ಷಟ್ಲರ್ ಅಜಯ್ ಜಯರಾಮ್‌ಗೆ ಬ್ರಿಟಿಷ್ ಏರ್ ವೇಸ್ ಪ್ರವೇಶ ನಿರಾಕರಿಸಿದ್ಯಾಕೆ..?

ajay jayaram for web.jpg new
Published on

ನವದೆಹಲಿ: ಭಾರತದ ಷಟ್ಲರ್ ಅಜಯ್ ಜಯರಾಮ್ ಲಂಡನ್‌ಗೆ ತೆರಳಲು ಬ್ರಿಟಿಷ್ ಏರ್‌ವೇಸ್ ಪ್ರವೇಶ ನಿರಾಕರಿಸಿದ ಘಟನೆ ಜರುಗಿದೆ. ಮುಂದಿನ ವಾರ ನಡೆಯಲಿರುವ ಡೆನ್ಮಾರ್ಕ್ ಓಪನ್ ಬಿಡಬ್ಲ್ಯುಎಫ್ ಸೂಪರ್-750 ಟೂರ್ನಿಯಲ್ಲಿ ಭಾಗವಹಿಸುವ ಸಲುವಾಗಿ ಅಜಯ್ ಜಯರಾಮ್ ಡೆನ್ಮಾರ್ಕ್‌ಗೆ ತೆರಳಬೇಕಿತ್ತು. ಮಾಜಿ ವಿಶ್ವ ನಂ.13 ಅಜಯ್, ಬೆಂಗಳೂರು-ಲಂಡನ್ ಬ್ರಿಟಿಷ್ ಏರ್‌ವೇಸ್‌ನಲ್ಲಿ ಶುಕ್ರವಾರ ಬೆಳಗ್ಗೆ ಪ್ರಯಾಣ ಬೆಳೆಸಬೇಕಿತ್ತು. ಯುಕೆ ವೀಸಾ ಪಡೆಯದೇ ತೆರಳಿದ ಹಿನ್ನೆಲೆಯಲ್ಲಿ ವಿಮಾನ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ. ಇದೀಗ ಡೆನ್ಮಾರ್ಕ್‌ಗೆ ಪ್ರಯಾಣ ಬೆಳೆಸಲು ಸಹಾಯಕ ಮಾಡುವಂತೆ ಸರ್ಕಾರದ ಮೊರೆ ಹೋಗಿದ್ದಾರೆ. 33 ವರ್ಷದ ಅಜಯ್ ಜಯರಾಮ್ ಏರ್ ಫ್ರಾನ್ಸ್‌ನಲ್ಲಿ ಟಿಕೆಟ್ ಬುಕ್ ಮಾಡಿರುವುದಾಗಿ ಹೇಳಿದ್ದಾರೆ.

ಬೆಂಗಳೂರಿನಿಂದ ಕಳೆದ ರಾತ್ರಿ ಏರ್ ಫ್ರಾನ್ಸ್ ವಿಮಾನ ಇಲ್ಲದ ಕಾರಣ, ಬ್ರಿಟಿಷ್ ಏರ್‌ವೇಸ್ ಮೂಲಕ ಟಿಕೆಟ್ ಬುಕ್ ಮಾಡಿದೆ. ತಂಡದ ಇತರ ಆಟಗಾರರು ದೆಹಲಿಯಿಂದ ಪ್ರಯಾಣ ಬೆಳೆಸುತ್ತಿದ್ದರು. ಯುಕೆಗೆ ವಿಶೇಷ ಏರ್-ಬಬಲ್ ವಿಮಾನ ಬ್ರಿಟಿಷ್ ಏರ್‌ವೇಸ್ ವ್ಯವಸ್ಥೆ ಮಾಡಲಾಗಿದೆ. ನನ್ನ ಬಳಿ ಯುಕೆ ವೀಸಾ ಇರದ ಕಾರಣ ಪ್ರವೇಶ ನೀಡಲಿಲ್ಲ ಎಂದು ಅಜಯ್ ಹೇಳಿಕೊಂಡಿದ್ದಾರೆ. ಯುಕೆನಲ್ಲಿ ಕೋವಿಡ್-19ರ ಶಿಷ್ಟಾಚಾರ ಸಾಕಷ್ಟು ಕಠಿಣವಾಗಿದ್ದು, ಲಂಡನ್‌ನಲ್ಲಿ ಕ್ವಾರಂಟೈನ್ ಕಡ್ಡಾಯವಾಗಿದೆ. ಇತರ ಆಟಗಾರರಾದ ಲಕ್ಷ್ಯ ಸೇನ್, ಕೆ.ಶ್ರೀಕಾಂತ್, ಶುಭಾಂಕರ್ ಡೇ ಗುರುವಾರ ರಾತ್ರಿ ನವದೆಹಲಿ ಮಾರ್ಗವಾಗಿ ಡೆನ್ಮಾರ್ಕ್‌ಗೆ ಪ್ರಯಾಣ ಬೆಳೆಸಿದರು.

ನಾನೀಗ ಏರ್ ಫ್ರಾನ್ಸ್ ವಿಮಾನದ ಟಿಕೆಟ್ ಬುಕ್ ಮಾಡಿರುವೆ. ಆದರೆ, ಏರ್‌ಲೈನ್ಸ್‌ನಲ್ಲಿ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಸಿ ವೀಸಾ, ಕೋವಿಡ್-19 ನೆಗೆಟಿವ್, ಡೆನ್ಮಾರ್ಕ್‌ನ ಕೌನ್ಸೆಲ್ಲರ್ ಇ-ಮೇಲ್ ದಾಖಲೆಗಳು ನನ್ನ ಬಳಿಯಿವೆ ಎಂದು ಅಜಯ್ ಜಯರಾಮ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ಕಿರಣ್ ರಿಜಿಜು, ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್, ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಗಳಿಗೆ ಟ್ವೀಟ್ ಮಾಡಿ ಸಹಾಯ ಕೋರಿದ್ದರು. ಡೆನ್ಮಾರ್ಕ್‌ನ ಒಡೆನ್ಸೆಯಲ್ಲಿ ಅಕ್ಟೋಬರ್ 13 ರಿಂದ 18ರವರೆಗೆ ಟೂರ್ನಿ ನಡೆಯಲಿದ್ದು, ಕರೊನಾ ಕಾಲದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net