರೆ, ಟಿ20 ವಿಶ್ವಕಪ್ನ ತಂಡಕ್ಕೆ ಆಯ್ಕೆಯಾಗಬಹುದು ಎಂದು ಹೇಳಿದ್ದಾರೆ.
ಧೋನಿಯ ಅನುಭವವನ್ನು ನಾವು ಗಣನೆಗೆ ತೆಗೆದುಕೊಳ್ಳುತ್ತೇವೆ. 5-6ನೇ ಕ್ರಮಾಂಕದಲ್ಲಿ ಅವರು ಉತ್ತಮ ಬ್ಯಾಟ್ಸ್ಮನ್. ಐಪಿಎಲ್ನಲ್ಲಿ ಉತ್ತಮವಾಗಿ ಆಡಿದರೆ, ವಿಶ್ವಕಪ್ ತಂಡದ ರೇಸ್ನಲ್ಲಿ ಇರಲಿದ್ದಾರೆ ಎಂದು ತಿಳಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಭಾರತೀಯರಾಗಿ ಮಾತ್ರವೇ ಯೋಚಿಸಿ. ಹಲವು ಧನಾತ್ಮಕ ಅಂಶಗಳು ಆಗ ಕಾಣುತ್ತವೆ. 18ನೇ ವರ್ಷಕ್ಕೆ ರಾಷ್ಟ್ರೀಯ ತಂಡಕ್ಕೆ ಆರಂಭಿಸಿದಾಗಿನಿಂದಲೂ ಮೊದಲು ನಾನೊಬ್ಬ ಭಾರತೀಯ ಎಂದೇ ಯೋಚನೆ ಮಾಡುತ್ತೇನೆ. ನಾನು ರಾಜ್ಯದವನು, ಈ ರಾಜ್ಯದವನು ಎಂದೆಲ್ಲ ಯೋಚನೆ ಮಾಡಬೇಡಿ. | ರವಿಶಾಸ್ತ್ರಿ ಭಾರತ ತಂಡದ ಕೋಚ್