ನಿವೃತ್ತಿ ಬೆನ್ನಲ್ಲೇ ಲೆಜೆಂಡ್ಸ್ ಲೀಗ್‌ಗೆ ಸಜ್ಜಾದ ಧವನ್

New-Project-1-9
Published on

ನವದೆಹಲಿ: ಶನಿವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಟೀಮ್ ಇಂಡಿಯಾದ ಎಡಗೈ ಆರಂಭಿಕ ಶಿಖರ್ ಧವನ್, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್‌ಎಲ್‌ಸಿ) ಟೂರ್ನಿಯಲ್ಲಿ ಕಣಕ್ಕಿಳಿಯುವುದಾಗಿ ಪ್ರಕಟಿಸಿದ್ದಾರೆ. ಇದರೊಂದಿಗೆ ಐಪಿಎಲ್ ಸೇರಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಖಾತ್ರಿಪಡಿಸಿದ್ದಾರೆ.

ನನ್ನ ದೇಹ ಇನ್ನೂ ಕ್ರಿಕೆಟ್ ಆಡುವ ಸ್ಥಿತಿಯನ್ನು ಹೊಂದಿದ್ದು, ನನ್ನ ನಿರ್ಧಾರದಿಂದ ನಿರಾಳವಾಗಿದ್ದೇನೆ. ನನ್ನಿಂದ ಕ್ರಿಕೆಟ್ ಅನ್ನು ದೂರ ಮಾಡುವುದು ಅಸಾಧ್ಯ. ನನ್ನ ಹಳೆಯ ಸ್ನೇಹಿತರ ಜತೆಗೂಡಿ ಮರಳಿ ಕಣಕ್ಕಿಳಿಯಲು ಉತ್ಸುಕನಾಗಿದ್ದು, ನಾವೆಲ್ಲರೂ ಹೊಸ ನೆನಪುಗಳನ್ನು ಸೃಷ್ಟಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿರುವುದಾಗಿ 38 ವರ್ಷದ ಧವನ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಲೆಜೆಂಡ್ಸ್ ಲೀಗ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಆಟಗಾರರು ಆಡಲಿದ್ದು, 2023ರ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಸೇರಿ ರ್ಇಾನ್ ಪಠಾಣ್, ಹರ್ಭಜನ್ ಸಿಂಗ್, ಹಾಶಿಂ ಆಮ್ಲ, ಮುನ್ಾ ಪಟೇಲ್ ಮುಂತಾದ ಮಾಜಿ ಕ್ರಿಕೆಟಿಗರು ಆಡಿದ್ದರು. ಟೀಮ್ ಇಂಡಿಯಾ ಪರ 34 ಟೆಸ್ಟ್, 167 ಏಕದಿನ ಹಾಗೂ 68 ಟಿ20 ಆಡಿರುವ ಧವನ್, 10 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ.

ನಿವೃತ್ತಿ ನಿರ್ಧಾರದ ವೇಳೆ ಧವನ್ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವುದಾಗಿ ಮಾತ್ರ ಹೇಳಿದ್ದರು. ಆದರೆ ಈಗ ಲೆಜೆಂಡ್ಸ್ ಲೀಗ್‌ಗೆ ಸೇರ್ಪಡೆಗೊಂಡಿರುವುದರಿಂದ ಅವರು ಐಪಿಎಲ್‌ನಿಂದಲೂ ಹೊರಬಿದ್ದಂತಾಗಿದೆ. ಯಾಕೆಂದರೆ ಬಿಸಿಸಿಐ ಮಾನ್ಯತೆ ರಹಿತ ಲೀಗ್‌ಗಳಲ್ಲಿ ಆಡುವ ಆಟಗಾರರು ಐಪಿಎಲ್‌ನಲ್ಲಿ ಆಡಲು ಅವಕಾಶವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net