

ಬೆಂಗಳೂರು: ಕರ್ನಾಟಕದ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕಲ್ ಐಪಿಎಲ್ನಲ್ಲಿ 3 ಅರ್ಧಶತಕ ಸಿಡಿಸಿ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಅದರಲ್ಲೂ ಶನಿವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್ಸಿಬಿ ಗೆಲುವಿಗೆ ನೆರವಾದ ಪಡಿಕಲ್ ಆಟಕ್ಕೆ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಕೂಡ ಬೋಲ್ಡ್ ಆಗಿದ್ದಾರೆ. ತಮ್ಮಂತೆಯೇ ಎಡಗೈ ಬ್ಯಾಟ್ಸ್ಮನ್ ಆಗಿರುವ ಪಡಿಕಲ್ಗೆ ಯುವಿ ಸವಾಲು ಒಂದನ್ನು ಕೂಡ ಎಸೆದಿದ್ದಾರೆ. ಅದಕ್ಕೆ ಕನ್ನಡಿಗನಿಂದ ಉತ್ತರವೂ ಬಂದಿದೆ.
ಆರ್ಸಿಬಿ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಆಟಕ್ಕೆ 'ಫಾರ್ಮ್ ತಾತ್ಕಾಲಿಕ, ಕ್ಲಾಸ್ ಶಾಶ್ವತ' ಎಂದಿರುವ ಯುವರಾಜ್, ಕಳೆದ 8 ವರ್ಷಗಳಲ್ಲಿ ಕೊಹ್ಲಿ ಫಾರ್ಮ್ನಲ್ಲಿ ಇಲ್ಲದ್ದನ್ನು ನೋಡೇ ಇರಲಿಲ್ಲ ಎಂದು ಟ್ವೀಟ್ ಮಾಡಿದ್ದರು. ಅದರ ಜತೆಗೆ ಪಡಿಕಲ್ ಆಟವನ್ನು ಮೆಚ್ಚುತ್ತ, ಈ ಹುಡುಗನ ಆಟವೂ ಅತ್ಯುತ್ತಮವಾಗಿದೆ. ನಾವಿಬ್ಬರು ಜತೆಯಾಗಿ ಬ್ಯಾಟಿಂಗ್ ಮಾಡಬೇಕಿದೆ ಮತ್ತು ಯಾರು ಅತಿ ಹೆಚ್ಚು ದೂರ ಚೆಂಡನ್ನು ಬಾರಿಸುತ್ತಾರೆ ಎಂದು ನೋಡಬೇಕಿದೆ ಎಂದಿದ್ದರು.
ಯುವರಾಜ್ ಈ ರೀತಿ ಸವಾಲು ಎಸೆದ ಬೆನ್ನಲ್ಲೇ ಅದಕ್ಕೆ ಪ್ರತಿಕ್ರಿಯೆ ನೀಡಿರುವ 20 ವರ್ಷದ ಪಡಿಕಲ್, 'ಪಾಜಿ ಖಂಡಿತವಾಗಿಯೂ ನಾನು ನಿಮ್ಮೊಂದಿಗೆ ಸ್ಪರ್ಧಿಸುತ್ತಿಲ್ಲ. ನಿಮ್ಮಿಂದಲೇ ನಾನು ಫ್ಲಿಕ್ ಮಾಡುವುದನ್ನು ಕಲಿತಿರುವೆ. ಯಾವಾಗಲೂ ನಿಮ್ಮೊಂದಿಗೆ ಬ್ಯಾಟಿಂಗ್ ಮಾಡಲು ಬಯಸಿರುವೆ. ಬನ್ನಿ ಹೋಗೋಣ' ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಪಡಿಕಲ್ ಆಡಿರುವ ಟೂರ್ನಿಯ 4 ಪಂದ್ಯಗಳಲ್ಲಿ ಇದುವರೆಗೆ 174 ರನ್ ಪೇರಿಸಿದ್ದಾರೆ. ಪಂಜಾಬ್ ಆಟಗಾರ ಯುವಿ ಜತೆಗೆ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ಪಡಿಕಲ್ ಆಟವನ್ನು ಮೆಚ್ಚಿದ್ದು, ಪಡಿಕಲ್ ಬ್ಯಾಟಿಂಗ್ ಮತ್ತೊಮ್ಮೆ ಪ್ರಭಾವ ಬೀರಿತು ಎಂದು ಟ್ವೀಟಿಸಿದ್ದಾರೆ. ಈ ಮುನ್ನ ಪಡಿಕಲ್ ಐಪಿಎಲ್ ಪದಾರ್ಪಣೆಯ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಮಿಂಚಿದಾಗ, ಟೀಮ್ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ಎಡಗೈ ಬ್ಯಾಟ್ಸ್ಮನ್ ಕೂಡ ಆಗಿರುವ ಸೌರವ್ ಗಂಗೂಲಿ ಕೂಡ ಅವರ ಆಟವನ್ನು ಶ್ಲಾಘಿಸಿದ್ದರು.