ಆರ್‌ಸಿಬಿಗೂ ತಟ್ಟಿದ ಕೋವಿಡ್-19, ದೇವದತ್ ಪಡಿಕಲ್‌ಗೆ ವೈರಸ್

padikal for web
Published on

ನವದೆಹಲಿ: ಮಹಾಮಾರಿ ಕರೊನಾ ವೈರಸ್‌ನ ಎರಡನೇ ಅಲೆ ದಿನದಿಂದ ದಿನಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಯೋಜಕರ ನಿದ್ದೆಗೆಡಿಸುತ್ತಿದೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್‌ಗೂ ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿದೆ. ಮಾರ್ಚ್ 22 ರಂದು ದೇವದತ್ ಪಡಿಕಲ್‌ಗೆ ಕರೊನಾ ವೈರಸ್ ಕಾಣಿಸಿಕೊಂಡಿದ್ದು, ಬೆಂಗಳೂರಿನ ನಿವಾಸದಲ್ಲೆ ಐಸೋಲೇಷನ್‌ಗೆ ಒಳಗಾಗಿದ್ದಾರೆ. ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಗಳು ನೆಗೆಟಿವ್ ಬಂದ ಬಳಿಕ ದೇವದತ್ ಆರ್‌ಸಿಬಿ ಬಯೋ ಬಬಲ್‌ಗೆ ಪ್ರವೇಶಿಸಲಿದ್ದಾರೆ.

ಆರ್‌ಸಿಬಿ ವೈದ್ಯಕೀಯ ತಂಡ ದೇವದತ್ ಪಡಿಕಲ್ ಜತೆ ಸಂಪರ್ಕದಲ್ಲಿದ್ದು, ಸೂಕ್ತ ಮಾರ್ಗದರ್ಶನ ನೀಡುತ್ತಿದೆ. ದೇವದತ್ ಆರೋಗ್ಯ ಸುಧಾರಣೆ ಕಾಣುತ್ತಿದ್ದು ಶೀಘ್ರವೇ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಆರ್‌ಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ. ಇದರೊಂದಿಗೆ ಕರೊನಾ ಪಾಸಿಟಿವ್‌ಗೆ ಒಳಗಾಗಿರುವ ಐಪಿಎಲ್ ಆಟಗಾರರ ಸಂಖ್ಯೆ ಮೂರಕ್ಕೇರಿದೆ. ಕೆಕೆಆರ್ ತಂಡ ನಿತೀಶ್ ರಾಣಾ ಕೋವಿಡ್-19 ರಿಂದ ಚೇತರಿಸಿಕೊಂಡು ಅಭ್ಯಾಸ ಆರಂಭಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಲ್ರೌಂಡರ್ ಅಕ್ಷರ್ ಪಟೇಲ್‌ಗೆ ಶನಿವಾರವಷ್ಟೇ ಕೋವಿಡ್-19 ಕಾಣಿಸಿಕೊಂಡಿದೆ. ದೇವದತ್ ಪಡಿಕಲ್‌ಗೆ ಕೋವಿಡ್-19 ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏಪ್ರಿಲ್ 9 ರಂದು ಚೆನ್ನೈನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ಲೀಗ್‌ನ ಉದ್ಘಾಟನಾ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಗಳಿವೆ.

20 ವರ್ಷದ ಪಡಿಕಲ್, ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರ ಅತಿಹೆಚ್ಚು ರನ್ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿದ್ದರು. 15 ಪಂದ್ಯಗಳಿಂದ 473 ರನ್ ಕಲೆಹಾಕಿದ್ದರು. ಅಲ್ಲದೆ, ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲೂ ರನ್‌ಹೊಳೆಯನ್ನೇ ಹರಿಸಿದ್ದರು. ಐಪಿಎಲ್ ಇತಿಹಾಸದಲ್ಲಿ ಪದಾರ್ಪಣೆ ಆವೃತ್ತಿಯಲ್ಲಿ 400ಕ್ಕೂ ಅಧಿಕ ರನ್ ಪೇರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net