ಧರ್ಮಶಾಲಾದಲ್ಲಿ ದಾಖಲೆಗಳ ಧಮಾಕಾ ನಿರೀಕ್ಷೆ; ಔಪಚಾರಿಕವಾಗಿದ್ದರೂ ಕುತೂಹಲ ಕೆರಳಿಸಿದೆ ಕೊನೇ ಟೆಸ್ಟ್​

ind records web
Published on

ಧರ್ಮಶಾಲಾ: ಭಾರತ ತಂಡ ರಾಂಚಿಯಲ್ಲಿ ನಡೆದ 4ನೇ ಪಂದ್ಯದಲ್ಲೇ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯನ್ನು ಗೆದ್ದುಕೊಂಡಿದೆ. ಹೀಗಾಗಿ ಗುರುವಾರದಿಂದ ಎಚ್​ಪಿಸಿಎ ಸ್ಟೇಡಿಯಂನಲ್ಲಿ ಗುರುವಾರದಿಂದ ನಡೆಯಲಿರುವ ಸರಣಿಯ 5ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯ ಔಪಚಾರಿಕವೆನಿಸಿದೆ. ಹಲವು ಕ್ರಿಕೆಟ್​ ದಾಖಲೆಗಳ ದೃಷ್ಟಿಯಿಂದ ಈ ಪಂದ್ಯ ಹೆಚ್ಚಿನ ಮಹತ್ವವನ್ನೇ ಪಡೆದುಕೊಂಡಿದೆ. ಧರ್ಮಶಾಲಾದಲ್ಲಿ ದಾಖಲಾಗಬಹುದಾದ ಅಂಥ ಕೆಲ ವಿಶೇಷ ದಾಖಲೆಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಗಾವಸ್ಕರ್​ ಸಾಧನೆಯತ್ತ ಜೈಸ್ವಾಲ್​

ಸರಣಿಯಲ್ಲಿ ಇದುವರೆಗೆ ಸರ್ವಾಧಿಕ 655 ರನ್​ ಸಿಡಿಸಿರುವ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್​, ಟೆಸ್ಟ್​ ಸರಣಿಯೊಂದರಲ್ಲಿ 700 ರನ್​ ಬಾರಿಸಿದ 2ನೇ ಭಾರತೀಯರೆನಿಸುವ ಅವಕಾಶ ಹೊಂದಿದ್ದಾರೆ. ಸುನೀಲ್​ ಗಾವಸ್ಕರ್​ ಇದುವರೆಗೆ ಈ ಸಾಧನೆ ಮಾಡಿದ ಏಕೈಕ ಭಾರತೀಯರಾಗಿದ್ದು, 2 ಬಾರಿ ಈ ಸಾಧನೆ ಮಾಡಿರುವುದು ವಿಶೇಷ. 1970ರಲ್ಲಿ ವಿಂಡೀಸ್​ ವಿರುದ್ಧದ ಸರಣಿಯಲ್ಲಿ ಗಾವಸ್ಕರ್​ 774 ರನ್​ ಬಾರಿಸಿದ್ದು ಭಾರತೀಯ ದಾಖಲೆಯಾಗಿದೆ. ನಂತರ 1978-79ರಲ್ಲಿ ಮತ್ತೆ ವಿಂಡೀಸ್​ ವಿರುದ್ಧವೇ 732 ರನ್​ ಸಿಡಿಸಿದ್ದರು. ಧರ್ಮಶಾಲಾದಲ್ಲಿ 120 ರನ್​ ಬಾರಿಸಿದರೆ ಜೈಸ್ವಾಲ್​, ಗಾವಸ್ಕರ್​ರನ್ನೂ ಹಿಂದಿಕ್ಕಿ ಭಾರತ ಪರ ಸರಣಿಯೊಂದರಲ್ಲಿ ಗರಿಷ್ಠ ರನ್​ ಬಾರಿಸಿದ ಬ್ಯಾಟರ್​ ಎನಿಸಲಿದ್ದಾರೆ. ಅಲ್ಲದೆ, 135 ರನ್​ ಗಳಿಸಿದರೆ, ಸರಣಿಯೊಂದರಲ್ಲಿ 800 ರನ್​ ಬಾರಿಸಿದ ಮೊದಲ ಭಾರತೀಯ ಎನಿಸಲಿದ್ದಾರೆ. ವಿರಾಟ್​ ಕೊಹ್ಲಿ ಇಂಗ್ಲೆಂಡ್​ ವಿರುದ್ಧದ ಸರಣಿಯೊಂದರಲ್ಲಿ ಸರ್ವಾಧಿಕ 655 ರನ್​ ಗಳಿಸಿದ ಸಾಧನೆಯನ್ನು ಜೈಸ್ವಾಲ್​ ಈಗಾಗಲೆ ಸರಿಗಟ್ಟಿದ್ದಾರೆ. ಜೈಸ್ವಾಲ್​ 125 ರನ್​ ಗಳಿಸಿದರೆ ಭಾರತದಲ್ಲಿನ ಟೆಸ್ಟ್​ ಸರಣಿಯೊಂದರಲ್ಲಿ ಸರ್ವಾಧಿಕ 779 ರನ್​ ಗಳಿಸಿದ ವೆಸ್ಟ್​ ಇಂಡೀಸ್​ನ ಎವರ್ಟನ್​ ವೀಕ್ಸ್​ ಅವರ (1948-49) 75 ವರ್ಷ ಹಿಂದಿನ ದಾಖಲೆಯನ್ನೂ ಮುರಿಯಬಹುದಾಗಿದೆ.

700 ವಿಕೆಟ್​ ಬೇಟಯತ್ತ ಆಂಡರ್​ಸನ್​

ಇಂಗ್ಲೆಂಡ್​ ವೇಗಿ ಜೇಮ್ಸ್​ ಆಂಡರ್​ಸನ್​ ಧರ್ಮಶಾಲಾದಲ್ಲಿ 2 ವಿಕೆಟ್​ ಕಿತ್ತರೆ, ಟೆಸ್ಟ್​ ಕ್ರಿಕೆಟ್​ನಲ್ಲಿ 700 ವಿಕೆಟ್​ ಸಂಪಾದಿಸಿದ 3ನೇ ಬೌಲರ್​ ಮತ್ತು ಮೊದಲ ವೇಗಿ ಎನಿಸಲಿದ್ದಾರೆ. ಮುತ್ತಯ್ಯ ಮುರಳೀಧರನ್​ (800) ಮತ್ತು ಶೇನ್​ ವಾರ್ನ್​ (708) ಮೊದಲಿಬ್ಬರು ಸಾಧಕರು. ಆಂಡರ್​ಸನ್​ ಸದ್ಯ 186 ಟೆಸ್ಟ್​ಗಳಲ್ಲಿ 698 ವಿಕೆಟ್​ ಕಬಳಿಸಿದ್ದಾರೆ. ಕರ್ಟ್ನಿ ವಾಲ್ಶ್​ (43) ಅವರನ್ನು ಹಿಂದಿಕ್ಕಿ ಭಾರತದಲ್ಲಿ ಗರಿಷ್ಠ ವಿಕೆಟ್​ ಕಬಳಿಸಿದ ವಿದೇಶಿ ವೇಗಿ ಎನಿಸುವ ಅವಕಾಶವನ್ನೂ ಆಂಡರ್​ಸನ್​ (42) ಹೊಂದಿದ್ದಾರೆ.

112 ವರ್ಷಗಳ ಹಿಂದಿನ ವಿಶಿಷ್ಟ ಸಾಧನೆ ಸರಿಗಟ್ಟುವ ಅವಕಾಶ

ಭಾರತ ತಂಡ ಧರ್ಮಶಾಲದಲ್ಲಿ ಗೆದ್ದರೆ 112 ವರ್ಷ ಹಿಂದಿನ ವಿಶಿಷ್ಟ ಸಾಧನೆಯೊಂದನ್ನು ಸರಿಗಟ್ಟಲಿದೆ. 1912ರಲ್ಲಿ ಇಂಗ್ಲೆಂಡ್​ ತಂಡ ಆಸೀಸ್​ ಎದುರು ಸರಣಿಯ ಮೊದಲ ಟೆಸ್ಟ್​ ಸೋತ ಬಳಿಕ ಸತತ 4 ಟೆಸ್ಟ್​ ಗೆದ್ದಿತ್ತು. ಭಾರತವೂ ಈಗ ಸರಣಿಯ ಮೊದಲ ಟೆಸ್ಟ್​ ಸೋಲಿನ ಬಳಿಕ ಸತತ 4ನೇ ಜಯದ ನಿರೀೆಯಲ್ಲಿದೆ. 1897-98 ಮತ್ತು 1901-02ರಲ್ಲಿ ಆಸೀಸ್​ ತಂಡವೂ ಇಂಗ್ಲೆಂಡ್​ ವಿರುದ್ಧ ಮೊದಲ ಟೆಸ್ಟ್​ ಸೋತ ಬಳಿಕ ಸತತ 4 ಟೆಸ್ಟ್​ ಗೆದ್ದಿತ್ತು.

ಭಾರತದ ಸೋಲು-ಗೆಲುವು ಸಮ!

ಭಾರತ ತಂಡ ಧರ್ಮಶಾಲಾದಲ್ಲಿ ಗೆದ್ದರೆ ಟೆಸ್ಟ್​ ಕ್ರಿಕೆಟ್​ನಲ್ಲಿ ಸೋಲು&ಗೆಲುವಿನ ಸಂಖ್ಯೆ ಸಮನಾಗಲಿದೆ. 1932ರಿಂದ ಇದುವರೆಗೆ ಆಡಿರುವ 578 ಟೆಸ್ಟ್​ಗಳಲ್ಲಿ ಭಾರತ ಸದ್ಯ 177ರಲ್ಲಿ ಗೆದ್ದಿದ್ದು, 178ರಲ್ಲಿ ಸೋತಿದೆ. ಧರ್ಮಶಾಲಾದಲ್ಲಿ ಗೆದ್ದರೆ ತಲಾ 178 ಸೋಲು&ಗೆಲುವು ಕಂಡಂತಾಗುತ್ತದೆ. 222 ಟೆಸ್ಟ್​ಗಳಲ್ಲಿ ಭಾರತ ಡ್ರಾ ಸಾಧಿಸಿದ್ದು, 1 ಟೆಸ್ಟ್​ ಟೈಗೊಂಡಿದೆ. 2000ದವರೆಗೆ 336 ಟೆಸ್ಟ್​ಗಳಲ್ಲಿ 63ರಲ್ಲಷ್ಟೇ ಗೆದ್ದಿದ್ದ ಭಾರತ, 2001ರಿಂದ ಇದುವರೆಗೆ 242ರಲ್ಲಿ 116 ಟೆಸ್ಟ್​ ಜಯಿಸಿದೆ. 2000ದವರೆಗೆ 112 ಟೆಸ್ಟ್​ ಸೋತಿದ್ದ ಭಾರತ, ನಂತರದಲ್ಲಿ 66 ಟೆಸ್ಟ್​ಗಳಲ್ಲಷ್ಟೇ ಸೋತಿದೆ. ಇದು ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತದ ಪ್ರಗತಿಯ ಸಂಕೇತವಾಗಿದೆ.

300ರತ್ತ ರವೀಂದ್ರ ಜಡೇಜಾ

ರವೀಂದ್ರ ಜಡೇಜಾ (292) ಧರ್ಮಶಾಲಾದಲ್ಲಿ 8 ವಿಕೆಟ್​ ಕಬಳಿಸಿದರೆ, ಟೆಸ್ಟ್​ ಕ್ರಿಕೆಟ್​ನಲ್ಲಿ 300 ವಿಕೆಟ್​ ಪೂರೈಸಿದ ಭಾರತದ ಮೊದಲ ಮತ್ತು ವಿಶ್ವದ 3ನೇ ಎಡಗೈ ಸ್ಪಿನ್ನರ್​ ಎನಿಸಲಿದ್ದಾರೆ. ಶ್ರೀಲಂಕಾದ ರಂಗನಾ ಹೆರಾತ್​ (433) ಮತ್ತು ನ್ಯೂಜಿಲೆಂಡ್​ನ ಡೇನಿಯಲ್​ ವೆಟ್ಟೋರಿ (362) ಈ ಸಾಧನೆ ಮಾಡಿರುವ ಮೊದಲಿಬ್ಬರು.

ಜೈಸ್ವಾಲ್​ಗೆ ಬ್ರಾಡ್ಮನ್​ ಸರಿಗಟ್ಟುವ ಅವಕಾಶ

ಯಶಸ್ವಿ ಜೈಸ್ವಾಲ್​ ಧರ್ಮಶಾಲಾದಲ್ಲೂ ದ್ವಿಶತಕ ಬಾರಿಸಿದರೆ, ಟೆಸ್ಟ್​ ಸರಣಿಯೊಂದರಲ್ಲಿ 3 ದ್ವಿಶತಕ ಸಿಡಿಸಿದ ಆಸೀಸ್​ ದಿಗ್ಗಜ ಡಾನ್​ ಬ್ರಾಡ್ಮನ್​ರ 94 ವರ್ಷ ಹಳೆಯ ದಾಖಲೆ ಸರಿಗಟ್ಟಲಿದ್ದಾರೆ. ಬ್ರಾಡ್ಮನ್​ 1930ರ ಆಶಸ್​ ಸರಣಿಯಲ್ಲಿ ಇಂಗ್ಲೆಂಡ್​ ವಿರುದ್ಧವೇ ಈ ಸಾಧನೆ ಮಾಡಿದ್ದರು. ಆ ಸರಣಿಯಲ್ಲಿ ಬ್ರಾಡ್ಮನ್​ 974 ರನ್​ ಸಿಡಿಸಿದ್ದು ವಿಶ್ವದಾಖಲೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net