ಪುತ್ರಿ-ಪಿತೃ ಶೋಕದ ನಡುವೆ ತಂಡದಲ್ಲೇ ಉಳಿದ ಬರೋಡ ರಣಜಿ ಆಟಗಾರ

vishnu solanki for web
Published on

ವಡೋದರ: ನವಜಾತ ಶಿಶು ಸಾವಿನ ನಡುವೆಯೂ ಕಳೆದ ವಾರವಷ್ಟೇ ರಣಜಿ ಟ್ರೋಫಿ ಆಡಲು ಆಗಮಿಸಿದ ಬರೋಡದ ಆಟಗಾರ ವಿಷ್ಣು ಸೋಲಂಕಿಗೆ ಮತ್ತೊಂದು ಆಘಾತ ಎದುರಾಗಿದೆ. ವಿಷ್ಣು ಸೋಲಂಕಿ ಅವರ ತಂದೆ ಭಾನುವಾರ ನಿಧನರಾದರೂ ಅವರು ಮಾತ್ರ ತಂಡದಲ್ಲೇ ಮುಂದುವರಿಯಲು ನಿರ್ಧರಿಸಿದ್ದಾರೆ. ಈ ಎರಡು ದುರಂತದ ನಡುವೆಯೂ ತಂಡಕ್ಕಾಗಿ ಆಡಲು ವಿಷ್ಣು ಸೋಲಂಕಿ ಮುಂದಾಗಿದ್ದಾರೆ. ‘ಕಡೇ ಸುತ್ತಿನ ಪಂದ್ಯದಲ್ಲಿ ವಿಷ್ಣು ಆಡಲಿದ್ದಾರೆ. ಅವರು ತವರಿಗೆ ವಾಪಸಾಗುತ್ತಿಲ್ಲ. ಅವರು ತಂಡದಲ್ಲೇ ಉಳಿಯಲು ತೀರ್ಮಾನಿಸಿದ್ದಾರೆ’ ಎಂದು ಬರೋಡ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅಜಿತ್ ಲೆಲೆ ತಿಳಿಸಿದ್ದಾರೆ.

29 ವರ್ಷದ ವಿಷ್ಣು, ಫೆಬ್ರವರಿ 10 ರಂದು ಹೆಣ್ಣು ಮಗುವಿನ ತಂದೆಯಾಗಿದ್ದರು.ಆದರೆ, ಮಗು ಜನಿಸಿದ ಮರು ದಿನವೇ ತೀರಿಕೊಂಡಿತ್ತು. ಇದರ ನಡುವೆಯೂ ತಂಡದ ಪರ ಆಡಲು ಆಗಮಿಸಿದರು. ಚಂಡೀಗಢ ಎದುರು ಭಾನುವಾರ 104 ರನ್ ಸಿಡಿಸಿದ ಬಳಿಕ ತಂದೆ ಮರಣದ ಸುದ್ದಿಯೂ ತಲುಪಿತು. ‘ಮಗಳು ತೀರಿಕೊಂಡರೂ ಬರೋಡ ತಂಡ ಕೂಡಿಕೊಂಡ ವಿಷ್ಣು, 3 ದಿನಗಳ ಕ್ವಾರಂಟೈನ್‌ನಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ತಂದೆ ಸಾವಿನ ನಡುವೆಯೂ ತಂಡದ ಜತೆ ಉಳಿಯಲಿದ್ದಾರೆ’ ಎಂದು ಬಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಬರೋಡ ತಂಡ ಎಲೈಟ್ ಬಿ ಗುಂಪಿನಲ್ಲಿ ಹೈದರಾಬಾದ್ ತಂಢವನ್ನು ಮಾರ್ಚ್ 3 ರಿಂದ ಭುವನೇಶ್ವರದಲ್ಲಿ ಎದುರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net